ವಿಜಯ್ ಭರಮಸಾಗರ
ರೇಟಿಂಗ್ : 3/5
ಚಿತ್ರ: ಸಂಜು
ನಿರ್ದೇಶನ: ಯತಿರಾಜು
ನಿರ್ಮಾಣ : ಸಂತೋಷ್ ಡಿ.ಎಂ.
ತಾರಾಗಣ: ಮನ್ವಿತ್, ಸಾತ್ವಿಕ, ಯತಿರಾಜು, ಬಾಲರಾಜುವಾಡಿ, ಸುಂದರಶ್ರೀ, ಅಪೂರ್ವ, ಸಂಗೀತಾ ಇತರರು.
ನಾನೀಗ ವಿಷ ಕುಡಿದಿದ್ದೇನೆ. ನನ್ನನ್ನು ಬದುಕಿಸು… ಹಾಗಂತ ಆ ನಾಯಕಿ ಆಗಷ್ಟೇ ಪ್ರೀತಿಸಿದ ಪ್ರಿಯಕರನ ಮುಂದೆ ತನ್ನ ಅಳಲು ತೋಡಿಕೊಳ್ಳುತ್ತಾಳೆ… ಅಷ್ಟಕ್ಕೂ ಆಕೆ ವಿಷ ಕುಡಿದಿದ್ದು ಯಾಕೆ? ತನ್ನ ಪ್ರಿಯತಮೆಯನ್ನು ಅವನು ಉಳಿಸಿಕೊಳ್ತಾನಾ? ಇಲ್ಲವಾ? ಅನ್ನೋದು ಈ ಸಿನಿಮಾದ ಕ್ಲ್ಯೆಮ್ಯಾಕ್ಸ್ ದೃಶ್ಯ. ಆ ಕುತೂಹಲವಿದ್ದರೆ, ಒಂದೊಮ್ಮೆ ಈ ಸಿನಿಮಾ ನೋಡಿ ಬರಲು ಅಡ್ಡಿಯಿಲ್ಲ.
ಮಸಾಲ ಸಿನಿಮಾಗಳ ಮಧ್ಯೆ, ಲಾಂಗು-ಮಚ್ಚು ಝಳಪಿಸೋ ಕಥೆಗಳ ನಡುವೆ ಹೀಗೊಂದು ಸುಂದರ ಪರಿಸರದೊಳಗೆ ಅರಳಿರುವ ಅಪ್ಪಟ ಪ್ರೀತಿಯ ಕಥೆ. ಇಲ್ಲಿ ನಿರ್ದೇಶಕರ ಜಾಣತನ ಹೈಲೆಟ್ ಅನ್ನಬಹುದು. ಕಾರಣ, ಒಂದೇ ಲೊಕೇಶನ್ನಲ್ಲಿ ಅರ್ಧ ಸಿನಿಮಾ ಮುಗಿಸುವ ಮೂಲಕ ಎಲ್ಲೂ ಬೋರ್ ಎನಿಸದ ರೀತಿ ಒಂದೊಳ್ಳೆಯ ಪ್ರೀತಿ ಕಥೆಯ ಎಳೆಯನ್ನು ಬಿಚ್ಚಿಡುತ್ತಾ ಹೋಗುತ್ತಾರೆ.
ಪ್ರೀತಿ ಎಲ್ಲಿ ಬೇಕಾದರೂ ಹುಟ್ಟುತ್ತೆ ಅನ್ನೋದಕ್ಕೆ ಈಗಾಗಲೇ ಹಲವು ಸಿನಿಮಾಗಳಲ್ಲಿ ಸಾಬೀತಾಗಿದೆ. ಇಲ್ಲೂ ಕೂಡ ಪ್ರೀತಿ ಅರಳೋಕೆ ಇಂಥದ್ದೇ ಸ್ಥಳ ಬೇಕಾಗಿಲ್ಲ ಎಂಬುದನ್ನು ನಿರ್ದೇಶಕರು ತೋರಿಸಿದ್ದಾರೆ. ಹೌದು, ಒಂದೊಳ್ಳೆಯ ಪರಿಸರ ಮಧ್ಯೆ ಇರುವ ಬಸ್ ಸ್ಟಾಪ್ ನಲ್ಲಿ ಅವರಿಬ್ಬರ ಪ್ರೀತಿ ಹುಟ್ಟುತ್ತೆ. ಒಂದೇ ಲೊಕೇಶನ್ ಇಟ್ಟುಕೊಂಡು ಒಂದಷ್ಟು ಕುತುಹೂಲ ಮೂಡಿಸುವ ಅಂಶಗಳನ್ನಿಟ್ಟುಕೊಂಡು ಕಥೆ ಹೇಳುವ ಶೈಲಿ ನೋಡುಗರಿಗೆ ಇಷ್ಟವಾಗುತ್ತೆ. ಮೊದಲರ್ಧ ಒಂದೇ ಲೊಕೇಶನಲ್ಲಿ ಕಥೆ ಸುತ್ತುವುದರಿಂದ ನೋಡುಗನ ನೋಟ ಕೊಂಚ ಅತ್ತಿತ್ತ ಬೀರುತ್ತಿದ್ದಂತೆಯೇ, ಅಲ್ಲೆಲ್ಲೋ ಒಂದು ಸುಂದರ ಹಾಡೊಂದು ಕಾಣಿಸಿಕೊಂಡು ಮತ್ತೆ ನೋಡುಗನನ್ನು ಅದೇ ಟ್ರ್ಯಾಕ್ ಗೆ ಕರೆದೊಯ್ಯುತ್ತೆ.
