ವಿಜಯ್ ಭರಮಸಾಗರ
ರೇಟಿಂಗ್: 3/5
ಚಿತ್ರ ವಿಮರ್ಶೆ
ಚಿತ್ರ: ಸಿ
ನಿರ್ದೇಶನ: ಕಿರಣ್ ಸುಬ್ರಮಣಿ
ನಿರ್ಮಾಣ: ಎಜಿಎಸ್ ಪ್ರೊಡಕ್ಷನ್
ತಾರಾಗಣ: ಕಿರಣ್, ಪ್ರಶಾಂತ್ ನಟನಾ, ಸಾನ್ವಿಕಾ, ಶ್ರೀಧರ್ ರಾಮ್, ಮಧುಮಿತ ಇತರರು.
“ಅಪ್ಪ ನನಗೆ ಕಣ್ ಬರುತ್ತಾ? ನನ್ನನ್ನು ಮೈಸೂರಿಗೆ ರ್ಕೊಂಡ್ ಹೋಗ್ತೀಯಾ? ಯಾವಾಗ ಹೋಗೋದು…?
ಹೀಗೆ ಆ ಬಾಲಕಿ ತನ್ನ ಅಪ್ಪನನ್ನು ಪ್ರಶ್ನಿಸುವಾಗ ಆ ಕ್ಷಣ ಭಾವುಕತೆಗೆ ದೂಡುತ್ತೆ. ಆಕೆ ಈ ಮಾತು ಹೇಳುವ ಹೊತ್ತಿಗೆ, ಘಟನೆಯೊಂದರಲ್ಲಿ ಏನೂ ಅರಿಯದ ಆ ಮುಗ್ಧ ಹುಡುಗಿ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡಿರುತ್ತಾಳೆ. ಇಷ್ಟಕ್ಕೂ ಆ ಹುಡುಗಿ ತಾನು ಇಷ್ಟಪಟ್ಟಂತೆ ಮೈಸೂರು ಅರಮನೆ ನೋಡ್ತಾಳಾ? ತನ್ನ ತಂದೆ ಆ ಮಗಳಿಗೆ ಪುನಃ ಕಣ್ಣು ಬರಲು ಶ್ರಮಿಸುತ್ತಾನಾ? ಮುಂದೇನಾಗುತ್ತೆ ಅನ್ನುವ ಕುತೂಹಲದೊಂದಿಗೆ ಸಿ ಸಿನಿಮಾ ಸಾಗುತ್ತೆ.
ಇದೊಂದು ಅಪ್ಪ ಮಗಳ ಬಾಂಧವ್ಯದ ಕಥೆ. ಅಷ್ಟೇ ಅಲ್ಲ, ಅಲ್ಲೊಂದು ಭಾವುಕ ಪಯಣವೂ ಇದೆ. ಕಥೆಯ ಬಗ್ಗೆ ಹೇಳುವುದಾದರೆ, ಅಪಘಾತವೊಂಧರಲ್ಲಿ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಳ್ಳುವ ಬಾಲಕಿ, ಬದುಕೇ ಮುಗಿದು ಹೋಯ್ತು ಅಂದುಕೊಳ್ಳುತ್ತಾಳೆ. ಆದರೆ, ತನ್ನ ಮಗಳು ಪುನಃ ಈ ಜಗತ್ತನ್ನು ನೋಡಬೇಕು, ಅವಳಿಗೆ ಮತ್ತೆ ಕಣ್ಣು ಬರುವಂತೆ ಮಾಡಬೇಕು ಅಂತ ಒದ್ದಾಡುವ ತಂದೆ, ಆಸ್ಪತ್ರೆ ವೈದ್ಯರ ಬಳಿ ಹೋಗಿ, ಚಿಕಿತ್ಸೆ ಕೊಡಿಸುತ್ತಾನೆ. ಅಲ್ಲಿ ತನ್ನ ಮಗಳಿಗೆ ಕಣ್ಣು ಬರುತ್ತೆ ಎಂಬ ವಿಷಯ ಕೇಳುವ ತಂದೆಗೆ ಎಲ್ಲಿಲ್ಲದ ಖುಷಿ. ಆದರೆ, ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಲಕ್ಷಗಟ್ಟಲೆ ಹಣ ಹೊಂದಿಸೋಕೆ ಕಷ್ಟಪಡ್ತಾನೆ. ಕೊನೆಗೆ ಒಂದು ಕೆಲಸ ಒಪ್ಪಿಕೊಂಡರೆ ಅವನಿಗೆ ಲಕ್ಷಗಟ್ಟಲೆ ಹಣ ಸಿಗುತ್ತೆ. ಅದನ್ನು ಒಪ್ಪಿಕೊಳ್ತಾನೆ. ಅವನಿಗೆ ಗೊತ್ತಿಲ್ಲದಂತೆಯೇ ಮೆಡಿಕಲ್ ಮಾಫಿಯಾ ಒಂದರಲ್ಲಿ ಸಿಲುಕುತ್ತಾನೆ. ಅಲ್ಲಿಯ ಕರಾಳತೆ ಕಂಡು ಅವನು ಬೆಚ್ಚಿಬೀಳುತ್ತಾನೆ. ಅಲ್ಲಿಂದ ಹೊರಬರುತ್ತಾನಾ? ತನ್ನ ಮಗಳಿಗೆ ಕಣ್ಣು ಬರುವಂತೆ ನೋಡಿಕೊಳ್ಳುತ್ತಾನಾ ಅನ್ನೋದು ಕಥೆಯ ಎಳೆ.
ಮೊದಲರ್ಧ ಸಿನಿಮಾ ಸಾಗುವುದೇ ಗೊತ್ತಾಗಲ್ಲ. ದ್ವಿತಿಯಾರ್ಧ ಒಂದಷ್ಟು ತಿರುವುಗಳಿಗೆ. ಹೀಗೆ ಆಗುತ್ತೆ ಅಂದುಕೊAಡರೆ ಅದು ಬೇರೇನೋ ಆಗುತ್ತೆ. ಕಥೆಯ ಎಳೆ ಸಿಂಪಲ್. ಆದರೆ, ನಿರ್ದೇಶಕರ ನಿರೂಪಣೆ ಶೈಲಿ ಭಿನ್ನವಾಗಿದೆ. ಕೆಲವು ಕಡೆ ಕೆಲ ದೃಶ್ಯಗಳು ಬೇಕಿರಲಿಲ್ಲ. ಎಲ್ಲೋ ಒಂದು ಕಡೆ ಕಥೆ ಎತ್ತಲೋ ಸಾಗುತ್ತೆ ಅಂದುಕೊಳ್ಳುವಷ್ಟರಲ್ಲಿ ಹಾಡೊಂದು ಕಾಣಿಸಿಕೊಂಡು ಮತ್ತದೇ ಟ್ರಾö್ಯಕ್ಗೆ ಕರೆದುಕೊಂಡು ಬಂದು ನೋಡುಗರನ್ನು ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಇಡೀ ಸಿನಿಮಾದಲ್ಲಿ ಕೆಲವು ನ್ಯೂನ್ಯತೆಗಳಿದ್ದರೂ, ಒಂದೊಳ್ಳೆಯ ಎಮೋಷನ್ಸ್ ನೋಡುಗರ ಕಣ್ಣು ಒದ್ದೆ ಮಾಡುತ್ತೆ. ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಮನರಂಜಿಸುವ ಗುಣ ಕೂಡ ಈ ಚಿತ್ರದಲ್ಲಿದೆ. ಇನ್ನು ತಾಂತ್ರಿಕ ವಿಚಾರಕ್ಕೆ ಬಂದರೆ, ಸ್ವಲ್ಪ ಮಬ್ಬು ಮಬ್ಬು ಎನಿಸುತ್ತೆ. ಒಂದು