ತ್ರಿವಿಕ್ರಮ ಲಿರಿಕಲ್ ವಿಡಿಯೋ ಸಾಂಗ್ ಹೊರಬಂತು
ಮಕ್ಕಳ ದಿನಾಚರಣೆಗೊಂದು ಸ್ಪೆಷಲ್ ಗಾನ
ಕನ್ನಡದಲ್ಲಿ ಸದ್ಯಕ್ಕೆ “ತ್ರಿವಿಕ್ರಮ” ಸಿನಿಮಾ ಜೋರು ಸುದ್ದಿ ಮಾಡುತ್ತಲೇ ಇದೆ. ಆರಂಭದಿಂದಲೂ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿರುವುದು ಗೊತ್ತೇ ಇದೆ. ಈಗಾಗಲೇ ಕ್ರೇಜಿಸ್ಟಾರ್ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ “ತ್ರಿವಿಕ್ರಮ” ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ನಿರೀಕ್ಷೆ ಮೂಡಿಸಿರುವುದಂತೂ ನಿಜ. ಆ ನಿರೀಕ್ಷೆಗೆ ತಕ್ಕಂತೆಯೇ ಈಗಾಗಲೇ ಚಿತ್ರದ ಫಸ್ಟ್ ಲುಕ್ ಟೀಸರ್ , ಮೋಷನ್ ಪೋಸ್ಟರ್ ಎಲ್ಲವೂ ಮಾತಾಡುತ್ತಿದೆ. ಅಷ್ಟೇ ಯಾಕೆ, ಕಳೆದ ಮಹಲಾಕ್ಷ್ಮಿ ಹಬ್ಬದಂದೇ ವಿಕ್ರಮ್ ಅಭಿನಯದ ಈ “ತ್ರಿವಿಕ್ರಮ” ಚಿತ್ರದ ಆಡಿಯೋ ಹಕ್ಕು ದಾಖಲೆ ಮಟ್ಟಕ್ಕೆ ಮಾರಾಟ ಆಗಿದ್ದು ಎಲ್ಲರಿಗೂ ಗೊತ್ತಿದೆ. ಚಿತ್ರತಂಡ ಈಗ ಅದೇ ಖುಷಿಯಲ್ಲಿ ನವೆಂಬರ್ ೧೪ರಂದು ಮಕ್ಕಳ ದಿನಾಚರಣೆ ಅಂಗವಾಗಿ, ಸಖತ್ ಆಗಿರುವ ಹಾಡೊಂದನ್ನು ಬಿಡುಗಡೆ ಮಾಡಿದೆ.
ಹೌದು, ಮಕ್ಕಳ ದಿನಾಚರಣೆಯ ದಿನದಂದು ವಿಶೇಷವಾಗಿ ಮಕ್ಕಳಿಗೆ ಇಷ್ಟವಾಗುವ, ತಾಯಂದಿರಿಗೂ ಇಷ್ಟವಾಗುವ ಹಾಡು ಹೊರಬಂದಿದೆ. ಅರ್ಜುನ್ ಜನ್ಯಾ ಸಂಗೀತವಿರುವ ಈ ಹಾಡಿಗೆ ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. “ಮಮ್ಮಿ ಪ್ಲೀಸ್ ಮಮ್ಮಿ” ಎಂಬ ಹಾಡು ಈಗ ಹೊರಬಂದಿದೆ. ಈ ಹಾಡಿಗೆ ಗಾಯಕ ವಿಜಯಪ್ರಕಾಶ್ ಧ್ವನಿಯಾಗಿದ್ದಾರೆ.
ಅಮ್ಮನನ್ನು ಕಾಡುವ, ಬೇಡವ ಚಿನಕುರಳಿಯಂತಿರುವ ಹಾಡು ಕೇಳುವುದಕ್ಕೆ ಒಂದು ರೀತಿ ಮಜಾ ಇದೆ. ಈಗಾಗಲೇ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ, ಚಿತ್ರದ ಹಾಡಿಗೆ ಭರಪೂರ ಮೆಚ್ಚುಗೆ ಸಿಕ್ಕಿದ್ದು, ಬಹುತೇಕ ಹುಡುಗರು ಹಾಡನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಇನ್ನು, ವಿಕ್ರಮ್ ಅವರನ್ನ ಹೀರೋ ಮಾಡಿದ್ದು ನಿರ್ದೇಶಕ ಸಹನಾ ಮೂರ್ತಿ. ಈ “ತ್ರಿವಿಕ್ರಮ” ಎಂಬ ಅದ್ಧೂರಿ ಬಜೆಟ್ ಚಿತ್ರವನ್ನು ಗೌರಿ ಎಂಟರ್ಟೈನರ್ಸ್ ಬ್ಯಾನರ್ನಲ್ಲಿ ನಿರ್ಮಿಸಿರೋದು ಸೋಮಣ್ಣ. ವಿಕ್ರಮ್ ಅವರ ಲುಕ್ ಮತ್ತು ಮ್ಯಾನರಿಸಂಗೆ ತಕ್ಕ ಕಥೆ ಹೆಣೆದು ಸಿನಿಮಾ ಮಾಡಿದ್ದಾರೆ.
ಆರಂಭದಿಂದಲೂ ತುಂಬಾನೇ ಸ್ಪೆಷಲ್ ಆಗಿಯೇ ಸಿನಿಮಾವನ್ನು ರೆಡಿ ಮಾಡಿರುವ ನಿರ್ದೇಶಕ ಸಹನಾ ಮೂರ್ತಿ, ನಿರ್ಮಾಪಕ ಸೋಮಣ್ಣ ಅವರ ಪ್ರೋತ್ಸಾಹದಿಂದ ಈಗ ಸಿನಿಮಾವನ್ನು ಇನ್ನೊಂದು ಲೆವೆಲ್ಗೆ ತೆಗೆದುಕೊಂಡು ಹೋಗಿದ್ದಾರೆ. ಈಗಾಗಲೇ ಹೊರಬಂದಿರುವ “ತ್ರಿವಿಕ್ರಮ” ಚಿತ್ರದ ಫಸ್ಟ್ ಲುಕ್ ಟೀಸರ್ ಸಾಕ್ಷಿಯಾಗಿದೆ.