ಕಥೆ ತುಂಬಾ ಸಿಂಪಲ್. ನಿರೂಪಣಾ ಶೈಲಿ ಕೊಂಚ ವಿಭಿನ್ನವಾಗಿದೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇದ್ದಿದ್ದರೆ ನೋಡುಗನನ್ನು ಮತ್ತಷ್ಟು ಆಕರ್ಷಿಸುತ್ತಿತ್ತು. ಆದರೂ, ಇಲ್ಲಿ ಅನಗತ್ಯ ದೃಶ್ಯಗಳಿಲ್ಲ. ವಿನಾಕಾರಣ ಕೊರೆತಗಳಿಲ್ಲ. ಅಸಹ್ಯದ ಮಾತುಗಳಿಲ್ಲ. ಏನು ಹೇಳಬೇಕೋ, ಎಷ್ಟು ಹೇಳಬೇಕೋ ಅಷ್ಟನ್ನು ಮಾತ್ರ ಹೇಳುವ ಮೂಲಕ ಪರಿಶುದ್ಧ ಪ್ರೇಮ ಕಥೆಯೊಂದನ್ನು ಪರದೆ ಮೇಲೆ ತೋರಿಸಿದ್ದಾರೆ. ಕೇವಲ ನಾಲ್ಕೈದು ಗಂಟೆಗಳಲ್ಲಿ ನಡೆಯುವ ಕಥೆಯೊಳಗೆ, ಆತಂಕ, ತೊಳಲಾಟ, ಪ್ರೀತಿ, ಸಣ್ಣದ್ದೊಂದು ಹೊಡೆದಾಟ, ಅಮ್ಮನ ವಾತ್ಸಲ್ಯ, ಅಪ್ಪನ ಕಾಳಜಿ, ಅಲ್ಲೆಲ್ಲೋ ಪುಟ್ಟಿಯೊಳಗೆ ಹಣ್ಣು ತುಂಬಿಕೊಂಡು ಮಾರಲು ಕೂತ ಅಜ್ಜಿಯೊಬ್ಬಳ ಹೆಣಗಾಟ, ಪುಟ್ಟದ್ದೊಂದು ಟೀ ಅಂಗಡಿ ಇಟ್ಟುಕೊಂಡು ತಮ್ಮದೇ ಲೋಕದಲ್ಲಿ ಮಿಂದೇಳುವ ಜೋಡಿ…
ಹೀಗೆ ತರಹೇವಾರಿ ಪಾತ್ರಗಳು ಅವರಿಬ್ಬರ ಪ್ರೀತಿಗೆ ಸಾಕ್ಷಿಯಾಗುತ್ತವೆ. ರಸ್ತೆಯಲ್ಲಿ ಸಣ್ಣಪುಟ್ಟ ಏರಿಳಿತಗಳಿರುವಂತೆ ಇಲ್ಲೂ ಒಂದಷ್ಟು ಮೈನಸ್ ಅಂಶಗಳಿವೆಯಾದರೂ, ನಾಯಕಿಯ ಒದ್ದಾಟದ ನಟನೆ ಅವೆಲ್ಲವನ್ನೂ ಮರೆಸಿ, ಕನಿಕರ ತೋರಿಸುವಂತೆ ಮಾಡುತ್ತೆ. ಇಂತಹ ಕಥೆಗಳಿಗೆ ಬಜೆಟ್ ಮುಖ್ಯ ಎನಿಸಲ್ಲ. ಕಥೆ ಹೇಳುವ ರೀತಿ ಸರಿಯಾಗಿದ್ದರೆ, ಫ್ರೇಮ್ ಹಿಂದೆ ಏನಿಲ್ಲವಾದರೂ ಸರಿದೂಗಿಸುತ್ತೆ. ಅಂಥದ್ದೊಂದು ಪ್ರಾಮಾಣಿಕ ಪ್ರಯತ್ನ ಇಲ್ಲಾಗಿದೆ. ಒಂದೇ ಲೊಕೇಶನ್ ಇಟ್ಟುಕೊಂಡು ಒಂದಷ್ಟು ಪಾತ್ರಗಳನ್ನು ಸೃಷ್ಟಿಸಿಕೊಂಡು ಎಲ್ಲವನ್ನೂ ತೂಗಿಸಿಕೊಂಡು ಹೋಗಿರುವ ರೀತಿ ಇಷ್ಟವಾಗುತ್ತೆ. ಒಂದಷ್ಟು ಹೊಸತನ ಈ ಚಿತ್ರದಲ್ಲಿ ಕಾಣಬಹುದು. ಉಳಿದಂತೆ ಸಿನಿಮಾ ಸಿದ್ಧ ಸೂತ್ರಗಳನ್ನು ಬಿಟ್ಟು ಹೊರಬಂದಿಲ್ಲ.
ಕಥೆ ಏನು?
ನಾಯಕಿಯ ಬದುಕಲ್ಲಿ ಒಂದು ಘಟನೆ ನಡೆದಿರುತ್ತೆ. ನನ್ ಲೈಫು ಸಾಕು ಇನ್ನು ಸಾಯಬೇಕು ಅಂತ ನಿರ್ಧರಿಸಿಯೇ ಆಕೆ ಬಸ್ ಸ್ಟಾಪ್ ಬಳಿ ಬಂದು ಬರುವ ಬಸ್ ಕಾಯುತ್ತಿರುತ್ತಾಳೆ. ಆದರೆ, ಬಸ್ ಬರಲ್ಲ ಅಂತ ತಿಳಿದು ಅಲ್ಲೇ ಕೂರುತ್ತಾಳೆ. ಅದೇ ಸಮಯಕ್ಕೆ ಹೀರೋ ಕೂಡ ಅದೇ ಬಸ್ ಸ್ಟಾಪ್ ಬಳಿ ಬರ್ತಾನೆ. ಇಬ್ಬರೂ ಅಪರಿಚಿತರು. ನೋಡುತ್ತಲೆ, ಮಾತಾಡುತ್ತಲೇ ಲವ್ ಶುರುವಾಗುತ್ತೆ. ಆದರೆ, ಆಕೆ ಸಾಯಲು ತೀರ್ಮಾನಿಸಿದ್ದು ಯಾಕೆ ಅನ್ನೋದೇ ಸಸ್ಪೆನ್ಸ್. ಅವರಿಬ್ಬರ ಲೈಫಲ್ಲಿ ಒಂದೊಂದು ಘಟನೆ ನಡೆದು ಹೋಗಿರುತ್ತೆ. ಅದು ಏನು ಅಂತ ತಿಳಿಯುವ ಆಸಕ್ತಿ ಇದ್ದರೆ, ಒಮ್ಮೆ ಸಂಜು ನೋಡಬಹುದು.
ಯಾರು ಹೇಗೆ?
ಸಾತ್ವಿಕ (ಶ್ರಾವ್ಯ) ಸಿನಿಮಾದ ಹೈಲೆಟ್. ತಮಗೆ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅವರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಇದು ಅವರ ಗಟ್ಟಿ ಪಾತ್ರದ ಸಿನಿಮಾ. ಇನ್ನು, ಮನ್ವಿತ್ ಮೊದಲ ಸಿನಿಮಾವಾದರೂ ಅನುಭವಿ ನಟರಂತೆ ಕಾಣುತ್ತಾರೆ. ಹೊಡೆದಾಟದ ದೃಶ್ಯದಲ್ಲಿನ್ನೂ ಪಳಗಬೇಕು. ಬಾಡಿಲಾಂಗ್ವೇಜ್ ಬಗ್ಗೆ ಸ್ವಲ್ಪ ಗಮನಹರಿಸಿದರೆ ಒಂದಷ್ಟು ವರ್ಷ ನೆಲೆ ಕಾಣಬಹುದು. ಸಂಜು ಮೂಲಕ ಕನ್ನಡಕ್ಕೆ ಒಬ್ಬ ಹೀರೋ ಬಂದಂತಾಗಿದೆ. ಇನ್ನು, ಬಾಲರಾಜುವಾಡಿ, ಸುಂದರಶ್ರೀ, ಸಂಗೀತಾ, ಅಪೂರ್ವ, ಬೌಬೌ ಜಯರಾಮ್ ಅವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ವಿದ್ಯಾ ನಾಗೇಶ್ ಕ್ಯಾಮೆರಾ ಕೈಚಳಕದಲ್ಲಿ ಸಂಜು ಅಂದವಾಗಿದ್ದಾನೆ. ವಿಜಯ್ ಹರಿತ್ಸ ಸಂಗೀತದ ಹಾಡೊಂದು ಗುನುಗುವಂತಿದೆ. ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಸಂಜೀವ ರೆಡ್ಡಿ ಸಂಕಲನ ಚಿತ್ರದ ವೇಗ ಹೆಚ್ಚಿಸಿದೆ.