ಸಂಸ್ಕೃತ ಪದವೇ ಚಿತ್ರದ ಶೀರ್ಷಿಕೆ
ಕನ್ನಡದಲ್ಲಿ ಸಂಸ್ಕೃತ ಪದವುಳ್ಳ ಶೀರ್ಷಿಕೆ ಸಿನಿಮಾಗಳು ಈಗಾಗಲೇ ಸಾಕಷ್ಟು ಬಂದಿವೆ. ಈಗಲೂ ಬರುತ್ತಿವೆ. ಆ ಸಾಲಿಗೆ ಈಗ “ಅಗ್ನಿ ಪ್ರವ” ಎಂಬ ಸಿನಿಮಾವೂ ಸೇರಿದೆ. ಹೌದು, ಇದೊಂದು ಸಂಸ್ಕೃತ ಭಾಷೆಯ ಪದ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ಸಿನಿಮಾ ಮೂಲಕ ಸುರೇಶ ಆರ್ಯ ಸ್ಯಾಂಡಲ್ವುಡ್ಗೆ ಎಂಟ್ರಿಯಾಗುತ್ತಿದ್ದಾರೆ. ಹಾಗಂತ ಇವರಿಗೆ ಸಿನಿಮಾರಂಗ ಹೊಸದಲ್ಲ. ಈಗಾಗಲೇ ತೆಲುಗಿನ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ “ಅಗ್ನಿ ಪ್ರವ” ಮೊದಲ ಚಿತ್ರ. ಈ ಚಿತ್ರದ ವಿಶೇಷವೆಂದರೆ, ಕಥೆಗಾರ, “ಬಾಹುಬಲಿ” ಖ್ಯಾತಿಯ ವಿಜಯೇಂದ್ರ ಪ್ರಸಾದ್ ಅವರು ಕ್ಯಾಮರಾ ಚಾಲನೆ ಮಾಡುವ ಮೂಲಕ ಚಿತ್ರಕ್ಕೂ ಚಾಲನೆ ನೀಡಿದ್ದಾರೆ. ಇನ್ನು, ಡಾ.ರಾಜಕುಮಾರ್ ಅವರ ಹಿರಿಯ ಪುತ್ರಿ ಲಕ್ಷ್ಮೀ ಮತ್ತು ಗೋವಿಂದ್ ರಾಜ್ ಕ್ಲಾಪ್ ಮಾಡಿ ಶುಭಕೋರಿದ್ದಾರೆ.
ಚಿತ್ರಕ್ಕೆ ಶುಭಕೋರಿದ ಕಥೆಗಾರ ವಿಜಯೇಂದ್ರ ಪ್ರಸಾದ್, “ನಾನು ಈ ಚಿತ್ರದ ಕಥೆ ಕೇಳಿದಾಗ ಕುತೂಹಲವಿತ್ತು. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ ಎನಿಸಿತು. ಆ ಕಥೆಯ ಒನ್ಲೈನ್ ಕೇಳಿದಾಗ ನಿಜಕ್ಕೂ ಇದು ವರ್ಕೌಟ್ ಆಗುತ್ತೆ ಎನಿಸಿತು. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಅಷ್ಟೇ ಅಲ್ಲ, ಈ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ರಾಜ್ಕುಮಾರ್ ಅವರ ಪುತ್ರಿ ಬಂದಿದ್ದಾರೆ ಅಂದಮೇಲೆ, ಚಿತ್ರಕ್ಕೂ ಒಳ್ಳೆಯದಾಗಲಿದೆ ಎಂಬುದು ವಿಜಯೇಂದ್ರ ಪ್ರಸಾದ್ ಅವರ ಮಾತು.
ಈ ಚಿತ್ರ ನವರತ್ನ ಪಿಕ್ಚರ್ಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿದ್ದು, ವರ್ಷಾ ತಮ್ಮಯ್ಯ ಈ ಚಿತ್ರದ ನಿರ್ಮಾಪಕರು. ಅವರು ಚಿತ್ರದ ನಾಯಕಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ 5 ಚಿತ್ರಗಳನ್ನು ಮಾಡಿರುವ ವರ್ಷಾ, ಅವರು, “ಅಗ್ನಿಪ್ರವ” ಕಥೆ ಚೆನ್ನಾಗಿದೆ ಎಂಬ ಕಾರಣಕ್ಕೆ ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿದ್ದಾರೆ.
