ಯೂನಿರ್ವಸಲ್ ಇಂಟೆಲಿಜೆನ್ಸ್! ಫೋಕಸ್ ಮಾಡಿ ಅರ್ಥವಾಗುತ್ತೆ!

ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ

ರೇಟಿಂಗ್: 3/5

ಚಿತ್ರ: ಯುಐ
ನಿರ್ದೇಶನ: ಉಪೇಂದ್ರ
ನಿರ್ಮಾಣ: ಮನೋಹರ್ ನಾಯ್ಡು ಮತ್ತು ಕೆ.ಪಿ. ಶ್ರೀಕಾಂತ್‍
ತಾರಾಗಣ: ಉಪೇಂದ್ರ, ರೀಷ್ಮಾ ನಾಣಯ್ಯ, ಸಾಧುಕೋಕಿಲ, ಅಚ್ಯುತ್ ಕುಮಾರ್, ರವಿಶಂಕರ್ ಇತರರು.

ಉಪೇಂದ್ರ ಅವರ ನಿರ್ದೇಶನದ ಸಿನಿಮಾಗಳಲ್ಲಿ ಸೂಕ್ಷ್ಮತೆ ಇರುತ್ತೆ. ಅತೀ ಸೂಕ್ಷ್ಮ ವಿಚಾರಗಳ ಮೂಲಕವೇ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಅವರ ಹಿಂದಿನ ಯಾವುದೇ ಸಿನಿಮಾಗಳನ್ನು ಗಮನಿಸಿದರೆ, ಅಲ್ಲಿ ವಾಸ್ತವ ಅಂಶಗಳನ್ನಿಟ್ಟಿರುತ್ತಾರೆ. ಅಂದರೆ, ವ್ಯವಸ್ಥೆಯೊಳಗಿನ ಕೊಳಕು, ಬದಲಾವಣೆ ಇತ್ಯಾದಿ ವಿಚಾರಗಳೇ ಅಲ್ಲಿ ಸುಳಿದಾಡಿರುತ್ತವೆ. ಹೊಸತನದ ಕಥೆಯ ಜೊತೆ ಸಮಾಜ ಸುಧಾರಣೆ ಮತ್ತು ಬದಲಾವಣೆ ಎಂಬ ಧ್ಯೇಯ ಅವರದ್ದು. ಅವರ ಯುಐ ಸಿನಿಮಾದಲ್ಲೂ ಅಂಥದ್ದೇ ವಿಷಯವಿದ್ದರೂ, ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅರ್ಥ ಮಾಡಿಕೊಂಡವರಿಗೆ ಮಾತ್ರ ಯುಐ ಕಥೆಯೊಳಗಿನ ಸಾರ ಗೊತ್ತಾಗುತ್ತೆ.

ಉಪೇಂದ್ರ ಅವರಿಲ್ಲಿ ಸಮಾಜದಲ್ಲಿರುವ ವಾಸ್ತವತೆಯನ್ನು ವಿವರಿಸಿದ್ದಾರೆ. ಅಂಕು-ಡೊಂಕು ಎಲ್ಲವನ್ನೂ ಹೊರಗೆಡವಿದ್ದಾರೆ. ಅವರ ಕಥೆಯೊಳಗಿನ ಗಟ್ಟಿತನ, ನಿರೂಪಣೆಯ ಶೈಲಿ ಇಲ್ಲಿ ವಿಶೇಷ ಎನ್ನಬಹುದು. ಅವರ ವಿಚಾರ ಒಂದೇ, ಸಮಾಜ ಬದಲಾವಣೆ ಅಸಾಧ್ಯ ಅನ್ನೊದು. ಆದರೆ, ಬದಲಾವಣೆಗೆ ಬೇಕಾಗಿರೋದು ಏನೆಂಬುದನ್ನೂ ಇಲ್ಲಿ ಹೇಳಹೊರಟಿದ್ದಾರೆ. ಅವರನ್ನು ಅರ್ಥ ಮಾಡಿಕೊಂಡವರಿಗೆ ಈ ಚಿತ್ರದ ಕಥೆ ಅರ್ಥವಾದೀತು. ಆದರೆ, ಇಲ್ಲಿ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡಿದ್ದಾರೆ ಅನ್ನೋದು ಸಮಾಧಾನ.

