ಅಪ್ಪು ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಮಾಡಿದ ಅದೆಷ್ಟೋ ಅಪರೂಪದ ಕೆಲಸಗಳು ನಮ್ಮ ಕಣ್ಮುಂದೆ ಇವೆ. ಅಷ್ಟೇ ಅಲ್ಲ, ಸಾಮಾಜಿಕವಾಗಿ ಪರಿಣಾಮ ಬೀರುವಂತಹ ಸಾಲು ಸಅಲು ಸಿನಿಮಾಗಳೂ ಇವೆ. ಅಪ್ಪುಗೆ ಒಂದು ಆಸೆ ಇತ್ತು. ಅದು ಇಂಟರ್ ನ್ಯಾಷನಲ್ ಪ್ರಿಸ್ಕೂಲ್ ಒಂದನ್ನು ಶುರು ಮಾಡಬೇಕು ಅನ್ನೋದು. ಆದರೆ, ಅಪ್ಪು ವಿಧಿಯ ಕರೆಗೆ ಹೋದರು. ಹಾಗಂತ ಅಪ್ಪು ಪತ್ನಿ ಸುಮ್ಮನೆ ಕೂರಲಿಲ್ಲ. ಪತಿಯ ಎರಡು ದಶಕದ ಆ ಆಸೆಯನ್ನು ಈಡೇರಿಸಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.
ಹೌದು, ಅಪ್ಪು ಅಗಲಿಕೆಯ ನಂತರ ಅವರ ಪಿಆರ್ಕೆ ಸಂಸ್ಥೆಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಈ ಬ್ಯಾನರ್ ಅಡಿಯಲ್ಲಿ ಹೊಸ ಬಗೆಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಹೊಸಬರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅದೆಷ್ಟೋ ಪ್ರತಿಭೆಗಳಿಗೆ ಸಹಕಾರಿಯಾಗಿದ್ದಾರೆ. ಈಗ ಅದರ ಬೆನ್ನಲ್ಲೇ ಶಿಕ್ಷಣ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಅನ್ನೋದೇ ಈ ಹೊತ್ತಿನ ವಿಶೇಷ. ಅದೇನೆ ಇದ್ದರೂ, ಪುನೀತ್ ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಇವರಿಬ್ಬರೂ ಕಂಡಿದ್ದ ಬರೋಬ್ಬರಿ 20 ವರ್ಷಗಳ ಕನಸು ಈಗ ನನಸಾಗಿದೆ.
ಸಿನಿಮಾರಂಗದ ನಿರ್ಮಾಣ ವಿಭಾಗದಲ್ಲಿ ಇದೀಗ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಅಶ್ವಿನಿ ಪುನೀತ್ ರಾಜ್ಕುಮಾರ್, ಈಗ ಮತ್ತೊಂದು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಅದರಲ್ಲೂ ಅವರೀಗ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡೋಕೆ ಮುಂದಾಗಿದ್ದಾರೆ. ಅಂದಹಾಗೆ, ಅವರು ಶಿಕ್ಷಣ ಕ್ಷೇತ್ರಕ್ಕೆ ಎಂಟ್ರಿಕೊಡುವ ಎರಡು ದಶಕಗಳ ಕನಸು ಅವರ ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಮೂಲಕ ಈಡೇರಿದೆ. ಇತ್ತೀಚೆಗೆ ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ ಶುರುಮಾಡಿದ್ದಾರೆ. ಈ ಮೂಲಕ ಪುನೀತ್ ರಾಜ್ಕುಮಾರ್ 20 ವರ್ಷಗಳ ಹಿಂದೆಯೇ ಕಂಡಿದ್ದ ಆ ಕನಸನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ನನಸು ಮಾಡಿದ್ದಾರೆ. ಇತ್ತೀಚೆಗೆ ಆ ಜೂನಿಯರ್ ಟೋಸ್ ಪ್ರೀಸ್ಕೂಲ್ ನ ಅನಾವರಣವಾಗಿದೆ.
ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ನಿರ್ಮಾಣಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರೊಂದಿಗೆ ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಶ್ರುತಿ ಕಿರಣ್ ಮತ್ತು ಡಾ. ಬಿಂದು ರಾಣಾ ಅವರು ಕೈ ಜೋಡಿಸಿದ್ದಾರೆ. ಮಕ್ಕಳ ಶಿಕ್ಷಣವನ್ನು ಉನ್ನತ ಮಟ್ಟಕ್ಕೆ ಏರಿಸುವ ಈ ಪ್ರಯತ್ನಕ್ಕೆ ಇವರೆಲ್ಲರೂ ಒಮ್ಮತದಿಂದ ಕೈ ಹಾಕಿದ್ದಾರೆ. ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ವಿಶಿಷ್ಟವಾದ ಪ್ರಾಥಮಿಕ ಶಿಕ್ಷಣ ಯೋಜನೆಯನ್ನು ಇಟ್ಟುಕೊಂಡಿದೆ ಅನ್ನೋದು ವಿಶೇಷ.
