-
ನಿರೀಕ್ಷೆಯಂತೆ ಈ ಸಿನಿಮಾ ಗೆದ್ದರೆ ಹೊಸ ದಾಖಲೆ
ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಹೊಸ ಮುನ್ನುಡಿ ಬರೆಯಲು ಇನ್ನೇನು ಕೆಲವೇ ದಿನ ಬಾಕಿ ಇವೆ.ನಿರ್ದೇಶಕರ ಹಿನ್ನೆಲೆ, ದೊಡ್ಡ ತಾರಾಗಣ, ಸಮಕಾಲೀನ ಸಂಗತಿಯ ಕಥಾವಹಂದರ , ಜತೆಗೆ ವಿಭಿನ್ನ ಮಾದರಿಯ ಪ್ರಚಾರದೊಂದಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ ಇದು. ನಿರೀಕ್ಷೆಯಂತೆ ಚಿತ್ರ ಮಂದಿರದಲ್ಲಿ ಸಿನಿಮಾ ಗೆದ್ದರೆ ಹೊಸ ದಾಖಲೆ ಗ್ಯಾರಂಟಿ.
ಲಾಕ್ ಡೌನ್ ತೆರವಾದ ನಂತರ ಚಿತ್ರ ಮಂದಿರಗಳಲ್ಲಿ ತೆರೆ ಕಾಣುತ್ತಿರುವ ಮೊಟ್ಟ ಮೊದಲ ಕನ್ನಡ ಸಿನಿಮಾ ಇದು. ಇದು ಕನ್ನಡ ದಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದಲ್ಲೇ ಮೊದಲು. ಹಾಗೊಂದು ದೊಡ್ಡ ಕುತೂಹಲ ‘ ಆಕ್ಟ್ 1978’
ಮೇಲಿದೆ. ಕೊರೋನಾ ಬಂದು ಈ ಬಾರಿಯ ದೀಪಾವಳಿಗೆ ಸ್ಯಾಂಡಲ್ ವುಡ್ ಕಳೆ ಕಳೆದುಕೊಂಡಿತು ಎನ್ನುವ ಆತಂಕದ ನಡುವೆಯೇ ಚಿತ್ರ ತಂಡ ದೊಡ್ಡ ಸವಾಲಿನೊಂದಿಗೆ ಇದು ತೆರೆ ಕಾಣುತ್ತಿದೆ. ಈ ಮೂಲಕ ರಾಜ್ಯದ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನದ ಮೆರವಣಿಗೆ ಶುರುವಾಗುತ್ತಿರುವುದು ಸದ್ಯದ ಕುತೂಹಲ.
ಲಾಕಡೌನ್ ನಂತರ ಅಕ್ಟೋಬರ್ 15 ರಿಂದಲೇ ಚಿತ್ರ ಮಂದಿರಗಳ ಆರಂಭಕ್ಕೆ ಅನುಮತಿ ಸಿಕ್ಕಿದೆ. ಅಂತೆಯೇ ಮಲ್ಟಿಪ್ಲೆಕ್ಸ್ ಸೇರಿ ಹಲವೆಡೆ ಚಿತ್ರಮಂದಿರಗಳು ಒಪನ್ ಆಗಿದ್ದೂ ಕೂಡ ನಿಮಗೆ ಗೊತ್ತು. ಆದರೆ ಚಿತ್ರಮಂದಿರಕ್ಕೆಜನ ಬರುವ ಯಾವುದೇ ಖಾತರಿ ಇಲ್ಲದ ಕಾರಣ, ರಿಲೀಸ್ ಆಗಿದ್ದ ಸಿನಿಮಾಗಳೇ ಮರು ಪ್ರದರ್ಶನ ಕಂಡವು. ಪ್ರೇಕ್ಷಕ ರ ಬೆಂಬಲ ಸಿಗದ ಭಯಕ್ಕೆ ಹೊಸ ಸಿನಿಮಾಗಳೆ ಬಿಡುಗಡೆ ಆಗಿರಲಿಲ್ಲ .ಆದರೆ ಈಗ ಮಂಸೋರೆ ನಿರ್ದೇಶನದ ‘ ಆಕ್ಟ್ 1978 ‘ ಚಿತ್ರ ತಂಡ ದೊಡ್ಡ ಸವಾಲಿನೊಂದಿಗೆ ನವೆಂಬರ್ 20 ಕ್ಕೆ ಚಿತ್ರ ರಿಲೀಸ್ ಮಾಡಲು ಮುಂದಾಗಿದೆ.
ಲಾಕ್ ಡೌನ್ ನಂತರ ಬಿಡುಗಡೆ ಆಗುತ್ತಿರುವ ಕನ್ನಡದ ಮೊದಲು ಸಿನಿಮಾ ಎನ್ನುವುದು ಇದಕ್ಕಿರುವ ಹೆಗ್ಗಳಿಕೆ . ಅದರ ಜತೆಗೆ ದೊಡ್ಡ ಕುತೂಹಲ. ಆದರೆ ಅದು ಅಂದುಕೊಂಡಷ್ಟು ಸುಲಭವೇನಿಲ್ಲ. ಇದೊಂದು ಕಡುಕಷ್ಟದ ಸವಾಲು. ಆದರೂ ಮಂಸೋರೆ ಆ್ಯಂಡ್ ಟೀಮ್ ಯಾಕಿಂತ ರಿಸ್ಕ್ ತೆಗೆದುಕೊಂಡಿತು ಅನ್ನೋದು ಹಲವರ ಪ್ರಶ್ನೆ. ಆದರೆ ಯಾರೇ ಆದರೂ ಒಬ್ಬರು ಇಂತಹ ರಿಸ್ಕ್ ತೆಗೆದುಕೊಳ್ಳದಿದ್ದರೆ, ಕನ್ನಡ ಚಿತ್ರ ರಂಗದ ಗತಿಯೇನು?
ಇದು ಚಿತ್ರ ತಂಡ ಮಾತು.ಅದಕ್ಕೆ ಪೂರಕವಾಗಿಯೇ ಚಿತ್ರ ತಂಡ ಸೋಷಲ್ ಮೀಡಿಯಾ ಮೂಲಕ ವಿಭಿನ್ನವಾದ ಪ್ರಚಾರ ನಡೆಸಿದೆ. ಅದರ ಜತೆಗೆ ಮಂಸೋರೆ ಈಗ ಹೊಸ ಮಾದರಿ ಸಿನಿಮಾ ಮಾಡಿದ್ದಾರೆನ್ನುವುದಕ್ಕೆ ಚಿತ್ರದ ಟ್ರೇಲರ್ ಗೆ ಸಿಕ್ಕ ದೊಡ್ಡ ಬೆಂಬಲವೇ ಸಾಕ್ಷಿ ಆಗಿದೆ. ಚಿತ್ರಮಂದಿರದಲ್ಲಿಇದು ಎಷ್ಟರ ಮಟ್ಟಿಗೆ ಫಲನೀಡುತ್ತೆ ಎನ್ನುವ ಕುತೂಹಲ ಮನೆ ಮಾಡಿದೆ.