ಅವರ ನಿರ್ದೇಶನದ ಸಿನಿಮಾದಲ್ಲಿ ಹೆಚ್ಚು ಮನರಂಜನೆಗೆ ಜಾಗ ಇರುತ್ತಿತ್ತು. ಡೈಲಾಗ್ ಗಳಿಗೆ ಅವಕಾಶವಿರುತ್ತಿತ್ತು. ಆದರೆ, ಯುಐ ಸಿನಿಮಾದಲ್ಲಿ ಅದನ್ನು ನಿರೀಕ್ಷೆ ಮಾಡದಿದ್ದರೂ, ಒಂದೊಳ್ಳೆಯ ಸಂದೇಶವಂತೂ ಇದೆ. ಇಲ್ಲೂ ಮನರಂಜನೆ ಎಷ್ಟು ಕೊಡಬೇಕೋ ಅಷ್ಟನ್ನು ಕೊಟ್ಟಿದ್ದಾರೆ. ಮಾತುಗಳನ್ನೂ ಎಷ್ಟು ಹರಿಬಿಡಬೇಕೋ ಅಷ್ಟನ್ನು ಹರಿಬಿಟ್ಟಿದ್ದಾರೆ. ಅವರ ಮನಸ್ಸಿನೊಳಗಿನ ಕಥೆ ಇಲ್ಲಿ ಅನಾವರಣಗೊಂಡಿರುವುದು ವಿಶೇಷ. ಮನಸ್ಸಿನೊಳಗಿನ ಕಥೆಯೇ ಇಲ್ಲಿ ಹೈಲೆಟ್. ತಾಳ್ಮೆಯಿಂದ ತದೇಕಚಿತ್ತದಿಂದ ಸಿನಿಮಾ ಅರ್ಥಮಾಡಿಕೊಂಡರೆ ಮಾತ್ರ ಅವರೊಳಗಿನ ಆಶಯ ಅರ್ಥ ಆಗುತ್ತೆ. ಹಾಗಂತ, ಇದು ಒಂದೇ ಗುಕ್ಕಿಗೆ ಅರ್ಥವಾಗುವ ಕಥೆಯೇ? ಈ ಪ್ರಶ್ನೆಗೆ ಉತ್ತರ ಕಷ್ಟ. ಯಾಕೆಂದರೆ, ಅವರು ಈ ಬಾರಿ ಹೊಸತನದ ಕಥೆ ಹೆಣೆದಿದ್ದಾರೆ. ಅವರಿಲ್ಲಿ ಆ ತಾಯಿಯನ್ನು ಪ್ರಕೃತಿಗೆ ಹೋಲಿಸಿದ್ದಾರೆ. ಪ್ರಕೃತಿ ಮೇಲೆ ಏನೆಲ್ಲಾ ದೌರ್ಜನ್ಯ ಆಗುತ್ತೆ ಅನ್ನುವುದನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ. ನಿತ್ಯವೂ ಆಗುತ್ತಿರುವ ಅನ್ಯಾಯವನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಕೆಟ್ಟ ವ್ಯವಸ್ಥೆ, ಆಳುವ ವ್ಯಕ್ತಿ, ತುಳಿತಕ್ಕೊಳಗಾಗುವ ಪ್ರಜೆಗಳು, ಜಾತಿ, ಧರ್ಮ, ಸುಳ್ಳು, ಕಪಟ, ಮೋಸ ಎಲ್ಲವನ್ನೂ ಒಂದೇ ಫ್ರೇಮ್ ನಲ್ಲಿ ತೋರಿಸುವ ಮೂಲಕ ಸಮಾಜದ ವ್ಯವಸ್ಥೆಯೊಳಗಿನ ಹುಳುಕನ್ನು ಎತ್ತಿತೋರಿಸುವ ಪ್ರಯತ್ನ ಮಾಡಿದ್ದಾರೆ.

