ಗೌರಿ ಕನ್ನಡದ ಹೊಸ ಬೆಳಕು: ಇಂದ್ರಜಿತ್ ಪುತ್ರನಿಗೆ ಒಳ್ಳೆ ಟೈಮ್ ಬಂತು…

ಚಿತ್ರ ವಿಮರ್ಶೆ
ವಿಜಯ್ ಭರಮಸಾಗರ
ರೇಟಿಂಗ್: 3.5/5

ಚಿತ್ರ: ಗೌರಿ
ನಿರ್ಮಾಣ, ನಿರ್ದೇಶನ: ಇಂದ್ರಜಿತ್ ಲಂಕೇಶ್
ತಾರಾಗಣ: ಸಮರ್ಜಿತ್ ಲಂಕೇಶ್, ಸಾನ್ಯ ಅಯ್ಯರ್, ಮಾನಸಿ ಸುಧೀರ್, ಸಂಪತ್ ಕುಮಾರ್, ಸಿಹಿಕಹಿ ಚಂದ್ರು ಇತರರು.

ಹೆಸರು ಗೌರಿ. ಅವನದು ಊರೂರು ಅಲೆದು ಹೊಟ್ಟೆಪಾಡಿಗೆ ಜನಪದ ಹಾಡಿ ಸಾರುವ ಜೋಗಿ ಕುಟುಂಬ. ಅಪ್ಪ ಜೋಳಿಗೆ ಹಿಡಿದು ಅಲೆದಾಡುವ ಜೋಗಯ್ಯ. ಹಾಸು ಹೊಕ್ಕಾಗಿರುವ ಬಡತನ. ಅಮ್ಮನಿಗೆ ಅರೆ ಕಿವುಡು. ಅವನಿಗೂ ಅಂಥದ್ದೇ ಸಮಸ್ಯೆ. ಅಪ್ಪನ ಕೋಪಕ್ಕೆ ಮಠ ಸೇರುವ ಗೌರಿ, ರಾಗವಾಗಿ ಹಾಡುವುದನ್ನು ಕಲಿಯುತ್ತಾನೆ. ಮುಂದಾ? ಕಥೆ ಹೇಳಿದರೆ ಮಜ ಇರಲ್ಲ ಒಂದೊಮ್ಮೆ ಗೌರಿ ದರ್ಶನ ಮಾಡಿದರೆ ಆಪ್ತ ಸಿನಿಮಾ ನೋಡಿದ ಭಾವ ನಿಮ್ಮದಾಗುತ್ತೆ.

ಇದೊಂದು ಸಂಗೀತ ಪ್ರಧಾನ ಸಿನಿಮಾ. ಆದರೂ ಇಲ್ಲಿ ಪ್ರೀತಿ, ಗೆಳೆತನ, ಮೋಸ, ದ್ವೇಷ, ತಾಯಿ ಮಮತೆ, ಸಾಧಿಸೋ ಛಲ, ಪಶ್ಚಾತ್ತಾಪ, ಕರುಣೆ, ಮರುಕ ಎಲ್ಲವೂ ಇದೆ. ಇವೆಲ್ಲವನ್ನೂ ಅಷ್ಟೇ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್.

ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಎನಿಸಿದರೂ ಅಲ್ಲೊಂದು ಮನಸಿಗೆ ನಾಟುವ ಅಂಶವಿದೆ. ಅದನ್ನು ಅಚ್ಚುಕಟ್ಟಾಗಿ ನಿರೂಪಿಸುವುದರ ಜತೆಗೆ ಎಲ್ಲೂ ಗೊಂದಲವಿಲ್ಲದ ರೀತಿ ತೆರೆ ಮೇಲೆ ತಂದಿದ್ದಾರೆ.

ಮೊದಲರ್ಧ ಸಿನಿಮಾ ಸಾಗುವುದೇ ಗೊತ್ತಾಗಲ್ಲ. ಅಷ್ಟು ನೀಟ್ ಆಗಿ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧ ಒಂದಷ್ಟು ಹೊಸ ಟ್ವಿಸ್ಟ್ ಗಳಿವೆ. ಸಣ್ಣ ಸಸ್ಪೆನ್ಸ್ ಕೂಡ ಇದೆ. ಅದೇ ಸಿನಿಮಾದ ಕುತೂಹಲ ಕೆರಳಿಸುತ್ತಾ ಹೋಗುತ್ತೆ.

