ಲಾಕ್‌ಡೌನ್‌ ಸಮಯದಲ್ಲಿ ಹುಟ್ಟಿದ ಪ್ರೀತಿ – ಲವ್ ಇನ್ ಲಾಕ್ ಡೌನ್ ಚಿತ್ರಕ್ಕೆ ಚಾಲನೆ

ಹೊಸಬರ ಪ್ರೀತಿಯ ಕಥೆ ವ್ಯಥೆ

 

ಲಾಕ್‌ಡೌನ್‌ ಸಮಯದಲ್ಲಿ ಹೆಚ್ಚು ಉಪಯೋಗವಾಗಿದ್ದು ಆನ್ನುವುದಾದರೆ ಅದು ಸಿನಿಮಾ ಮಂದಿಗೆ. ಹೌದು, ಈ ಸಮಯದಲ್ಲಿ ಸಾಕಷ್ಟು ಜನ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಒಂದೊಳ್ಳೆಯ ಸ್ಕ್ರಿಪ್ಟ್‌ ಮಾಡಿಕೊಂಡಿದ್ದುಂಟು. ಅಷ್ಟೇ ಅಲ್ಲ, ಬಹುತೇಕರು ಆ ಸಮಯದಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡೋಕೆ ಮುಂದಾಗಿದ್ದು ಹೌದು. “ಕೊರೊನಾ” ಕುರಿತ ಕಥೆ ಹೆಣೆದ ಜನ ಒಂದಷ್ಟು ಇದ್ದರೆ, ಲಾಕ್‌ಡೌನ್‌ ಸಮಯದಲ್ಲಿ ಆದಂತಹ ಸಮಸ್ಯೆಗಳ ಕುರಿತು ಕಥೆ ಮಾಡಿಕೊಂಡವರು ಒಂದಷ್ಟು ಮಂದಿ ಇದ್ದಾರೆ. ಈಗ ಇಲ್ಲೊಂದು ಹೊಸಬರ ತಂಡ, ಲಾಕ್‌ ಡೌನ್‌ ಸಮಯದಲ್ಲಿ ಆಗುವಂತಹ ಕೆಲ ವಿಷಯಗಳನ್ನು ಇಟ್ಟುಕೊಂಡು ಒಂದು ಕಥೆ ಹೆಣೆದು, ಚಿತ್ರ ಮಾಡಲು ಹೊರಟಿದೆ. ಆ ಚಿತ್ರಕ್ಕೆ “ಲವ್‌ ಇನ್‌ ಲಾಕ್‌ಡೌನ್”‌ ಎಂದು ನಾಮಕರಣ ಮಾಡಿದೆ.


ಚಿತ್ರದ ಶೀರ್ಷಿಕೆಯೇ ಹೇಳಿದಂತೆ, ಇದೊಂದು ಲಾಕ್ ಡೌನ್ ಸಮಯದಲ್ಲಿ ನಡೆದ ದುರಂತ ಪ್ರೇಮಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಲಾಕ್‍ಡೌನ್ ಸಮಯದಲ್ಲಿ ಒಂದಷ್ಟು ಅಪರೂಪದ ಘಟನೆಗಳು ನಡೆದಿದ್ದು, ಆ ವೇಳೆ ನಡೆದ ಒಂದು ಘಟನೆಯೇ ಈ ಚಿತ್ರಕ್ಕೆ ಸ್ಫೂರ್ತಿ ಅನ್ನುವುದು ಚಿತ್ರತಂಡದ ಹೇಳಿಕೆ.


ಅಂದಹಾಗೆ, ಲಾಕ್ ಡೌನ್ ವೇಳೆ ನಡೆದ ಪ್ರೀತಿ, ಪ್ರೇಮ ಪ್ರಣಯದ ಕಥೆಯನ್ನು ತೆರೆಯ ಮೇಲೆ ತರಲು ಹೊರಟಿರೋದು ನಿರ್ದೇಶಕ ಮಂಜುನಾಥ್ ಬಿ.ರಾಮ್. ಶ್ರೀ ಕನ್ನಡಾಂಬೆ ಮೂವೀಸ್ ಬ್ಯಾನರ್ ಅಡಿಯಲ್ಲಿ ಎಂ.ನಾರಾಯಣಸ್ವಾಮಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಮಂಜುನಾಥ್ ಬಿ.ರಾಮ್ ಅವರು ತಾವು ಕಂಡ ಪ್ರೇಮಕಥೆಯೊಂದನ್ನು ಹಾಗು ಅದರ ದುರಂತ ಅಂತ್ಯವನ್ನು ಸಿನಿಮಾ ರೂಪದಲ್ಲಿ ಹೇಳ ಹೊರಟಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಚಿಕ್ಕಬಳ್ಳಾಪುರದ ರಂಗಸ್ಥಳದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮುಹೂರ್ತ ನಡೆದಿದೆ.

ಈಗಾಗಲೇ “ನಾ ಕನ್ನಡಿಗನೆಂದುಕೊಂಡು ಬಾಳು ಮಗಾ..” ಎನ್ನುವ ಗೀತೆಯನ್ನು ಸುಮಾರು 40 ಮಂದಿ ನೃತ್ಯ ಕಲಾವಿದರೊಂದಿಗೆ ಚಿತ್ರೀಕರಿಸಲಾಗಿದೆ. ಇನ್ನು ಈ ಚಿತ್ರದಲ್ಲಿ ಮಂಜುನಾಥ್‌ ಹೀರೋ. ಅವರಿಗೆ ಯಶಸ್ವಿ ನಾಯಕಿ. ಈ ಹಿಂದೆ ಯಶಸ್ವಿ “ಲೆಕ್ಕಾಚಾರ” ಎಂಬ ಚಿತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ “ಕಿಲ್ಲರ್” ವೆಂಕಟೇಶ್, ಬ್ಯಾಂಕ್ ಜನಾರ್ದನ್, ಗಣೇಶ್‍ರಾವ್, ಭಲರಾಮ್ ಪಾಂಚಾಲ, ಪಲ್ಲವಿ ರಾಜೇಂದ್ರ ಇತರರು ನಟಿಸುತ್ತಿದ್ದಾರೆ. ರಮೇಶ್ ಕೊಯಿರಾ ಛಾಯಾಗ್ರಹಣವಿದೆ. ಡ್ಯಾನಿಯಲ್ ಸಂಗೀತ, ಪ್ರಸನ್ನ ನೃತ್ಯವಿದೆ. ಶಿವು ಅವರ ಸಾಹಸ ಹಾಗೂ ರಾಜೀವ್ ಕೃಷ್ಣ ಅವರು ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ, ಗಜೇಂದ್ರಗಡ ಸುತ್ತಮುತ್ತ ಮೂರು ಹಂತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರು ಮಾಡಿಕೊಂಡಿದೆ.

Related Posts

error: Content is protected !!