ವ್ಯವಸ್ಥೆ ಸರಿಪಡಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಕೆಟ್ಟ ವ್ಯವಸ್ಥೆಗೆ ಕೆಡುಕಿನಿಂದಲೇ ಉತ್ತರ ಕೊಡಬೇಕು ಎಂಬ ವೇದಾಂತ ಉಪೇಂದ್ರ ಅವರದು. ಹಾಗಾಗಿ ಕಥೆ ಬಗ್ಗೆ ಇಲ್ಲಿ ಹೇಳುವುದಕ್ಕಿಂತ ಒಂದೊಮ್ಮೆ ತಾಳ್ಮೆ ಮತ್ತು ಫೋಕಸ್ ಮಾಡಿ ನೋಡಿದರೆ ಮಾತ್ರ ಯುಐ ಒಳಗಿನ ಹೂರಣದ ರುಚಿ ಗೊತ್ತಾಗುತ್ತೆ. ದೇಶದೊಳಗೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಅನ್ನುವ ಸತ್ಯವನ್ನು ಹೇಳುತ್ತಲೇ ಪ್ರಜಾಭುತ್ವದಲ್ಲಾಗುತ್ತಿರುವ ಅನ್ಯಾಯ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಮೊಬೈಲ್ ಗೆ ದಾಸರಾಗುವ ಪ್ರಜಾಪ್ರಭುತ್ವ, ಮನುಷ್ಯತ್ವಕ್ಕಿಂತ ಇಲ್ಲಿ ಜಾತಿಗೆ ಹೆಚ್ಚು ಬೆಲೆ ಎಂಬ ಅಂಶ, ಸೋಶಿಯಲ್ ಮೀಡಿಯಾ ಹಾವಳಿಯ ರಾದ್ಧಾಂತ… ಹೀಗೆ ಪ್ರಸ್ತುತ ವಿಷಯಗಳನ್ನು ಹೇಳುವ ಮೂಲಕ ದೇಶದ ಅವ್ಯವಸ್ಥೆ ಹೇಗೆಲ್ಲಾ ಇದೆ, ಹೇಗೆಲ್ಲ ಆಗುತ್ತೆ ಅನ್ನೋದನ್ನು ಹೇಳಿದ್ದಾರೆ.

ಅದೇ ಉಪೇಂದ್ರ ಇಲ್ಲಿ ಕಂಡರೂ ಹೊಸ ವಿಷಯಗಳನ್ನು ನಿಮ್ಮನ್ನು ಆವರಿಸಿಕೊಳ್ಳುತ್ತವೆ. ಹಾಗಾಗಿ ಸಿನಿಮಾ ನೋಡುಗರಿಗೆ ಹೊಸತನ್ನೇ ಕೊಡುವ ಮೂಲಕ ಸುಮ್ಮನೆ ನೋಡುವಂತೆ ಕೂರಿಸಿಕೊಳ್ಳುತ್ತೆ. ಅಂಥದ್ದೊಂದು ಮ್ಯಾಜಿಕ್ ಅನ್ನು ಉಪೇಂದ್ರ ಮಾಡಿದ್ದಾರೆ. ಹಾಗಾಗಿ ಯುಐ ಒಂದೊಮ್ಮೆ ನೋಡಲು ಅಡ್ಡಿಯಿಲ್ಲ. ಇಲ್ಲೂ ಮನರಂಜನೆಗೊಂದು ಒಳ್ಳೆಯ ಹಾಡು ಇದೆ. ತರಹೇವಾರಿ ಡೈಲಾಗ್ ಗಳೂ ಇವೆ. ಎಲ್ಲಕ್ಕಿಂತ ಹೆಚ್ಚಾಗಿ, ಕ್ಲೈಮ್ಯಾಕ್ಸ್ ಬರುವವರೆಗೂ ಉಪೇಂದ್ರ ಅವರ ಯೋಚನಾ ಲಹರಿ ಹೀಗಾ ಅನ್ನೊದು ಗೊತ್ತಾಗಲ್ಲ. ಆರಂಭದಲ್ಲಿ ಸಿನಿಮಾದ ವೇಗ ಜೋರಾಗಿಯೇ ಇದೆ. ದ್ವಿತಿಯಾರ್ಧ ಮತ್ತಷ್ಟು ಚಾಲೆಂಜ್ ಎನಿಸುವಷ್ಟು ದೃಶ್ಯಗಳು ಆವರಿಸಿಕೊಳ್ಳುತ್ತವೆ. ಕೆಲವೆಡೆ ಶಿಳ್ಳೆ, ಚಪ್ಪಾಳೆಗಳೂ ಬೀಳುತ್ತವೆ. ಅದಕ್ಕೆ ಕಾರಣ, ವಾಸ್ತವತೆಯನ್ನು ಬಿಂಬಿಸುವ ದೃಶ್ಯಗಳು.

