ಚಿತ್ರ ವಿಮರ್ಶೆ: ಅದ್ಧೂರಿತನದ ಮಾಸ್ಟರ್ ಮಾಸ್ ಮಾರ್ಟಿನ್!

ವಿಜಯ್ ಭರಮಸಾಗರ

ರೇಟಿಂಗ್: 4/5


ಚಿತ್ರ: ಮಾರ್ಟಿನ್
ನಿರ್ದೇಶನ: ಎ.ಪಿ.ಅರ್ಜುನ್
ನಿರ್ಮಾಣ: ಉದಯ್ ಕೆ. ಮೆಹ್ತಾ
ತಾರಾಗಣ: ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಸುಕೃತ ವಾಗ್ಲೆ, ಅಚ್ಯುತ್ ಕುಮಾರ್, ವಜ್ರಾಂಗ್ ಶೆಟ್ಟಿ ಇತರರು
.

ನೀರಲ್ಲಿ ಸ್ನಾನ ಮಾಡಬೇಕು ಅನ್ನೋರು ಹಿಂದೆ ಹೋಗಿ… ರಕ್ತದಲ್ಲಿ ಸ್ನಾನ ಮಾಡಬೇಕು ಅನ್ನೋರು ಮುಂದೆ ಬನ್ನಿ…

  • ಹೀಗೆ ಹೀರೋನ ಪವರ್ ಫುಲ್ ಡೈಲಾಗ್ ನೊಂದಿಗೆ ಶುರುವಾಗುವ ಮೊದಲ ಫೈಟ್, ಈ ಸಿನಿಮಾದ ಹೈಲೆಟ್. ಜೊತೆಗೆ ಭರ್ಜರಿ ಪ್ಲಸ್ ಕೂಡ. ಅಲ್ಲಿಗೆ ಇದೊಂದು ಪಕ್ಕಾ ಮಾಸ್ ಫೀಲ್ ಇರುವ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಿರೀಕ್ಷೆ ಇಟ್ಟುಕೊಂಡು ಸಿನಿಮಾ ನೋಡೋಕೆ ಹೋಗುವವರಿಗೆ ಮಾರ್ಟಿನ್ ಖಂಡಿತ ಮೋಸ ಮಾಡೋದಿಲ್ಲ. ಒಂದೊಳ್ಳೆಯ ಕಥೆ ಇಲ್ಲಿದೆ. ಬಿಗಿ ಹಿಡಿತದ ನಿರೂಪಣೆ ಇದೆ. ದೇಶಾಭಿಮಾನದ ಕಥೆ ಅಂದುಕೊಂಡವರಿಗೆ ಇಲ್ಲೊಂದು ಸರ್ಪ್ರೈಸ್ ಸಹ ಇದೆ. ಮಾಸ್ ಎಲಿಮೆಂಟ್ಸ್ ಇಷ್ಟಪಡುವ ಪ್ರತಿಯೊಬ್ಬರಿಗೂ ಮಾರ್ಟಿನ್ ರುಚಿಸುತ್ತೆ ಜೊತೆಗೆ ಇಷ್ಟವಾಗುತ್ತೆ.

ಸಿನಿಮಾ ಕಥೆಗೆ ಪೂರಕವಾಗಿ ಅದ್ಧೂರಿತನದ ಮೇಕಿಂಗ್ ಇಲ್ಲಿ ಎದ್ದು ಕಾಣುತ್ತೆ. ನಿರ್ದೇಶಕರ ಸಿನಿಮಾ ಪ್ರೀತಿ, ತಾಂತ್ರಿಕ ವರ್ಗದ ಶ್ರಮ, ನಿರ್ಮಾಪಕರ ಅಗಾದ ಶಕ್ತಿ ಸಿನಿಮಾದ ಸಖತ್ ತಾಕತ್ತಿಗೆ ಕಾರಣವಾಗಿದೆ. ಒಂದೇ ಮಾತಲ್ಲಿ ಹೇಳುವುದಾದರೆ, ಮಾರ್ಟಿನ್ ಕಿಚ್ಚು ಹೆಚ್ಚಿಸುವ ಕಥಾಹಂದರದೊಂದಿಗೆ ನೋಡುಗನಿಗೆ ಹೂರಣ ತಿನಿಸಿದಷ್ಟೇ ಖುಷಿ ಕೊಡುತ್ತೆ. ಕ್ಲಾಸ್ ಇಷ್ಟಪಡುವ ಮಂದಿ ಕೂಡ ಮಾಸ್ ಎಲಿಮೆಂಟ್ಸ್ ಇಷ್ಟಪಡುವಂತಹ ಆಕ್ಷನ್ ಸೀಕ್ವೆನ್ಸ್ ಸಿನಿಮಾದ ವೇಗವನ್ನು ಹೆಚ್ಚಿಸಿದೆ. ಇದು ಪಕ್ಕಾ ಹೊಡಿ ಬಡಿ ಸಿನಿಮಾ ಆಗಿರುವುದರಿಂದ ಇಲ್ಲಿ ಗನ್ ಸದ್ದುಗಳದ್ದೇ ಕಾರುಬಾರು. ಆದರೂ, ಒಂಚೂರು ಪ್ರೀತಿ ಗೀತಿ ಇತ್ಯಾದಿ ಒಳಗೊಂಡಿದೆ. ಎಮೋಷನ್ಸ್ ಗೆ ಜಾಗ ಇಲ್ಲ. ಆದರೂ, ಪ್ರೀತಿ ಹೆಸರಿನ ಎಮೋಷನ್ಸ್ ಇಲ್ಲಿ ವರ್ಕೌರ್ಟ ಆಗಿದೆ. ಸಿನಿಮಾದಲ್ಲಿ ತಪ್ಪುಗಳೇ ಇಲ್ಲ ಅನ್ನೋದು ತಪ್ಪು. ಇಲ್ಲೂ ಸಣ್ಣಪುಟ್ಟ ಮಿಸ್ಟೇಕ್ ಇವೆ. ಆದರೆ, ಅಲ್ಲಲ್ಲಿ ಬರುವ ಭರ್ಜರಿ ಆಕ್ಷನ್ ಸಿನಿಮಾದ ಕೆಲ ತಪ್ಪುಗಳನ್ನು ಬದಿಗಿಡುತ್ತದೆ.

ಕಥೆ ಏನು?
ಇಲ್ಲಿ ಮಾರ್ಟಿನ್ ಎಂಬಾತನೇ ಸಿನಿಮಾದ ಆಕರ್ಷಣೆ. ಮಾರ್ಟಿನ್ ಯಾರು, ಅವನು ಒಳ್ಳೆಯವನಾ? ಟೆರರಿಸ್ಟಾ? ಅವನನ್ನು ಹುಡುಕಿ ದೂರದ ಪಾಕಿಸ್ತಾನಕ್ಕೆ ಹೋಗುವ ಒಬ್ಬ ಅಧಿಕಾರಿಗೆ ಆ ಮಾರ್ಟಿನ್ ಸಿಗ್ತಾನಾ? ಇಷ್ಟಕ್ಕೂ ಮಾರ್ಟಿನ್ ಹುಡುಕಿ ಹೊರಡುವ ಆ ಅಧಿಕಾರಿ ಯಾರು? ಮಾರ್ಟಿನ್ ಮಾಡಿದ ದ್ರೋಹವೇನು? ಕೊನೆಗೆ ಮಾರ್ಟಿನ್ ಸಿಗ್ತಾನಾ? ಈ ಎಲ್ಲಾ ಕುತೂಹಲಗಳಿಗೆ ಉತ್ತರ ಬೇಕಾದರೆ ಒಂದೊಮ್ಮೆ ಸಿನಿಮಾ ನೋಡಬಹುದು.

