ವಿಜಯ್ ಭರಮಸಾಗರ
ರೇಟಿಂಗ್ : 3/5
ನಿರ್ದೇಶಕಿ: ಸಂಜೋತ ಭಂಡಾರಿ
ನಿರ್ಮಾಣ: ತನು ಟಾಕೀಸ್
ತಾರಾಗಣ: ಆಕಾಶ್ ರ‍್ಯಾಂಬೋ, ಸ್ನೇಹ ಖುಷಿ, ಸಂಹಿತ ವಿನ್ಯಾ, ಹುಲಿ ಕಾರ್ತಿಕ್, ಪಲ್ಟಿ ಗೋವಿಂದ್, ಸಾಯಿ ಪವನ್ ಕುಮಾರ್, ಧೀರೇಂದ್ರ ಇತರರು.
“ನಿನ್ನ ಹಂಗು ನನಗೆ ಬೇಡವಾದಮೇಲೆ ಈ ಲಂಗೋಟಿಯೂ ಬೇಡ…”
-ಹೀಗೆ ತಾತನ ಎದುರು ನಿಂತ ಮೊಮ್ಮಗ, ಆಕ್ರೋಶಭರಿತವಾಗಿ ತಾನು ಧರಿಸಿದ್ದ ಲಂಗೋಟಿಯನ್ನು ಕಿತ್ತೆಸೆದು ಮನೆಯಿಂದ ಹೊರ ನಡೆಯುತ್ತಾನೆ. ಒಂದು ಲಂಗೋಟಿ ಮುದ್ದಾದ ಫ್ಯಾಮಿಲಿಯಲ್ಲಿ ಏನೆಲ್ಲಾ ಅವಘಡಕ್ಕೆ ಕಾರಣವಾಗುತ್ತೆ ಅನ್ನೋದು ಸಿನಿಮಾದ ಇಂಟ್ರೆಸ್ಟಿಂಗ್ ಸ್ಟೋರಿ.
ಇದೊಂದು ಮನರಂಜನಾತ್ಮಕ ಚಿತ್ರ. ಮೊದಲರ್ಧ ಜಾಲಿಯಾಗಿ ಸಾಗುವ ಕಥೆಯಲ್ಲಿ ಒಂದಷ್ಟು ಏರಿಳಿತಗಳಿವೆ. ಅಲ್ಲಲ್ಲಿ ಒಂದಷ್ಟು ಟ್ವಿಸ್ಟ್ ಗಳಿವೆ. ನೋಡುಗನಿಗೆ ಟೆಸ್ಟೂ ಇದೆ. ಆದರೂ ಸಿನಿಮಾ ಅತ್ತಿತ್ತ ಅಲ್ಲಾಡದಂತೆ ಒಂದೇ ಸಮನೆ ನೋಡಿಸಿಕೊಂಡು ಹೋಗುತ್ತೆ. ಇಲ್ಲಿ ಕಥೆ ಸಿಂಪಲ್ ಏನಲ್ಲ. ಸರಳ ಕಥೆಗೆ ನಿರೂಪಣೆಯ ಶೈಲಿ ವಿಶೇಷವಾಗಿದೆ. ಇಲ್ಲಿ ಲಂಗೋಟಿಯೇ ಹೀರೋ! ಅಂಡರ್‌ವೇರ್ ಇಲ್ಲಿ ವಿಲನ್. ಇಷ್ಟು ಹೇಳಿದ ಮೇಲೆ ಸಿನಿಮಾ ಮೇಲಿನ ಕುತೂಹಲ ಹೆಚ್ಚದೇ ಇರದು.