ನಿರ್ಮಾಪಕ, ನಿರ್ದೇಶಕರ ಕಾಳಜಿಯ ವಿಕ್ರಮ!
ಸಿನಿಮಾ ಅಂದಮೇಲೆ ಪ್ರೀತಿ ಇರಬೇಕು. ಆ ಪ್ರೀತಿ ಇದ್ದಾಗ ಮಾತ್ರ ಒಳ್ಳೆಯ ಸಿನಿಮಾಗಳು ಹೊರಬರುತ್ತವೆ. ಆ ಸಾಲಿಗೆ “ತ್ರಿವಿಕ್ರಮ” ಸಿನಿಮಾ ಕೂಡ ಸೇರುವುದರಲ್ಲಿ ಎರಡು ಮಾತಿಲ್ಲ. ಕನಸುಗಾರನ ಮಗನನ್ನು ಸಖತ್ ಆಗಿಯೇ ತೋರಿಸುವ ಕನಸು ಕಂಡಿದ್ದ ನಿರ್ದೇಶಕ ಸಹನಾ ಮೂರ್ತಿ ಹಾಗೂ ನಿರ್ಮಾಪಕ ಸೋಮಣ್ಣ ಎಷ್ಟೇ ರಿಸ್ಕ್ ಇದ್ದರೂ ಸರಿ, ಅದ್ಭುತವಾಗಿಯೇ ಸಿನಿಮಾವನ್ನು ತೋರಿಸಬೇಕು ಎಂಬ ಉದ್ದೇಶದಿಂದ ಕೋಟಿಗಟ್ಟಲೆ ಹಣ ಹಾಕಿದ್ದಾರೆ. “ತ್ರಿವಿಕ್ರಮʼ ಸಿನಿಮಾ ಮೇಲೆ ಇವರಿಬ್ಬರಿಗೂ ತೃಪ್ತಭಾವವಿದೆ. ಈಗಾಗಲೇ ಈ ಅದ್ಧೂರಿಗೆ ಸಾಕ್ಷಿಯೆಂಬಂತೆ ಚಿತ್ರದ ಚಿತ್ರೀಕರಣ ಅದ್ಧೂರಿಯಾಗಿ ಮೂಡಿಬಂದಿರೋದು.
ಈಗಾಗಲೇ, 50 ಲಕ್ಷ ಮೊತ್ತಕ್ಕೆ ಎ೨ ಮ್ಯೂಸಿಕ್ ಸಂಸ್ಥೆ ಆಡಿಯೋ ಹಕ್ಕು ಕೂಡ ಮಾರಾಟವಾಗಿರುವುದು ಸಿನಿಮಾದ ಮೊದಲ ಗೆಲುವು ಎನ್ನಬಹುದು. ಹೀಗಾಗಿ ತ್ರಿವಿಕ್ರಮನಿಗೆ ಡಿಮ್ಯಾಂಡ್ ಇರೋದಂತು ನಿಜ. ಅಂದಹಾಗೆ, ತ್ರಿವಿಕ್ರಮ ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಹಾಗು ಯೋಗರಾಜ್ ಭಟ್ ಅವರ ಸಾಹಿತ್ಯವಿದೆ. ಅರ್ಜುನ್ ಜನ್ಯ ಸಂಗೀತದ ಹಾಡೊಂದು ಈಗ ಹೊರಬಂದಿದ್ದು ಭರ್ಜರಿ ಸೌಂಡು ಮಾಡುತ್ತಿದೆ.
ಪಕ್ಕಾ ಮಾಸ್ ಮತ್ತುಕ್ಲಾಸ್ ಸಿನ್ಮಾ
ಈ ಹಿಂದೆ “ರೋಜ್” ಹಾಗೂ “ಲೀಡರ್” ಸಿನಿಮಾವನ್ನು ಕಟ್ಟಿ ಕೊಟ್ಟ ನಿರ್ದೇಶಕ ಸಹನಾಮೂರ್ತಿ ಅವರು ನಿರ್ಮಾಪಕ ಸೋಮಣ್ಣ ಅವರ ಪ್ರೋತ್ಸಾಹದಿಂದಾಗಿ ಮಾಸ್ ಮತ್ತು ಕ್ಲಾಸ್ ಸಿನಿಮಾ ಮಾಡಿದ್ದಾರೆ. ಹಾಗೆಯೇ ಹಾಡುಗಳನ್ನೂ ಅದ್ಭುತವಾಗಿ ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ಅರ್ಜುನ್ ಜನ್ಯಾ ಬಳಿ ಸಂಗೀತ ಮಾಡಿಸಿದ್ದು, ಹಿರಿಯ ಗೀತ ಸಾಹಿತಿಗಳ ಬಳಿ ಹಾಡನ್ನು ಬರೆಸಿ, ಹಾಡಿಸಿದ್ದಾರೆ. ವಿಜಯಪ್ರಕಾಶ್ ಈಗ ” ಮಮ್ಮಿ ಪ್ಲೀಸ್ ಮಮ್ಮಿ” ಹಾಡು ಹೊಸ ಕ್ರೇಜ್ ಹುಟ್ಟಿಸಿದೆ. ಸಹಜವಾಗಿಯೇ ಚಿತ್ರತಂಡಕ್ಕೂ ಖುಷಿಯಾಗಿದೆ.