ಮೆಡಿಕಲ್ ಮಾಫಿಯಾದ ಕರಾಳತೆ ಹೇಗೆಲ್ಲಾ ಇರುತ್ತೆ ಅನ್ನುವುದನ್ನು ತಕ್ಕಮಟ್ಟಿಗೆ ತೋರಿಸಿದ್ದಾರಾದರೂ, ಅದನ್ನು ಇನ್ನಷ್ಟು ಚುರುಕಾಗಿ ತೋರಿಸಲು ಸಾಧ್ಯವಿತ್ತು. ಆದರೂ, ಇಲ್ಲೊಂದು ಭಾವುಕತೆಯ ದೃಶ್ಯಗಳಿರುವುದರಿಂದ ಕೆಲ ತಪ್ಪುಗಳೆಲ್ಲವೂ ಮರೆಯಾಗುತ್ತವೆ. ಬಹುತೇಕ ತೆರೆ ಮೇಲೆ ಹೊಸ ಮುಖಗಳಿದ್ದರೂ, ಸಿನಿಮಾ ನೋಡಿಸಿಕೊಂಡು ಹೋಗುತ್ತೆ ಅನ್ನೋದು ಸಮಾಧಾನದ ವಿಷಯ.
ಸಿನಿಮಾದಲ್ಲಿ ನಾಯಕರಾಗಿ ಕಾಣಿಸಿಕೊಂಡರುವ ಕಿರಣ್ ಸುಬ್ರಮಣಿ, ಒಬ್ಬ ಅಸಹಾಯಕ ತಂದೆಯಾಗಿ ಇಷ್ಟವಾಗುತ್ತಾರೆ. ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಸರಳ ನಟನೆ ಮಾಡಿದ್ದಾರೆ. ಅಲ್ಲಲ್ಲಿ ಅಳಿಸುವುದರ ಜೊತೆಗೆ ಮಗಳ ಮೇಲಿನ ಪ್ರೀತಿಯನ್ನೂ ಎತ್ತಿತೋರಿಸುತ್ತಾ ಹೋಗುತ್ತಾರೆ. ಅಂಧೆಯಾಗಿ ಬಾಲನಟಿ ಸಾನ್ವಿಕಾ ಗಮನ ಸೆಳೆಯುತ್ತಾರೆ. ಪ್ರಶಾಂತ್ ನಟನಾ ಅವರಿಲ್ಲಿ ಖಳನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಉಳಿದಂತೆ ಶ್ರೀಧರ್ ರಾಮ್, ಮಧುಮಿತ ಇತರರು ಕೂಡ ಸಿಕ್ಕ ಪಾತ್ರವನ್ನು ಅಂದಗಾಣಿಸಿದ್ದಾರೆ.
ಬಿ.ಮುರಳೀಧರನ್ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ. ನವೀನ್ ಸೂರ್ಯ ಮತ್ತು ವೀರೇಶ್ ಕುಮಾರ್ ಅವರ ಕ್ಯಾಮೆರಾ ಕೈಚಳಕದಲ್ಲಿ ಇನ್ನಷ್ಟು ಜಾದು ಬೇಕಾಗಿತ್ತು. ನವೀನ್ ಸುಂದರ್ ರಾವ್ ಅವರ ಸಂಕಲನ ಚಿತ್ರದ ವೇಗ ಹೆಚ್ಚಿಸಿದೆ. ಒಟ್ಟಾರೆ, ಮೆಡಿಕಲ್ ಮಾಫಿಯಾ ಒಳಗಿನ ಅಪ್ಪ ಮಗಳ ಎಮೋಷನಲ್ ಜರ್ನಿ ಹೇಗಿದೆ ಎಂಬ ಕುತೂಹಲವಿದ್ದರೆ ಒಮ್ಮ ವಾಚ್ ಅಂಡ್ ಸಿ…