ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ನಾಯಕಿಯಾಗೂ ನಟಿಸಿರುವ ಬಹು ನಿರೀಕ್ಷಿತ “ಭೈರಾದೇವಿ” ಸಿನಿಮಾ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನಾನು ಹೆಣ್ಣು ಅಘೋರಿಯ ಬಗ್ಗೆ ಪುಸ್ತಕದಲ್ಲಿ ಓದಿದ್ದೆ. ಅದರ ಬಗ್ಗೆ ಒಂದು ಕಥೆಯನ್ನು ಸಿದ್ದಮಾಡಿಕೊಂಡೆ. ಆನಂತರ ರವಿರಾಜ್ ಅವರ ಪರಿಚಯವಾಯಿತು. ರವಿರಾಜ್ ಅವರು ನಾನು ಹೇಳಿದ ಕಥೆಯನ್ನು ರೆಕಾರ್ಡ್ ಮಾಡಿಕೊಂಡು ರಾಧಿಕಾ ಕುಮಾರಸ್ವಾಮಿ ಅವರಿಗೆ ಕಥೆ ಕೇಳಿಸಿದರು. ಕಥೆ ಇಷ್ಟಪಟ್ಟ ರಾಧಿಕಾ ಕುಮಾರಸ್ವಾಮಿ ಅವರು “ಭೈರಾದೇವಿ” ಚಿತ್ರಕ್ಕೆ ಚಾಲನೆ ನೀಡಿದರು. ಈವರೆಗೂ ನೀವು ನೋಡಿರದ ಪಾತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಮತ್ತೊಂದು ಪ್ರಮುಖಪಾತ್ರದ ಕುರಿತು ನಾನು ಬರೆಯಬೇಕಾದರೆ, ಈ ಪಾತ್ರವನ್ನು ರಮೇಶ್ ಅರವಿಂದ್ ಅವರು ಮಾಡಿದರೆ ಚೆನ್ನಾಗಿರುತ್ತದೆ ಅಂದುಕೊಂಡೆ. ಅವರು ಕಥೆ ಮೆಚ್ಚಿ ಒಪ್ಪಿಕೊಂಡರು. ಅನು ಪ್ರಭಾಕರ್ ಹಾಗೂ ರಂಗಾಯಣ ರಘು ಅವರ ಪಾತ್ರಗಳು ತುಂಬಾ ಚೆನ್ನಾಗಿದೆ. ಅಘೋರಿಯಾಗಿ ರವಿಶಂಕರ್ ಅವರು ನಟಿಸಿದ್ದಾರೆ. ಹಾರಾರ್ ಜಾನರ್ ನ ಚಿತ್ರವಾಗಿರುವುದರಿಂದ ಶಬ್ದಗಳೇ ಚಿತ್ರದ ಹೈಲೆಟ್. ಇಲ್ಲಿನ ಚಿತ್ರಮಂದಿರಗಳಲ್ಲಿ ಅಂತಹ ಸೌಂಡ್ ಎಫೆಕ್ಟ್ ಇಲ್ಲ ಎಂದು ತಿಳಿಸಿದ ನಿರ್ದೇಶಕ ಶ್ರೀಜೈ, ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನಿರ್ಮಾಪಕರಿಗೆ, ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಧನ್ಯವಾದ ತಿಳಿಸಿದರು.
“ಭೈರಾದೇವಿ” ಚಿತ್ರಕ್ಕೆ ತಾವು ನೀಡುತ್ತಿರುವ ಪ್ರೋತ್ಸಾಹಕ್ಕೆ ನಾನು ಚಿರ ಋಣಿ ಎಂದು ಮಾತು ಆರಂಭಿಸಿದ ನಿರ್ಮಾಪಕಿ ಹಾಗೂ ನಟಿ ರಾಧಿಕಾ ಕುಮಾರಸ್ವಾಮಿ, ನನಗೆ ಮೊದಲಿನಿಂದಲೂ ಸ್ವಲ್ಪ ಭಯದ ಸ್ವಭಾವ. ಅದರಲ್ಲೂ ಸ್ಮಶಾನ ಎಂದರೆ ಇನ್ನೂ ಭಯ. ನಿರ್ದೇಶಕರು ಈ ಚಿತ್ರದ ಕಥೆ ಹೇಳಿದಾಗ ಹೆಚ್ಚಿನ ಭಾಗದ ಚಿತ್ರೀಕರಣ ಸ್ಮಶಾನದಲ್ಲೇ ನಡೆಯುತ್ತದೆ ಎಂದರು ನಾನು ಸೆಟ್ ಹಾಕೋಣ ಎಂದೆ.