ಹೊಡಿ, ಬಡಿ, ಕಡಿ ಸಿನಿಮಾಗಳ ನಡುವೆ ಇದೊಂದು ಪಕ್ಕಾ ದೇಸಿ ಸೊಗಡಿನ, ಮನರಂಜನಾತ್ಮಕ ಚಿತ್ರ. ಇಲ್ಲಿ ಹಾಸ್ಯ ಪ್ರಧಾನವಾಗಿದ್ದರೂ, ಕಥೆಯಲ್ಲಿ ಎಮೋಷನ್ ಅಂಶಗಳು ಮೈದುಂಬಿಕೊಂಡಿವೆ. ಆ ಕಾರಣಕ್ಕೆ ಸಿನಿಮಾದಲ್ಲಿ ಇರುವ ಸಣ್ಣ ಪುಟ್ಟ ತಪ್ಪುಗಳೆಲ್ಲವೂ ಮಾಯವಾಗುತ್ತವೆ. ಮೊದಲರ್ಧ ಕಥೆ ಸ್ವಲ್ಪ ಲ್ಯಾಗ್ ಎನಿಸಿದರೂ, ದ್ವಿತಿಯಾರ್ಧದಲ್ಲಿ ಬರುವ ಒಂದಷ್ಟು ಸನ್ನಿವೇಶಗಳು ನೋಡುಗರನ್ನು ಕುತೂಹಲಕ್ಕೆ ದೂಡುತ್ತದೆ. ಸಿನಿಮಾದಲ್ಲಿ ಲಂಗೋಟಿ ಪ್ರಧಾನ ಪಾತ್ರವಹಿಸಿದೆ. ಲಂಗೋಟಿಯನ್ನು ಧರಿಸಿ ಪ್ರಬುದ್ಧವಾಗಿ ನಟಿಸಿರುವ ನಾಯಕ ಕೂಡ ನೋಡುಗರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಅಲ್ಲಲ್ಲಿ ಕೆಲ ಸನ್ನಿವೇಶಗಳು ವಿನಾಕಾರಣ ಬಂದು ಹೋಗುತ್ತವೆಯಾದರೂ, ಸಿನಿಮಾದಲ್ಲಿ ಕಾಣಸಿಗುವ ಹಾಡೊಂದು ಕೆಲವು ಮಿಸ್ಟೇಕ್‌ಗಳನ್ನು ಪಕ್ಕಕ್ಕೆ ಸರಿಸುತ್ತದೆ. ಸರಾಗವಾಗಿ ಕಚಗುಳಿ ಇಡುವ ಸಂಭಾಷಣೆಯಲ್ಲೂ ಒಂದಷ್ಟು ಮಾತುಗಳು ನಗುತರಿಸಿದರೆ, ಒಂದಷ್ಟು ಮಾತುಗಳು ಅತಿ ಎನಿಸುತ್ತವೆ. ಆದರೂ, ಕಥೆಯ ಓಟಕ್ಕೆ ಮಾತುಗಳೂ ಕೂಡ ಹೆಗಲಾಗಿವೆ. ಸಿನಿಮಾ ಅವಧಿ ತುಸು ಕಡಿಮೆ ಮಾಡಬಹುದಿತ್ತು. ಹಾಸ್ಯಮಯ ಎನಿಸುವ ಕೆಲ ದೃಶ್ಯಗಳಿಗೂ ಕತ್ತರಿ ಹಾಕಬಹುದಿತ್ತು. ಆದರೆ, ಲಂಗೋಟಿ ವಿಷಯ ಬಿಟ್ಟು ಕಥೆ ಬೇರೆಲೂ ಅಡ್ಡಾಡಿಲ್ಲವಾದ್ದರಿಂದ ಸಿನಿಮಾ ಸಲೀಸಾಗಿ ನೋಡಿಸಿಕೊಂಡು ಹೋಗುತ್ತೆ. ಇಲ್ಲಿ ಲಂಗೋಟಿಯೇ ಕೇಂದ್ರಬಿಂದು ಆಗಿರುವುದರಿಂದ ಎಲ್ಲರ ಚಿತ್ತ ಲಂಗೋಟಿಯ ಸರಿತಪ್ಪುಗಳ ಕಡೆಗೆ ಇರಿಸುತ್ತೆ.
