ಅಂತೂ ಇಂತೂ ಅಸಿಸ್ಟೆಂಟ್ ಡೈರೆಕ್ಟರ್ ಗೆ ಪೇಮೆಂಟ್ ಸಿಕ್ತು..!

ಅಸಿಸ್ಟೆಂಟ್ ಡೈರೆಕ್ಟರ್ ಚಿತ್ರದ ಫಸ್ಟ್ ಲುಕ್ ರಿಲೀಸ್

ಅರೇ, ಹೀಗಂದಾಕ್ಷಣ ಕೊಂಚ ಅಚ್ಚರಿಯಾಗ ಬಹುದೇನೋ? ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಗಳಿಗೆ ಪೇಮೆಂಟ್ ಸಿಗೋದು ಸುಲಭವೇನಲ್ಲ. ಆದರೂ ಪೇಮೆಂಟ್ ಸಿಕ್ಕಿದೆ ಅಂದರೆ?ಹೌದು, ಪೇಮೆಂಟ್ ಸಿಕ್ಕಿರೋದು ನಿಜ. ಹಾಗಂತ ಕನ್ನಡ ಚಿತ್ರರಂಗದಲ್ಲಿರುವ ಅಸಿಸ್ಟೆಂಟ್ ಡೈರೆಕ್ಟರ್ ಗಳಿಗಲ್ಲ. ಕನ್ನಡದಲ್ಲಿ ‘ಅಸಿಸ್ಟೆಂಟ್ ಡೈರೆಕ್ಟರ್’ ಹೆಸರಿನ ಸಿನಿಮಾವೊಂದು ಶುರುವಾಗುತ್ತಿರೊದು ಗೊತ್ತೇ ಇದೆ. ಇದು ಕನ್ನಡ‌ ಮಾತ್ರವಲ್ಲದೆ ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯಲ್ಲೂ ತಯಾರಾಗುತ್ತಿದೆ. ಚಿತ್ರದ ಶೀರ್ಷಿಕೆ ಹೇಳುವಂತೆ ಕನ್ನಡ ಸಿನಿಮಾರಂಗದಲ್ಲಿರುವ ಸಹ‌ ನಿರ್ದೇಶಕರ ಕಥಾಹಂದರ ಇರುವ ಸಿನಿಮಾನಾ? ಗೊತ್ತಿಲ್ಲ. ಆದರೆ, ಇದೊಂದು ಹೊಸಬರ ತಂಡ ಹುಟ್ಟು ಹಾಕುತ್ತಿರುವ ಸಿನಿಮಾ.

ದಿವಾಕರ ಡಿಂಡಿಮ, ನಿರ್ದೇಶಕ

ಈ ಚಿತ್ರದ ಮೂಲಕ ದಿವಾಕರ್ ಡಿಂಡಿಮ ನಿರ್ದೇಶಕರಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಇವರ ಜೊತೆ ಒಂದೊಳ್ಳೆಯ ತಂಡವೂ ಜೊತೆ ಸೇರಿದೆ. ಸಿನಿಮಾ ಹಸಿವು ಇರುವ ಸಮಾನ ಮನಸ್ಸಿನ ಗೆಳೆಯರು ಕೈ ಜೋಡಿಸಿದ್ದಾರೆ.
ಸಂತೋಷ್ ಆಶ್ರಯ್ ಚಿತ್ರದ ಹೀರೋ. ಈ ಹಿಂದೆ ಹಲವು ಕಿರುಚಿತ್ರಗಳ ಮಾಡಿದ ಅನುಭವವಿದೆ. ಸಂತೋಷ್ ಆಶ್ರಯ್ ಅವರಿಗೆ ನಿಸರ್ಗ ಅಪ್ಪಣ್ಣ ನಾಯಕಿ. ವಿಹಾನ್ ಸಂಗೀತ ನೀಡಿದ್ದಾರೆ. ಪ್ರಸಾದ್ ಎಚ್.ಎಂ.ಛಾಯಾಗ್ರಹಣವಿದೆ.

ಸಿನಿಮಾ ನಿರ್ಮಾಪಕ, ನಟನ ಉದ್ಯಮವೇ?

