ರವಿ ಬೆಳಗೆರೆ ಅಂದ್ರೆ ಬೆರಗು ಮೂಡಿಸಿದ ವರ್ಣರಂಜಿತ ವ್ಯಕ್ತಿತ್ವ!

   ಅಕ್ಷರ ಮಾಂತ್ರಿಕ ಇನ್ನಿಲ್ಲ

ಒಂದು ಕಾಲದಲ್ಲಿ ಬಳ್ಳಾರಿಯೆಂಬ ಬೆಂಗಾಡಿನಿಂದ ಹೊರಟ ಹುಡುಗ ಆತ. ಮೋಟಾರ್ ಬೈಕ್ ಏರಿ ಬೆಂಗಳೂರಿಗೆ ಬಂದ. ಯೌವನದ ದಿನಗಳಲ್ಲಿ ದಿನ‌ಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿದ್ದ. ಆನಂತರದ ದಿನಗಳಲ್ಲಿ ತನ್ನದೇ ವಾರ ಪತ್ರಿಕೆ ಶುರು ಮಾಡಿ, ಬರವಣಿಗೆ, ಸಿನಿಮಾ, ನಿರೂಪಣೆ, ಭಾಷಣ, ನಟನೆಯೂ ಸೇರಿ ಹೆಸರು ಮತ್ತು ಹಣದ ಸಂಪಾದನೆಯಲ್ಲಿ ದೈತ್ಯಾಕಾರವಾಗಿ ಬೆಳೆದ. ಅಲ್ಲಿಂದಲೇ ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ‌ಲೋಕಗಳನ್ನು ಗಾಢವಾಗಿ ಆವರಿಸಿಕೊಂಡು, ಇಡೀ‌ ನಾಡನ್ನೇ ಬೆಚ್ಚಿ ಬೀಳಿಸಿದ. ಆ ಹುಡುಗ ಬೇರಾರು ಅಲ್ಲ, ಆತನ ಹೆಸರೇ ರವಿ‌ಬೆಳಗೆರೆ.

ಬಹುಮುಖ ಪ್ರತಿಭೆಯ ಇಂತಹ ರವಿ ಬೆಳಗೆರೆ ಇನ್ನಿಲ್ಲ. ಗುರುವಾರ ತಡ ರಾತ್ರಿ ಅವರು ತಮ್ಮ ಕಚೇರಿಯಲ್ಲಿಯೇ ತೀವ್ರ ಹೃದಯಾಘಾತದಿಂದ ನಿಧನರಾ ಗಿದ್ದಾರೆ. ಬಹುಕಾಲದಿಂದ ಅನಾರೋಗ್ಯದಲ್ಲಿದ್ದ ರವಿ ಬೆಳಗೆರೆ ಅದನ್ನೇ ಮೀರಿ ಬರವಣಿಗೆಯೂ ಸೇರಿ ತಮ್ಮಿಷ್ಟದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮಕಾಲೀನ ಸಂಗತಿಗಳಿಗೆ ಪ್ರತಿಕ್ರಿಯಿಸುತ್ತಾ ಅಭಿಮಾನಿಗಳನ್ನು ಬೆಚ್ಚಿಬೀಳಿಸುತ್ತಿದ್ದರು. ವಿರೋಧಿಗಳಲ್ಲಿ ನಡುಕ ಹುಟ್ಟಿಸುತ್ತಿದ್ದರು. ಇಷ್ಟಾಗಿ ಅವರು ಗುರುವಾರ ರಾತ್ರಿ ವಿಧಿಯಾಟದಲ್ಲಿ ಭಾರದ ಲೋಕಕ್ಕೆ ಪ್ರಯಾಣ ಬೆಳೆಸಿರುವುದು ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಲೋಕಕ್ಕೆ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿದೆ.