ಖ್ಯಾತ ಶಿಕ್ಷಣ ತಜ್ಞೆ ಸುನೀತಾ ಗೌಡ, ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮ ಈ ಜೂನಿಯರ್ ಟೋಸ್ ಪ್ರಿಸ್ಕೂಲ್ನಲ್ಲಿ ಇರಲಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ನಾಯಕತ್ವ, ಸೃಜನಶೀಲತೆ ಹಾಗೂ ಉದ್ಯಮಶೀಲತೆಯ ಚಿಂತನೆಯನ್ನು ಬೆಳೆಸುವುದು ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಅವರ ಜೊತೆಗಾರರ ಕನಸು. ಈ ಸ್ಕೂಲ್ ಅನ್ನು ಇಂಡಿಯನ್ ವುಮನ್ ಅಚೀವರ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಶಿಕ್ಷಣ ತಜ್ಞೆ ಐಶ್ವರ್ಯ ಡಿ.ಕೆ.ಎಸ್ ಹೆಗ್ಡೆಯವರ ಸಮ್ಮುಖದಲ್ಲಿ ಉದ್ಘಾಟನೆ ಆಗಿದ್ದು ಮತ್ತೊಂದು ವಿಶೇಷ.
ಇದೇ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ತಮ್ಮ ಹಾಗು ಅಪ್ಪು ಅವರ ಕನಸು ಹಾಗೂ ಸ್ಕೂಲ್ ಬಗ್ಗೆ ರಿವೀಲ್ ಮಾಡಿದ್ದಾರೆ. “ನಾನು ಮತ್ತು ಪುನೀತ್ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಬರಬೇಕು ಎಂಬ ಕನಸು ಇಟ್ಟುಕೊಂಡಿದ್ದೆವು. ಆ ಕನಸು ಈಗ ಈಡೇರುತ್ತಿದೆ. ಪ್ರತಿ ಮಗುವಿನ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಶಾಲೆಗಳನ್ನು ಸ್ಥಾಪಿಸೋದೇ ಈ ಶಾಲೆಯ ಮುಖ್ಯ ಧ್ಯೇಯ” ಎಂದಿದ್ದಾರೆ. ಈ ಪ್ರೀಸ್ಕೂಲ್ ಬೆಂಗಳೂರಿನಲ್ಲಿ ಮೊದಲು ಆರಂಭಗೊಳ್ಳಲಿದ್ದು, ಶುರುವಿಗೆ ಐದು ಕೇಂದ್ರಗಳನ್ನು ಆರಂಭಿಸುವ ಆಲೋಚನೆಯಿದೆ. ಇದರಲ್ಲಿ ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ತಜ್ಞರು ಸೇರಿ ಸಿದ್ಧಪಡಿಸಿದ ವಿನೂತನ ಪಠ್ಯಕ್ರಮ ಅಳವಡಿಸಲಾಗಿದೆ.
ಎರಡು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಮಾತ್ರ ಇಲ್ಲಿ ಶಿಕ್ಷಣ ನೀಡಲಾಗುತ್ತೆ. ಸದ್ಯ ಬೆಂಗಳೂರಿನಲ್ಲಿ ಆರಂಭವಾದ ಈ ಶಿಕ್ಷಣ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸುವ ಆಲೋಚನೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗಿದೆ. ಈ ಮೂಲಕ ಇಂತಹ ವಿನೂತನ ಶಿಕ್ಷಣ ಭಾರತದಾದ್ಯಂತ ಇರುವ ಎಲ್ಲಾ ಮಕ್ಕಳಿಗೂ ಸಿಗುವಂತೆ ಆಗಬೇಕು ಎಂಬುದೇ ಅವರ ಆಶಯ. ಸಿನಿಮಾ ನಿರ್ಮಾಣದ ಜೊತೆ ಜೊತೆಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಈಗ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದ್ದು ಅಪ್ಪು ಅಭಿಮಾನಿಗಳಿಗೆ ಖುಷಿಯಂತೂ ಆಗಿದೆ.
ಅದೇನೆ ಇರಲಿ, ಸಿನಿಮಾ ನಿರ್ಮಾಣ ಮಾಡುವ ಮೂಲಕ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿರುವ ಪಿಆರ್ ಕೆ ಸಂಸ್ಥೆ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ. ಈಗ ಅಶ್ವಿನಿ ಪುನೀತ್ ರಾಜಕುಮಾರ್, ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟು ಹೊಸ ಕ್ರಾಂತಿಗೆ ಅಣಿಯಾಗಿದ್ದಾರೆ.