ಕಥೆ ಬಗ್ಗೆ ಹೇಳುವುದಾದರೆ, ಸಂಪ್ರದಾಯಸ್ಥ ಕುಟುಂಬದಲ್ಲಿ ಲಂಗೋಟಿಗೆ ಬಹಳ ಗೌರವ. ಅನಾದಿಕಾಲದಿಂದಲೂ ಲಂಗೋಟಿ ಧರಿಸುತ್ತ ಬಂದಿರುವ ಆ ಕುಟುಂಬದ ಯುವಕನಿಗೂ ಕೂಡ ಲಂಗೋಟಿ ಧರಿಸಬೇಕೆಂಬ ನಿಯಮ. ಆದರೆ, ಅವನಿಗೋ ಬ್ರಾಂಡೆಡ್ ಅಂಡರ್‌ವೇರ್ ಹಾಕುವ ಆಸೆ. ಚಿಕ್ಕಂದಿನಿಂದಲೂ ಲಂಗೋಟಿ ಹಾಕುವ ಅವನನ್ನು ಹೀಯಾಳಿಸುವ ಗೆಳೆಯರಿಂದ ರೋಸಿ ಹೋದ ಆ ನಾಯಕ ಅದರಿಂದ ಮುಕ್ತಿ ಪಡೆದುಕೊಳ್ಳಬೇಕೆಂದು ಹೋರಾಡುತ್ತಾನೆ. ಆದರೆ, ಆಚಾರ, ಸಂಪ್ರದಾಯ ಅಂತ ಅವನ ತಾತ ಲಂಗೋಟಿ ಧರಿಸುವಂತೆ ಪಟ್ಟು ಹಿಡಿಯುತ್ತಾನೆ. ಒಂದು ಹಂತದಲ್ಲಿ ಲಂಗೋಟಿ ನಾಯಕನ ಲೈಫಲ್ಲಿ ಸಾಕಷ್ಟು ಅನಾಹುತಗಳಿಗೆ ಕಾರಣವಾಗುತ್ತೆ. ಅದರಿಂದ ಕಿಡ್ನಾಪ್, ಅತ್ಯಾಚಾರ, ಕೊಲೆಗೂ ಅವನ ಹೆಸರು ಕೇಳಿಬರುತ್ತೆ. ಅಷ್ಟೆಲ್ಲಾ ಏರಿಳಿತಗಳಿಗೆ ಕಾರಣವಾಗುವ ಲಂಗೋಟಿ ಕ್ಲೆöÊಮ್ಯಾಕ್ಸ್ ಹಂತದಲ್ಲಿ ವಿಚಿತ್ರ ಘಟನೆಗೆ ಕಾರಣವಾಗುತ್ತೆ. ಅದೇನು ಎಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.
ನಾಯಕರಾಗಿ ಕಾಣಿಸಿಕೊಂಡಿರುವ ಆಕಾಶ್ ರ‍್ಯಾಂಬೋ ಅವರಿಗೆ ಮೊದಲ ಸಿನಿಮಾವಾದರೂ, ಅನುಭವಿ ನಟರಂತೆ ಕಾಣುತ್ತಾರೆ. ನಗಿಸೋಕು ಸೈ, ಭಾವುಕರಾಗುವಲ್ಲೂ ಸೈ ಅನ್ನೋದನ್ನು ಪಾತ್ರದ ಮೂಲಕ ತೋರಿಸಿದ್ದಾರೆ. ತಾತನ ಪಾತ್ರಧಾರಿ ಮತ್ತೊಂದು ಹೈಲೆಟ್ ಎನ್ನಬಹುದು. ಇಲ್ಲಿ ಹುಲಿ ಕಾರ್ತಿಕ್ ಮತ್ತೊಂದು ವಿಶೇಷ ಎನ್ನಬಹದು. ಅವರ ಪಾತ್ರ ತುಂಬಾನೇ ಗಮನಸೆಳೆಯುತ್ತದೆ. ಉಳಿದಂತೆ ಸ್ನೇಹ ಖುಷಿ, ಸಂಹಿತ, ಪಲ್ಟಿ ಗೋವಿಂದ್, ಸಾಯಿ ಪವನ್, ಧೀರೇಂದ್ರ ಇತರರು ಪಾತ್ರಕ್ಕೆ ಮೋಸ ಮಾಡಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವಿದೆ. ಛಾಯಾಗ್ರಹಣ ಲಂಗೋಟಿಯನ್ನು ಅಂದಗಾಣಿಸಿದೆ.