ಪತ್ರಕರ್ತರಾಗಿ ಕನ್ನಡಿಗರ ಮನೆ ಮಾತಾದ ರವಿ ಬೆಳಗೆರೆ ಅವರದು ಬಹುಮುಖ ವ್ಯಕ್ತಿತ್ವ. ಒಂಥರ ವರ್ಣ ರಂಜಿತ ಬದುಕು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಬೆಳೆಗೆರೆ ಕೆಲಸ‌ ಮಾಡದ ಕ್ಷೇತ್ರವೇ ಇಲ್ಲ. ಆರಂಭಿಕ‌ ದಿನಗಳಲ್ಲಿ ‘ಸಂಯುಕ್ತ ಕರ್ನಾಟಕ’ ದ ಕರ್ಮವೀರ ವಾರ ಪತ್ರಿಕೆಯ ಮೂಲಕ ಪತ್ರಕರ್ತರಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟವರು. ತದ‌ನಂತರ ಅಲ್ಲಿಂದ ಹೊರಬಂದು ‘ ಹಾಯ್ ಬೆಂಗಳೂರ್ ‘ ಎನ್ನುವ ವಾರ ಪತ್ರಿಕೆ ಶುರು ಮಾಡಿ, ಕನ್ನಡ ಪತ್ರಿಕೋದ್ಯಮದಲ್ಲಿ ದೊಡ್ಡ ಹವಾ ಎಬ್ಬಿಸಿ ಬಿಟ್ಟರು.

ಕಲರ್ಸ್ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಹೋಗಿ ಬಂದಿದ್ದ ಸಂದರ್ಭದಲ್ಲಿ ರವಿ ಬೆಳಗೆರೆ ಅವರನ್ನು ನಾನು ಸಂದರ್ಶಿಸಿದ ವೇಳೆ

 

‘ಹಾಯ್ ಬೆಂಗಳೂರ್ ‘ ಎಂಬ ಕಪ್ಪು ಸುಂದರಿ ಕೇವಲ ವಾರಪತ್ರಿಕೆಯಾಗದೆ, ಓದುಗನ ಒಡನಾಡಿ ಆಯಿತು. ಯಾವುದೋ ಸ್ಪೋಟಕ ಸುದ್ದಿ ಮಾತ್ರವಲ್ಲದೆ, ರವಿ ಬೆಳಗೆರೆ ಬರವಣಿಗೆಯಿಂದಲೇ ದಾಖಲೆಯ ಪ್ರಸಾರ ಸಂಖ್ಯೆ ಹೊಂದಿತು. ಅದು ಬರವಣಿಗೆ ಎನ್ನುವುದಕ್ಕಿ‌ಂತ ಓದು ಪ್ರಭುಗಳಿಗೆ ಡ್ರಗ್ಸ್ ತರಹ ಅಡಿಕ್ಟ್ ಆಯಿತು.ಯುವ ಜನತೆಯಂತೂ ‘ಓ‌ಮನಸೇ’ ಪತ್ರಿಕೆಯ ದಾಸ್ಯರಾದರು. ಅದೇ ರವಿ ಬೆಳಗರೆಯವರ ದೊಡ್ಡ ವರ್ಚಸ್ಸಿಗೆ ವೇದಿಕೆಯಾಯಿತು.‌ ಜತೆಗದು ಪತ್ರಿಕೋದ್ಯಮದ ಆಚೆಯೂ ರವಿ ಬೆಳೆಗೆರೆ ಆಲದ‌ಮರದಂತೆ‌ ಆವರಿಸಿಕೊಂಡು, ಎಲ್ಲರ ಕಣ್ಣು ಅವರತ್ತ ಬೀಳುವಂತೆ ಮಾಡಿದ್ದು ಸೋಜಿಗ.