ಇವರೊಂದಿಗೆ ಜೀತೇಂದ್ರ ಜೋಸೈಮನ್ ಕೂಡ ನಿರ್ಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ. ತಮ್ಮ ನಿರ್ಮಾಣದ ಚಿತ್ರದ ಕುರಿತು ಮಾತನಾಡುವ ವರ್ಷಾ ತಮ್ಮಯ್ಯ, “ನನಗೆ ಚಿತ್ರದ ಕಥೆ ಇಷ್ಟವಾಯಿತು. ಕಮರ್ಷಿಯಲ್ ಅಂಶಗಳೊಂದಿಗೆ ಈ ಚಿತ್ರ ಮಾಡುತ್ತಿದ್ದೇನೆ. ಇಲ್ಲಿ ಆ್ಯಕ್ಷನ್ ದೃಶ್ಯಗಳು ಹೆಚ್ಚಾಗಿವೆ. ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಾಣಲಿದೆ ಎನ್ನುತ್ತಾರೆ ಅವರು.
ತಮ್ಮ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸುರೇಶ್ ಆರ್ಯ. “ಇದೊಂದು ಮಹಿಳಾ ಪ್ರಧಾನ ಚಿತ್ರ. ಅಗ್ನಿಪ್ರವ ಅಂದರೆ, ಬೆಳಕು ಪ್ರವಹಿಸುವುದು ಎಂದರ್ಥ. ಇಡೀ ಸಿನಿಮಾ ನಾಯಕಿ ಸುತ್ತಲೇ ಸಾಗುವುದರಿಂದ ಕಮರ್ಷಿಯಲ್ ಅಂಶಗಳ ಜತೆಗೆ ಒಂದಷ್ಟು ಮಿಸ್ಟರಿ ಥ್ರಿಲ್ಲರ್ ಅಂಶಗಳನ್ನು ಸೇರಿಸಿದ್ದೇವೆ.
ಸಿನಿಮಾ ನೋಡುತ್ತಿದ್ದರೆ, ನಾಯಕಿ ಇಲ್ಲಿ ನೆಗೆಟಿವ್ ಅನಿಸುತ್ತಾಳೆ. ಆದರೆ, ಚಿತ್ರದ ಹೀರೋಯಿನ್ ಕೂಡ ಅವಳೇ ಆಗಿರುತ್ತಾಳೆ. ಸಿನಿಮಾ ಬಗ್ಗೆ ಹೇಚ್ಚು ಹೇಳುವುದಿಲ್ಲ. ಸಿನಿಮಾ ಬಿಡುಗಡೆಯಾದ ಬಳಿಕ ಕಥೆ ಎಂಥದ್ದು ಎಂಬುದು ಅರ್ಥವಾಗುತ್ತದೆ” ಎನ್ನುತ್ತಾರೆ ಅವರು.
ನಟ ನಿರ್ದೇಶಕ ಜೋ ಸೈಮನ್ ಈ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ. ಇನ್ನುಳಿದಂತೆ ನಾರಾಯಣ ಸ್ವಾಮಿ, ನಟಿ ಜ್ಯೋತಿ ರೈ, ವೆಂಕಟೇಶ್ ಪ್ರಸಾದ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಸೇರಿ ಹಲವರು ಇದ್ದರು. ಚಿತ್ರಕ್ಕೆ ಉದಯ್ ಶೆಟ್ಟಿ, ಯುವ, ಸುರೇಶ್ ಆರ್ಯ ಕಥೆ ಬರೆದರೆ, ಲವಿತ್ ಛಾಯಾಗ್ರಹಣವಿದೆ. ವದತ್ತ, ಡಾ ರಾಮಕೃಷ್ಣ ಕೋಡೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.