ಉಪೇಂದ್ರ ಅವರಿಲ್ಲಿ ಕಿವಿಮಾತು ಹೇಳಿದ್ದಾರೆ. ಅದನ್ನು ಅರ್ಥಮಾಡಿಕೊಂಡರೆ, ಪ್ರಜಾಪ್ರಭುತ್ವದಲ್ಲಿರುವ ವ್ಯವಸ್ಥೆ ಬದಲಿಸಲು ಸಾಧ್ಯವಾಗಬಹುದೇನೋ? ಇಂತಹ ವಿಷಯವನ್ನೂ ಇಲ್ಲಿ ಹೇಳಿದ್ದಾರೆ. ಬಹಳಷ್ಟು ಮಂದಿ ಸಿನಿಮಾ ಅರ್ಥ ಆಗಲ್ಲ. ಉಪೇಂದ್ರ ಅವರು ಸುಮ್ಮನೆ ಒಂದಷ್ಟು ಸೌಂಡು ಮಾಡಿದ್ದಾರೆ ಅಂತೆಲ್ಲಾ ಮಾತುಗಳು ಬಂದವು. ಆದರೆ, ಇಲ್ಲಿ ನಿಜವಾಗಿಯೂ ಉಪೇಂದ್ರ ಅವರು ತಮ್ಮೊಳಗಿನ ಮಾತಿನ ಮೂಲಕ ಯಾರಿಗೆ ಹೇಗೆ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಅವರ ಮಾತನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬುದು ಅದು ಅವರವರಿಗೆ ಬಿಟ್ಟಿದ್ದು.

ಸಿನಿಮಾದ ಬಜೆಟ್ ಫ್ರೇಮ್ ನಲ್ಲಿ ಕಾಣಿಸುತ್ತೆ. ಇಲ್ಲಿ ವಿಎಫ್ ಎಕ್ಸ್ ಹೈಲೆಟ್ ಆಗಿದೆ. ಮುಖ್ಯವಾಗಿ ಸಂಗೀತ ಮತ್ತು ಹಿನ್ನೆಲೆ ಸಂಗೀತ ಜೋರು ಸದ್ದು ಮಾಡಿದೆ. ಉಪೇಂದ್ರ ಅವರ ಅಭಿನಯ, ನಿರ್ದೇಶನ ಮಾತ್ರವಲ್ಲ, ಅವರ ಬರವಣಿಗೆ ಕೂಡ ಇಲ್ಲಿ ಇಷ್ಟವಾಗುತ್ತೆ. ಚಿತ್ರದ ವೇಗಕ್ಕೆ ವಿಜಯ್ ಸಂಕಲನವೂ ಹೆಗಲಾಗಿದೆ. ವೇಣು ಕ್ಯಾಮೆರಾ ಕೈಚಳಕ ಯುಐ ಸಿನಿಮಾದ ಮುಖ್ಯ ಭಾಗ. ಇನ್ನುಳಿದಂತೆ ನಾಯಕಿ ರೀಷ್ಮಾ ಸಿಕ್ಕಷ್ಟು ಜಾಗವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ತೆರೆ ಮೇಲೆ ರವಿಶಂಕರ್‍ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸಾಧುಕೋಕಿಲ ಅಚ್ಯುತ ಕುಮಅರ್ ಇತರರು ಇರುವಷ್ಟು ಕಾಲ ಗಮನ ಸೆಳೆಯುತ್ತಾರೆ.

Related Posts

error: Content is protected !!