ಇಲ್ಲಿ ತಾಯಿ ಸೆಂಟಿಮೆಂಟ್ ವರ್ಕೌಟ್ ಆಗಿದೆ. ಕಥೆಯಲ್ಲಿ ಗ್ರಾಮೀಣ ಭಾಗದ ಸ್ಪರ್ಶವಿದ್ದರೂ ಈಗಿನ ಟ್ರೆಂಡ್ ಗೆ ಬೇಕಾದ ಎಲಿಮೆಂಟ್ಸ್ ಹೇರಳವಾಗಿದೆ. ಅದೇನು ಎಂಬುದನ್ನು ಸಿನಿಮಾದಲ್ಲೇ ಕಾಣಬೇಕು.

ಇನ್ನು ಕೆಲವು ಕಡೆ ಬೇಡದ ಸನ್ನಿವೇಶಗಳಿವೆ. ಗೆಳೆಯರ ಬಳಗದಲ್ಲಿ ಒಂದು ಪಾತ್ರ ಏನೇನೋ ಡೈಲಾಗ್ ಹೇಳಿ ವಿನಾಕಾರಣ ಕಿರಿಕಿರಿ ಎನಿಸುತ್ತೆ. ಅದು ಬಿಟ್ಟರೆ, ಸಿನಿಮಾದಲ್ಲಿ ಅಷ್ಟೇನು ತಪ್ಪು ಕಾಣಿಸಲ್ಲ.

ಇಲ್ಲಿ ಹಾಡು ಮತ್ತು ಫೈಟ್ ಪ್ಲಸ್. ಚಿತ್ರದ ಮೂರು ಹಾಡುಗಳು ಗುನುಗುವಂತಿವೆ. ಜಬರ್ದಸ್ತ್ ಫೈಟ್ಚಕೂಡ ಖುಷಿ ಕೊಡುತ್ತೆ. ಸೆಕೆಂಡ್ ಹಾಫ್ ಸ್ವಲ್ಪ ಭಾವುಕತೆಗೆ ದೂಡುತ್ತೆ. ಉಳಿದಂತೆ ಒಂದೊಳ್ಳೆಯ ಫೀಲ್ ಕೊಡುವ ಸಿನಿಮಾ ಇದು.

ಯಾರು ಹೇಗೆ?

ಮೊದಲ ಬಾಲ್ ನಲ್ಲೇ ನಾಯಕ ಸಮರ್ಜಿತ್ ಲಂಕೇಶ್ ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ ಕನ್ನಡಕ್ಕೆ ಪ್ರತಿಭಾವಂತ ಯುವ ನಟನ ಆಗಮನವಾದಂತಾಗಿದೆ. ಮೊದಲ ಸಿನಿಮಾವಾದರೂ ಅನುಭವಿಯಂತೆ ಕಾಣುತ್ತಾರೆ. ಡ್ಯಾನ್ಸು, ಫೈಟು, ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಪಕ್ಕಾ ಲವರ್ ಬಾಯ್ ಆಗಿ ನೆಲೆ ಕಾಣುವ ಲಕ್ಷಣಗಳಿವೆ.
ಸಾನ್ಯಾ ಕೂಡ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮಾನಸಿ ಸುಧೀರ್, ಸಂಪತ್ ಕುಮಾರ್ ಇರುವಷ್ಟು ಕಾಲ ಕಾಡುತ್ತಾರೆ. ಮಾನಸಿ ಅವರ ನಟನೆ ಭಾವುಕತೆ ಹೆಚ್ಚಿಸುತ್ತದೆ.

ಇನ್ನು ಛಾಯಾಗ್ರಾಹಕ ಎ.ವಿ. ಕೃಷ್ಣಕುಮಾರ್ ಕೈಚಳಕದಲ್ಲಿ ಗೌರಿ ಅಂದವಾಗಿ ಮೂಡಿಬಂದಿದೆ.
ಹಾಡುಗಳ ವಿಚಾರಕ್ಕೆ ಬಂದರೆ, ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬೇರಗಿ, ಅನಿರುದ್ ಶಾಸ್ತ್ರಿ ಇವರ ಕೆಲಸ‌ ಎದ್ದು ಕಾಣುತ್ತೆ.

ಒಂದು ಗಮನಿಸಬೇಕಾದ ವಿಷಯ ಅಂದರೆ, ಇಲ್ಲಿ ಅನಗತ್ಯ ದೃಶ್ಯವಿಲ್ಲ. ವಿನಾಕಾರಣ ಮಾತಿಲ್ಲ, ಕಥೆಯ ಚೌಕಟ್ಟು ಮೀರಿ ಏನೂ ಇಲ್ಲ. ಸದ್ಯ ಕನ್ನಡಕ್ಕೊಬ್ಬ ನಾಯಕ ನಟನ ಆಗಮನವಾಗಿದೆ ಅನ್ನೋದಂತೂ ಪಕ್ಕಾ.

Related Posts

error: Content is protected !!