2024 ರ ಭಾರತೀಯ ಮಹಾಕಾವ್ಯ ವೈಜ್ಞಾನಿಕ ಕಾಲ್ಪನಿಕ ಸಾಹಸ ಚಲನಚಿತ್ರ ಹಾಗೂ ‘ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್’ ಪ್ರಭಾಸ್ ಅಭಿನಯದ ‘ಕಲ್ಕಿ 2898 AD’ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ. ಈವರೆಗೂ ಯಾರು ಮಾಡಿರದ ವಿನೂತನ ಪ್ರಯೋಗಕ್ಕೆ ಈ ಚಿತ್ರತಂಡ ಮುಂದಾಗಿದೆ.
ಪ್ರಭಾಸ್ ಈ ಚಿತ್ರದಲ್ಲಿ ಭೈರವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭೈರವನ ನಂಬಿಕಸ್ಥ ಗೆಳೆಯನಾಗಿ ಬುಜ್ಜಿ(ವಿಶೇಷ ಕಾರ್)ಪಾತ್ರವಿದೆ. ಈ ಎರಡು ಪಾತ್ರಗಳನಿಟ್ಟುಕೊಂಡು ಚಿತ್ರತಂಡ “B&B” ಎಂಬ ಹದಿನೈದು ಹದಿನೈದು ನಿಮಿಷಗಳ ಎರಡು ಅನಿಮೇಷನ್ ಸಿರೀಸ್ ಬಿಡುಗಡೆ ಮಾಡಿದೆ. ದೇಶದ ಪ್ರಮುಖ ನಗರಗಳ ಚಿತ್ರಮಂದಿರಗಳಲ್ಲಿ ಈ ಅನಿಮೇಷನ್ ಸಿರೀಸ್ ಏಕಕಾಲಕ್ಕೆ ಬಿಡುಗಡೆಯಾಗಿದೆ. ಈ ಎರಡು ಭಾಗಗಳು ಮೇ 31 ರಿಂದ ಅಮೇಜಾನ್ ಪ್ರೈಮ್ ನಲ್ಲಿ ನೋಡಲು ಲಭ್ಯವಿದೆ. ಈ ಅನಿಮೇಷನ್ ಸೀರಿಸ್ ನಲ್ಲಿರುವ ಭೈರವ ಹಾಗೂ ಬುಜ್ಜಿಯ ಜುಗಲ್ ಬಂದಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದು ಚಿತ್ರದ ಪ್ರಚಾರಕಷ್ಟೇ ಮಾಡಿರುವ ಅನಿಮೇಷನ್ ಸಿರೀಸ್. ಚಿತ್ರದ ಕಥೆಯೆ ಬೇರೆ. ಇದೇ ಬೇರೆ ಎಂದು ನಿರ್ದೇಶಕ ನಾಗ್ ಅಶ್ವಿನ್ ತಿಳಿಸಿದ್ದಾರೆ.
ಕಳೆದ ಅರ್ಧ ಶತಕದಿಂದ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ವೈಜಯಂತಿ ಮೂವೀಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದ್ದು, ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಈ ಚಿತ್ರದ ವಿತರಣೆ ಮಾಡುತ್ತಿದೆ.
ಬೆಂಗಳೂರಿನಲ್ಲೂ “ಕಲ್ಕಿ 2898 AD” ಚಿತ್ರದ ಅನಿಮೇಷನ್ ಸಿರೀಸ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆ.ವಿ.ಎನ್ ಪ್ರೊಡಕ್ಷನ್ ನ ಸುಪ್ರೀತ್ ಅವರು ಈ ಅನಿಮೇಷನ್ ಸಿರೀಸ್ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ. ಎರಡು ಭಾಗಗಳಲ್ಲಿ ಇಂಗ್ಲೀಷ್ ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿಬಂದಿರುವ ಈ ಅನಿಮೇಷನ್ ಸಿರೀಸ್ ಅನ್ನು ಅಮೇಜಾನ್ ಪ್ರೈಮ್ ನಲ್ಲಿ ವೀಕ್ಷಿಸಬಹುದು ಎಂದರು.
ಈ ವರ್ಷದ ಬಹು ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್ 27ರಂದು ಬಿಡುಗಡೆ ಆಗಲಿದೆ.