ವಸಿಷ್ಠ ಅವರೊಳಗಿನ ಗಾಯಕನನ್ನ ಗಮನಿಸಿದ ಸೀಳಿನ್
ಅದು ಯಾವುದೇ ಕ್ಷೇತ್ರ ಇರಬಹುದು. ಸಾಮಾನ್ಯವಾಗಿ ಯಾರೇ ಗುರುತಿಸಿಕೊಂಡರು ಅವರ ಹಿಂದೆ ಒಬ್ಬರು ಸಾಥ್ ಕೊಟ್ಟಿರುತ್ತಾರೆ. ಅವರ ಗೆಲುವಿನ ಹಿಂದಿನ ಶಕ್ತಿಯಾಗಿರುತ್ತಾರೆ. ಒಬ್ಬ ಹೀರೋ ಆದವರು, ನಿರ್ದೇಶಕರಾದವರು, ಕಲಾವಿದರಾದವರು ಹೀಗೆ ಏನೇ ಆಗಿದ್ದರೂ, ಅವರು ಆ ಮಟ್ಟಕ್ಕೆ ಬಂದು ಗುರುತಿಸಿಕೊಳ್ಳಬೇಕಾದರೆ, ಒಬ್ಬರ ಸಹಕಾರ ಇದ್ದೇ ಇರುತ್ತೆ. ಈಗ ಇಲ್ಲಿ ಹೇಳಹೊರಟಿರುವ ವಿಷಯವಿಷ್ಟೆ. ನಾಯಕ ವಸಿಷ್ಠ ಸಿಂಹ ಅವರು ಗಾಯಕ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಅವರ ಖಡಕ್ ವಾಯ್ಸ್ ಹೇಗಿದೆಯೋ ಹಾಗೆಯೇ ಅವರ ಹಾಡಲ್ಲೂ ಅಂಥದ್ದೊಂದು ರಾ ಫೀಲ್ ಸಿಗುತ್ತೆ. ಆ ಕಾರಣಕ್ಕಾಗಿಯೋ ಏನೋ, ಅವರನ್ನು ಗುರುತಿಸಿ ಹಾಡಿಸಿದ್ದೂ ಉಂಟು.
ಅಷ್ಟಕ್ಕೂ ವಸಿಷ್ಠ ಸಿಂಹ ಗಾಯಕ ಆಗೋಕೆ ಕಾರಣ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅನ್ನುವುದು ಅವರ ಮಾತು. ಈ ಕುರಿತು ಸ್ವತಃ ವಸಿಷ್ಠ ಸಿಂಹ ಅವರೇ ಹೇಳಿಕೊಂಡಿದ್ದಾರೆ. ನಾನು ಹಿಂದೊಮ್ಮೆ “ಕಿರಿಕ್ ಪಾರ್ಟಿ” ಚಿತ್ರದಲ್ಲಿ ಧನಂಜಯ್ ರಾಜನ್ ಬರೆದ “ನೀಚ ಸುಳ್ಳು ಸುತ್ತೋ ನಾಲಿಗೆ…” ಹಾಡನ್ನು ಹಾಡಿದ್ದೆ. ಆದರೆ, ಅದೆಷ್ಟೋ ಜನ ವಾಯ್ಸ್ ಹಾಗಿದೆ, ಹೀಗಿದೆ ಅನ್ನೋ ಮಾತುಗಳನ್ನಾಡಿದರು. ಅದು ನನ್ನ ಕಿವಿಗೂ ಬಿತ್ತು. ಆದರೆ, ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಬಂದೆ. “ದಯವಿಟ್ಟು ಗಮನಿಸಿ” ಚಿತ್ರದಲ್ಲಿ ಅನೂಪ್ ಸೀಳಿನ್ ಕೆಲಸ ಮಾಡುವಾಗ, ಜಯಂತ್ ಕಾಯ್ಕಿಣಿ ಅವರು ಅ ಚಿತ್ರಕ್ಕೆ ಬರೆದ ಸಾಹಿತ್ಯ ಅದ್ಭುತವಾಗಿತ್ತು. ಆ ಹಾಡಿಗೆ ಫ್ರೆಶ್ ವಾಯ್ಸ್ ಇದ್ದರೆ ಚೆನ್ನಾಗಿರುತ್ತೆ ಅಂದುಕೊಂಡಿದ್ದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಅಂಥದ್ದೊಂದು ವಾಯ್ಸ್‌ಗೆ ಹುಡುಕಾಟ ನಡೆಸಿದ್ದರಂತೆ.
ಆ ವಿಷಯ ಆ ಚಿತ್ರದಲ್ಲಿ ನಟಿಸಿದ್ದ ವಸಿಷ್ಠ ಸಿಂಹ ಅವರ ಕಿವಿಗೆ ಬಿದ್ದಾಗ, ವಸಿಷ್ಠ ಅನ್ನೋ ಹುಡುಗ ಇದ್ದಾನೆ ಅವನ ಕೈಯಲ್ಲಿ ಹಾಡಿಸಿ ಅಂತ ಹಾಗೆ ಸುಮ್ಮನೆ ಜೋಕ್ ಮಾಡಿದ್ದರಂತೆ. ಆದರೆ, ಅನೂಪ್ ಸೀಳಿನ್ ಮಾತ್ರ ವಸಿಷ್ಠ ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡು, ವಸಿಷ್ಠ ಅವರ ಬಳಿ “ಮರೆತು ಹೋದೆನು..” ಹಾಡನ್ನು ಹಾಡಿಸಿದರಂತೆ. ಆ ಹಾಡು ಸೂಪರ್ ಹಿಟ್ ಕೂಡ ಆಯ್ತು.
ಅನೂಪ್ ಸೀಳಿನ್ ಅವರು ವಸಿಷ್ಠ ಸಿಂಹ ಅವರೊಳಗಿನ ಗಾಯಕನನ್ನು ಗುರುತಿಸಿ ಹಾಡಿಸಿದ್ದರಿಂದ, ಈಗ ವಸಿಷ್ಠ ಸಿಂಹ ಗಾಯಕ ಆಗಿದ್ದಾರೆ. ಇದನ್ನು ಎಲ್ಲಿ ಹೋದರೂ ವಸಿಷ್ಠ ಹೇಳುತ್ತಲೇ ಇರುತ್ತಾರೆ. ಇತ್ತೀಚೆಗೆ ನಡೆದ ಹೆಸರಿಡದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ವಸಿಷ್ಠ ಗಾಯಕ ಆಗೋಕೆ ಅನೂಪ್ ಕಾರಣ ಎಂದು ಹೇಳಿಕೊಂಡರು.