ಕೊನೆಗೂ ನನ್ನನ್ನು ನಿರ್ದೇಶಕರು ಹಾಗೂ ನನ್ನ ಸಹೋದರ ಒಪ್ಪಸಿ ಸ್ಮಶಾನದಲ್ಲೇ ಚಿತ್ರೀಕರಣ ಮಾಡಿಸಿದರು. ಈ ಚಿತ್ರ ಆದ ಮೇಲೆ ಒಬ್ಬಳೇ ಸ್ಮಶಾನಕ್ಕೆ ಹೋಗಿ ಬರುವ ಧೈರ್ಯ ಬಂದಿದೆ. ನಿರ್ದೇಶಕ ಶ್ರೀಜೈ ಅವರು ಒಳ್ಳೆಯ ಕಥೆ ಮಾಡಿದ್ದಾರೆ. ಅದಕ್ಕೆ ಎಲ್ಲಾ ಕಲಾವಿದರು ಜೀವ ತುಂಬಿದ್ದಾರೆ. ತಂತ್ರಜ್ಞರ ಕಾರ್ಯವೈಖರಿಯೂ ಚೆನ್ನಾಗಿದೆ. ಇದೇ ಅಕ್ಟೋಬರ್ 3 ರಂದು ನವರಾತ್ರಿ ಪ್ರಾರಂಭದ ದಿನ ನಮ್ಮ “ಭೈರಾದೇವಿ” ಚಿತ್ರ ತೆರೆಗೆ ಬರಲಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು.
ನಾನು ಈ ಚಿತ್ರ ಒಪ್ಪಿಕೊಳ್ಳಲು ಮೂರು ಕಾರಣ ಎಂದು ತಿಳಿಸಿದ ನಟ ರಮೇಶ್ ಅರವಿಂದ್ ಅವರು, ಮೊದಲು ಶ್ರೀಜೈ ಮಾಡಿಕೊಂಡಿರುವ ಕಥೆ , ಎರಡನೆಯದು “ಆಪ್ತಮಿತ್ರ” ನಂತರ ನಾನು ಹಾರಾರ್ ಚಿತ್ರ ಮಾಡಿಲ್ಲ ಹಾಗೂ ಮೂರನೆಯದು ಈ ತರಹದ ಪಾತ್ರವನ್ನು ಮಾಡಿ ಬಹಳ ವರ್ಷಗಳೇ ಆಗಿದೆ. ಹಾರಾರ್ ನೊಂದಿಗೆ ಕೌಟುಂಬಿಕ ಕಥಾಹಂದರವನ್ನು ನಿರ್ದೇಶಕರು ನಿರೂಪಣೆ ಮಾಡಿರುವ ರೀತಿ ಚೆನ್ನಾಗಿದೆ. ರಾಧಿಕಾ ಕುಮಾರಸ್ವಾಮಿ ಅವರು ಬರೀ ನಟಿಯಷ್ಟೇ ಅಲ್ಲ. ಈ ಚಿತ್ರದ ನಿರ್ಮಾಪಕರು ಕೂಡ. ಯಾವುದೇ ಕೊರತೆ ಬರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಎಲ್ಲರ ಹಾರೈಕೆ ಇರಲಿ ಎಂದರು ನಟ ರಮೇಶ್ ಅರವಿಂದ್.
ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಮೊದಲು ಕನ್ನಡದಲ್ಲಿ ಮಾತ್ರ ಸುಮಾರು 180 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಸಹ ನಿರ್ಮಾಪಕ ರವಿರಾಜ್ ತಿಳಿಸಿದರು.
ಅನು ಪ್ರಭಾಕರ್ ಹಾಗೂ ರಂಗಾಯಣ ರಘು ತಮ್ಮ ಅನುಭವವನ್ನು ಹಂಚಿಕೊಂಡರು. ಸಾಹಸ ನಿರ್ದೇಶನದ ಬಗ್ಗೆ ರವಿವರ್ಮ ಮಾತನಾಡಿದರು. ಸಹ ನಿರ್ಮಾಪಕ ಯಾದವ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಜೆ.ಎಸ್.ವಾಲಿ ಛಾಯಾಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನ “ಭೈರಾದೇವಿ” ಚಿತ್ರಕ್ಕಿದೆ.