ಸಿನಿಮಾದಲ್ಲಿ ಕಂಪ್ಲೀಟ್ ಆಕ್ಷನ್ ಸೀಕ್ವೆನ್ಸ್ ಅಬ್ಬರವೇ ತುಂಬಿದೆ. ಕಥೆ ಸಿಂಪಲ್ ಎನಿಸಿದರೂ, ಚಿತ್ರಕಥೆಯಲ್ಲಿ ಬಿಗಿ ಹಿಡಿತವಿದೆ. ನಿರ್ದೇಶಕರ ನಿರೂಪಣೆ ಶೈಲಿಯಲ್ಲೂ ಧಮ್ ಇದೆ. ಉಳಿದಂತೆ ಸಿನಿಮಾ ರುಚಿಸುವುದಕ್ಕೆ ಕಾರಣ, ತೆರೆಯ ಮೇಲೆ ಕಾಣಬರುವ ಪ್ರತಿಯೊಂದು ಪಾತ್ರಗಳು. ಎಲ್ಲೋ ಒಂದು ಕಡೆ ಸಿನಿಮಾ ಬೇರೆ ಟ್ರ್ಯಾಕ್ ಹಿಡಿಯಿತು ಅನ್ನುವಷ್ಟರಲ್ಲೇ ಆಂಥೆಮ್ ಆಫ್ ಮಾರ್ಟಿನ್ ಸಾಂಗ್ ಕಾಣಿಸಿಕೊಂಡು ಕಾಣುವ ಸಣ್ಣಪುಟ್ಟ ಮಿಸ್ಟೇಕ್ ಮರೆಮಾಚಿಸುತ್ತೆ.

ಯಾರು ಹೇಗೆ?
ಸಿನಿಮಾದ ಹೈಲೆಟ್ ಅಂದರೆ ಅದು ಧ್ರುವ ಸರ್ಜಾ. ತಮ್ಮ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಅವರಿಲ್ಲಿ ತೆರೆಮೇಲೆ ಅಂದವಾಗಿ ಮತ್ತು ಆಕರ್ಷಕವಾಗಿ ಕಾಣುತ್ತಾರೆ. ಅವರ ನಟನೆಯಲ್ಲೂ ಹೊಸತು ತುಂಬಿದೆ. ಡೈಲಾಗ್ ಡಿಲವರಿಯಲ್ಲೂ ಮಜಾ ಕೊಡುತ್ತಾರೆ. ಅವರ ಫ್ಯಾನ್ಸ್ ಗೆ ಧ್ರುವ ಅವರ ಆಕ್ಷನ್ ಇಲ್ಲಿ ಇಷ್ಟವಾಗುತ್ತೆ. ಉಳಿದಂತೆ ಇಲ್ಲಿ ವೈಭವಿ ಶಾಂಡಿಲ್ಯ ಅವರ ನಟನೆ ಚೆನ್ನಾಗಿದೆ. ಸಿನಿಮಾ ಮುಂದುವರೆಕೆಗೆ ಅವರ ಪಾತ್ರವೂ ಇಲ್ಲಿ ಮುಖ್ಯವಾಗಿ ಕಾಣುತ್ತೆ. ಅಚ್ಯುತ್, ಚಿಕ್ಕಣ್ಣ, ಅನ್ವೇಶಿ ಜೈನ್, ಸುಕೃತ, ವಜ್ರಾಂಗ್ ಶೆಟ್ಟಿ ಸೇರಿದಂತೆ ತೆರೆಮೇಲೆ ಕಾಣುವ ಪ್ರತಿ ಪಾತ್ರಗಳೂ ಇಲ್ಲಿ ಕಥೆಗೆ ನ್ಯಾಯ ಸಲ್ಲಿಸಿವೆ.


ಮಣಿ ಶರ್ಮ ಅವರ ಸಂಗೀತದ ಒಂದು ಹಾಡು ರುಚಿಸುತ್ತದೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಸಿನಿಮಾ ಕಥೆಗೆ ಪೂರಕವಾಗಿದೆ. ಆಕ್ಷನ್ ಗೆ ತಕ್ಕಂತೆ ಭರ್ಜರಿಯಾಗಿಯೇ ಇದೆ. ಸತ್ಯ ಹೆಗಡೆ ಅವರ ಕ್ಯಾಮೆರಾ ಕೈಚಳಕ ಕೂ ಇಲ್ಲಿ ಮೋಡಿ ಮಾಡಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನ ಚಿತ್ರದ ವೇಗ ಹಚ್ಚಿಸಿದೆ.

Related Posts

error: Content is protected !!