‘ಫೈರ್‌ಫ್ಲೈ’ನಲ್ಲಿ ಪದ್ಮಳಾದ ಸುಧಾರಾಣಿ..ದೀಪಾವಳಿಗೆ ಬರಲಿದೆ ನಿವೇದಿತಾ ನಿರ್ಮಾಣದ ಚೊಚ್ಚಲ ಸಿನಿಮಾ
ನಿವೇದಿತಾ ಶಿವರಾಜ್ ಕುಮಾರ್ ‘ಫೈರ್‌ಫ್ಲೈ’ಗೆ ಸುಧಾರಾಣಿ ಎಂಟ್ರಿ. ಪದ್ಮ ಪಾತ್ರದಲ್ಲಿ ಮಿಂಚಲಿದ್ದಾರೆ ಹಿರಿಯ ನಟಿ
ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾ ತಾರಾಬಳಗದ ಮೂಲಕ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ನಟಿ ಹಾಗೂ ನಿರ್ದೇಶಕಿಯಾಗಿರುವ ಶೀತಲ್ ಶೆಟ್ಟಿ, ಹಿರಿಯ ಕಲಾವಿದ ಮೂಗು ಸುರೇಶ್ ಅವರನ್ನು ಚಿತ್ರತಂಡ ಪರಿಚಯಿಸಿತ್ತು. ಫೈರ್ ಫ್ಲೈ ಸಿನಿಮಾ ಬಳಗಕ್ಕೀಗ ಹಿರಿಯ ನಟಿ ಸುಧಾರಾಣಿ ಸೇರಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಅದ್ಭುತ ಕಲಾವಿದೆಯಾಗಿರುವ ಸುಧಾರಾಣಿ ಈಗ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾದ ಭಾಗವಾಗಿದ್ದಾರೆ. ಅವರು ಪದ್ಮಾ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನ ತಾಯಿಯಾಗಿ ಸುಧಾರಾಣಿ ಒಂದೊಳ್ಳೆ ಪಾತ್ರವನ್ನು ನಿಭಾಯಿಸಿರುವ ಖುಷಿ ಅವರಲ್ಲಿದೆ. ಈಗಾಗಲೇ ಸುಧಾರಾಣಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾತಾಡಿರುವ ಸುಧಾರಾಣಿ, ‘ಅಪ್ಪಾಜಿಯವರ ಮನೆಯಿಂದ ಯಾರು ಏನೇ ಮಾಡಿದರೂ ಅದು ನನ್ನ ತವರು ಮನೆ. ಹಾಗಾಗಿ ಇವತ್ತಿಗೂ ಅವರಲ್ಲಿ ಯಾರಾದ್ರೂ ಬಂದು ಹಿಂದೆ ಬಂದು ನಿಂತು ಹೋಗು ಅಂದ್ರೆ ನಾನು ತಯಾರಿದ್ದೇನೆ. ಏಕೆಂದರೆ ಇದು ನನ್ನ ಮನೆ. ನಿವಿ ನನ್ನ ಕಣ್ಣ ಮುಂದೆ ಹುಟ್ಟಿ ಬೆಳೆದಂತ ಮಗು, ಇವತ್ತು ಅವಳು ಒಂದು ನಿರ್ಮಾಣ ಸಂಸ್ಥೆ ಶುರು ಮಾಡುತ್ತಿದ್ದಾಳೆ, ಅವಳು ನಿರ್ಮಾಪಕಿಯಾಗಿದ್ದಾಳೆ. ನನಗೆ ತುಂಬಾ ಖುಷಿ ಇದೆ. ಕಥೆಯಿಂದ ಹಿಡಿದು ಪ್ರೊಡಕ್ಷನ್ ವರೆಗೂ ಸಿನೆಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ನಮ್ಮ ಕನ್ನಡದ ಕಲಾಭಿಮಾನಿಗಳು ಈ ಚಿತ್ರಕ್ಕೆ ಬೆಂಬಲ ನೀಡಬೇಕು. ನಿರ್ದೇಶಕರಿಗೆ ಸ್ವಲ್ಪ ಮುಜುಗರ ಇತ್ತು. ನನ್ನ ಇಷ್ಟು ಚಿಕ್ಕ ಪಾತ್ರ ಕೇಳಬೇಕು ಅಂತಾ ಆದ್ರೆ ಚೊಚ್ಚಲ ನಿರ್ದೇಶಕರಾಗಿ ಅವರಲ್ಲಿದ್ದ ಹುಮ್ಮಸ್ಸು. ಆಸಕ್ತಿ ನನಗೆ ಇಷ್ಟ ಆಯಿತು. ನಿರ್ದೇಶಕರಾಗಿ ನಟನೆಯೂ ಮಾಡುತ್ತಿರುವುದರಿಂದ ಎಲ್ಲರಿಗೂ ಅವರ ಮೊದಲ ಸಿನಿಮಾ ದೊಡ್ಡ ಬಜೆಟ್, ಮಲ್ಟಿಸ್ಟಾರ್ಸ್, ಆಕ್ಷನ್ ಸಿನಿಮಾ ಆಗಿರಬೇಕು ಅಂತಾ ಬಹುತೇಕರು ಯೋಚನೆ ಮಾಡುತ್ತಾರೆ. ಆದರೆ ಈ ವಿಚಾರದಲ್ಲಿ ಅವರು ವಿಭಿನ್ನ. ಸಂಬಂಧಗಳ ಬಗ್ಗೆ ಅವರು ಫೋಕಸ್ ಮಾಡಿದ್ದಾರೆ. ಇಡೀ ಕುಟುಂಬ ಕುಳಿತುಕೊಂಡು, ನೋಡಿ ಇಷ್ಟವಾಗುವಂತ ಚಿತ್ರವನ್ನು ಮಾಡಿದ್ದಾರೆ’ ಎಂದಿದ್ದಾರೆ.
‘ಫೈರ್ ಫ್ಲೈ’ ಚಿತ್ರದಲ್ಲಿ ವಂಶಿ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಈಗ ನಿವೇದಿತಾ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ.
ಶಿವರಾಜಕುಮಾರ್ ಅವರು ಯಾವಾಗಲೂ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅವರ ರೀತಿಯೇ ನಿವೇದಿತಾ ಶಿವರಾಜಕುಮಾರ್ ಕೂಡ ಹೊಸಬರಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ. ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಸಂಸ್ಥೆಯು ಅವರ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಈ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.
‘ಫೈರ್ ಫ್ಲೈ’ ಚಿತ್ರಕ್ಕೆ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆಯ ಬರೆಯುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಒಂದು ಹಾಡಿನ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ.