ದಾಸವರೇಣ್ಯ ಶ್ರೀ ವಿಜಯ ದಾಸರು ಚಿತ್ರದ ಎರಡನೇ ಭಾಗಕ್ಕೆ ಚಾಲನೆ‌

ಖ್ಯಾತ ಹರಿದಾಸರಾದ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ ಆರಾಧನಾ ಪರ್ವಕಾಲದಲ್ಲಿ “ದಾಸವರೇಣ್ಯ ಶ್ರೀ ವಿಜಯದಾಸರು ಭಾಗ 2” ಚಿತ್ರದ ಮುಹೂರ್ತ ಸಮಾರಂಭ ಬಸವನಗುಡಿಯ ಶ್ರೀಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ವಿದ್ವಾನ್ ಶ್ರೀಸತ್ಯಧ್ಯಾನಾಚಾರ್ಯ ಕಟ್ಟಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು.‌ ಇತ್ತೀಚೆಗಷ್ಟೇ ಟಿಟಿಡಿ ಸದಸ್ಯರಾಗಿ ಆಯ್ಕೆಯಾಗಿರುವ ನರೇಶ್ ಕುಮಾರ್ ಹಾಗೂ ಖ್ಯಾತ ಗಮಕ ಕಲಾವಿದರಾದ ಪ್ರಸನ್ನ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಹೂರ್ತ ಸಮಾರಂಭದ ನಂತರ ಮಾತನಾಡಿದ ಗಣ್ಯರು ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು. ‌‌‌

ನಾನು ನಮ್ಮ ತಂದೆ ತಾಯಿಯ ಆಶೀರ್ವಾದದಿಂದ ಎಸ್ ಪಿ ಜೆ ಮೂವೀಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ತಿಳಿಸಿದ ನಿರ್ಮಾಪಕ ತ್ರಿವಿಕ್ರಮ ಜೋಶಿ, ನಾನೇ ವಿಜಯದಾಸರ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಭಾಗ ಒಂದನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ವಿಜಯದಾಸರ ಆರಾಧನಾ ಸಂದರ್ಭದಲ್ಲೇ ಎರಡನೇ ಭಾಗಕ್ಕೆ ಚಾಲನೆ ದೊರಕ್ಕಿದೆ. ನನ್ನದಲ್ಲದ ಕ್ಷೇತ್ರಕ್ಕೆ ನಿರ್ದೇಶಕ ಮಧುಸೂದನ್ ಹವಾಲ್ದಾರ್ ನನ್ನನ್ನು ಎಳೆದು ತಂದಿದ್ದಾರೆ.

ಹರಿದಾಸರ ಕುರಿತಾಗಿ ಹತ್ತು ಸಿನಿಮಾಗಳನ್ನು ನಿರ್ಮಿಸುವ ಯೋಜನೆಯಿದೆ.‌ ಇದೇ ಸಂದರ್ಭದಲ್ಲಿ ಮತ್ತೊಂದು ವಿಷಯ ತಿಳಿಸುತ್ತಿದ್ದೇನೆ. ನವೆಂಬರ್ 12, ದೇಶ ಕಂಡ ಸಜ್ಜನ ರಾಜಕಾರಣಿ ದಿ.ಅನಂತಕುಮಾರ್ ಅವರು ನಮ್ಮನೆಲ್ಲಾ ಬಿಟ್ಟು‌ ಹೋದ ದಿನ. ಅವರು ನನ್ನ ಗುರುಗಳು. ಇಂದು ಅವರ ಶ್ರೀಮತಿ ಅವರು ಬಂದಿದ್ದಾರೆ.

ಅವರ ಜೊತಗೆ ಅನಂತಕುಮಾರ್ ಅವರ ಕುರಿತಾದ ಚಿತ್ರ ಮಾಡುವ ಬಗ್ಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಈ ಚಿತ್ರವನ್ನು ಆರಂಭಿಸುತ್ತೇವೆ. ನನ್ನ ತರಹ ಸಾಕಷ್ಟು ಅನಂತಕುಮಾರ್ ಅಭಿಮಾನಿಗಳು ನನ್ನೊಂದಿಗಿರುತ್ತಾರೆ. ಇಂದು ಪೂಜ್ಯ ಆಚಾರ್ಯರು ಸಹ ಈ ಚಿತ್ರ ಆರಂಭಿಸುವಂತೆ ಹೇಳಿ ಆಶೀರ್ವದಿಸಿದ್ದಾರೆ ಎಂದರು.

“ದಾಸವರೇಣ್ಯ ಶ್ರೀ ವಿಜಯದಾಸರು ಭಾಗ ೨” ಚಿತ್ರಕ್ಕೆ ಚಾಲನೆ ನೀಡಿದ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ.‌ ಇಂದಿನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಇನ್ನು ನಾಲ್ಕು ತಿಂಗಳಲ್ಲಿ ಚಿತ್ರ ಸಿದ್ದವಾಗಲಿದೆ. ಹಂಪೆ, ಆನೆಗುಂದಿ, ಹುಲಗಿ, ಶ್ರೀರಂಗಪಟ್ಟಣ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಒಂಭತ್ತು ಹಾಡುಗಳು ಚಿತ್ರದಲ್ಲಿರುತ್ತದೆ. ತ್ರಿವಿಕ್ರಮ ಜೋಶಿ, ಪ್ರಭಂಜನ ದೇಶಪಾಂಡೆ, ಶರತ್ ಜೋಶಿ, ಶ್ರೀಲತ ಬಾಗೇವಾಡಿ ಮುಂತಾದವರು ಚಿತ್ರದ ತಾರಾಬಳಗದಲ್ಲಿರುತ್ತಾರೆ ಎಂದು ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು.

ಚಿತ್ರಕಥೆ ಹಾಗೂ ಸಂಭಾಷಣೆ ಕುರಿತು ಜೆ.ಎಂ.ಪ್ರಹ್ಲಾದ್ ಮಾತನಾಡಿದರು. ಗೋಪಾಲದಾಸರ ಪಾತ್ರದಲ್ಲಿ ಕಾಣಿಕೊಳ್ಳುತ್ತಿರುವುದಾಗಿ ಪ್ರಭಂಜನ ದೇಶಪಾಂಡೆ ಹಾಗು ವಿಜಯದಾಸರ ಪತ್ನಿ ಹರಳಮ್ಮನವರ ಪಾತ್ರ ನಿರ್ವಹಿಸುತ್ತಿರುವುದಾಗಿ ನಟಿ ಶ್ರೀಲತ ಬಾಗೇವಾಡಿ ತಿಳಿಸಿದರು.

Related Posts

error: Content is protected !!