ತಮ್ಮ ಚೊಚ್ಚಲ ಸಿನಿಮಾ ಕುರಿತು ನಿರ್ದೇಶಕ ದಿವಾಕರ್ ಡಿಂಡಿಮ ‘ಸಿನಿಲಹರಿ’ ಗೆಹೇಳುವುದಿಷ್ಟು.
‘ಸಮಾಜಕ್ಕೆ ಸಿನಿಮಾದವರ ಮೇಲಿನ ಒಂದಿಷ್ಟು ಅಭಿಪ್ರಾಯಗಳನ್ನೆಲ್ಲ ಕಲೆ ಹಾಕಿ ಅದನ್ನ ಒಂದು ಪ್ರಶ್ನೆಯಾಗಿಟ್ಟು ಅದಕ್ಕೆ ಉತ್ತರ ಕೊಡೋ ಸಣ್ಣದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದೇನೆ.
ಸಿನಿಮಾ ಅನ್ನೋದು ಕೇವಲ ನಿರ್ಮಾಪಕ ಮತ್ತು ನಟನಿಗೆ ಮಾತ್ರ ಒಂದು ಉದ್ಯಮವಾಗಿ ಬಳಕೆಯಾಗುತ್ತಿದೆ. ಒಬ್ಬ ಮೇರು ನಟನ ಚಿತ್ರ ಶುರುವಾಗುತ್ತಿದೆ. ಅಂದರೆ, ಉಳಿದ ಎಲ್ಲಾ ವಿಭಾಗಗಳಲ್ಲೂ ಉದ್ಯಮದ ವಾತಾವರಣ
ಬೆಳೆಯಬೇಕು. ಚಿತ್ರರಂಗಕ್ಕಾಗಿ ದುಡಿಯುವ ಪ್ರತಿಯೊಬ್ಬರಿಗೂ ಸರಿಯಾದ ಸ್ಥಾನಮಾನ, ಧನ ಸಿಗುವಂತಾಗಬೇಕು.


ಸಿನಿಮಾ ಮೇಲಿನ ಪ್ರೀತಿಯಿಂದ ಬಂದವರನ್ನು ಸುಖಾಸುಮ್ಮನೆ ದುರುಪಯೋಗಪಡಿಸಿಕೊಳ್ಳುವುದು ಮೊದಲು ನಿಲ್ಲಬೇಕು, ತನ್ನ ಕೆಲಸದ ಜೊತೆ ಜೊತೆಗೆ ಬೇರೆಲ್ಲಾ ವಿಭಾಗಗಳ ಕೆಲಸ ಮಾಡುವ ಏಕೈಕ ವ್ಯಕ್ತಿ ಅಂದರೆ ಅದು ಸಹಾಯಕ ನಿರ್ದೇಶಕ, ಆದರೆ ಚಿತ್ರರಂಗದ ಎಲ್ಲಾ ವಿಭಾಗಗಳಿಗಿಂತ ಅತೀ ಕಡಿಮೆ ಅಂದ್ರೆ ಸಂಭಾವನೆಯೇ ಇಲ್ಲದೇ ಬರೀ ತನ್ನ ಖರ್ಚಿಗಷ್ಟೇ ಹಣ ಪಡೆದು ಕೆಲಸ ಮಾಡುವಂತಾಗಿದೆ.


ಸಹಾಯಕ ನಿರ್ದೇಶಕರು ಏನೆಲ್ಲಾ ಮಾಡಬಲ್ಲರು ಎಂದು ತೋರಿಸುವುದೇ ನಮ್ಮ ಈ ‘ಅಸಿಸ್ಟೆಂಟ್ ಡೈರೆಕ್ಟರ್’ ಸಿನಿಮಾದ ಉದ್ದೇಶ. ಹಾಗಂತ ಇಲ್ಲಿ ಯಾರನ್ನೂ ತೆಗಳುವ ಉದ್ದೇಶವಿಲ್ಲ. ಸಿನಿಮಾ ಮೂಲಕ ಒಂದಷ್ಟು ಸತ್ಯವನ್ನು, ವಾಸ್ತವತೆಯನ್ನು ತೋರಿಸುವ ಪ್ರಯತ್ನಕ್ಕೆ ಹೊರಟಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ದಿವಾಕರ್ ಡಿಂಡಿಮ.

ಅದೇನೆ ಇರಲಿ, ಚಿತ್ರರಂಗದಲ್ಲಿರುವ ವ್ಯವಸ್ಥೆ ಅಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಗಳನ್ನು ನಡೆಸಿಕೊಳ್ಳುವ ರೀತಿ ಕುರಿತು ಒಂದಷ್ಟು ವಿಶೇಷತೆಗಳಿವೆ.
ನಿರ್ದೇಶಕನಾಗಬೇಕೆಂಬ
ಕನಸನ್ನ ಕಟ್ಟಿಕೊಂಡು ತಯಾರಿ ನಡೆಸುತ್ತಿರುವ ಸಹ ಹಾಗೂ ಸಹಾಯಕ ನಿರ್ದೇಶಕರ ನೋವು, ನಲಿವು ಬಗೆಗಿನ ಚಿತ್ರಣವನ್ನು‌ ಭಾವನಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನ ಈ ಹೊಸಬರದು.

Related Posts

error: Content is protected !!