ರವಿ ಬೆಳಗೆರೆಯವರ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ದಾಖಲೆಯ ಪುಸ್ತಕ ಆದೀತು. ತತ್ವ , ಸಿದ್ದಾಂತಗಳಾಚೆ ತನಿಗಿಷ್ಟದ ಹಾಗೆಯೇ ಬರೆಯುತ್ತಾ ಬಂದ ಬೆಳಗೆರೆ ಅದೆಷ್ಟೋ ಜನತ ಕೆಂಗಣ್ಣಿಗೆ ಗುರಿಯಾದರು. ಸತ್ಯ, ನಿಖರ ಎನ್ನುವುದಕ್ಕಿಂತ ರಂಜನೆಗೆ ಹೆಚ್ಚು ಆದ್ಯತೆ ಕೊಟ್ಟು, ದೊಡ್ಡ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡರು.‌ಹಾಗೆಯೇ ವಿರೋಧಿಗಳನ್ನು ಹೊಂದಿದ್ದರು. ಒಂದು ಕಾಲದಲ್ಲಿ ಯಾರನ್ನು ಬಿಡದೆ ಝಾಡಿಸುತ್ತಿದ್ದ ಬೆಳಗೆರೆ ಹಣ್ಣಾಗುವ ಹೊತ್ತಿಗೆ ಸಿನಿಮಾದ ನಂಟು ಹೊಂದಿ, ಮುಖ‌ಭಂಗ ಅನುಭವಿಸಿದರು.

ಸಿನಿಮಾ‌ಮತ್ತು ರವಿ ಬೆಳಗೆರೆ ಅವರದು ಇತ್ತೀಚಿನಂಟು. ಅಷ್ಟೋತ್ತಿಗಾಗಲೇ ರವಿ ಬೆಳಗೆರೆ ಈ ಟಿವಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಸಾಕಷ್ಟು ಜನಪ್ರಿಯತೆ ಹೊಂದಿದ್ದರು. ಜತೆಗೆ ರೇಡಿಯೋ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಶೂತೃಗಳ ಮನ ಗೆದಿದ್ದರು. ಅದೇ ಜನಪ್ರಿಯತೆಯಿಂದಲೇ ಸಿನಿಮಾ ರಂಗಕ್ಕೆ ಬರುತ್ತೇನೆನ್ನುವಾಗ ಕುಮಾರ ಸ್ವಾಮಿ ಅವರ ಮೆಲೊಂದು ಸಿನಿಮಾ ಮಾಡಲು ಹೋಗಿ ಸಾಕಷ್ಟು ಸುದ್ದಿ ಆಗಿದ್ದರು.‌ದೊಡ್ಡ ವಿವಾರ ಎಬ್ಬಿಸಿತು.

ಮುಂದೆ ನಟಿ‌ಲೀಲಾವತಿ ಅವರ ಕುರಿತು ಬರೆದ ರಾಜ್ ಲೀಲಾ ವಿನೋದ್ ಪುಸ್ತಕ ಸಿನಿಮಾ‌ಲೋಕದಲ್ಲಿ ಸಂಚಲನ‌ಮೂಡಿಸಿತು. ಅವರ ಬರಹದ ಪ್ರಭಾವವೇ ಹಲವು ಸಿನಿಮಾಗಳಿಗೆ ಪ್ರೇರಣೆ ನೀಡಿತ್ತು. ಭೀಮಾ ತೀರದ ಹಂತಕರು ಪುಸ್ತಕವೇ ಅದಕ್ಕೆ ಸಾಕ್ಷಿ. ಹಾಗೆಯೇ ‘ ಒಮಾರ್ಟಾ ‘ಕೂಡ ಈಗ ಸಿನಿಮಾ ಆಗುವ ಹಂತದಲ್ಲಿತ್ತು. ಬಿಗ್ ಬಾಸ್ ಮೂಲಕ ಮತ್ತೆ ಬಣ್ಣದ ಜಗತ್ತಿನಲ್ಲಿ ಸಾಕಷ್ಡು ಸುದ್ದಿಯಲ್ಲಿದ್ದರು. ಈಗ ಅವರಿಲ್ಲ ಎನ್ನುವುದು ತೀವ್ರ ದುಃಖದ ಸಂಗತಿ.

 

Related Posts

error: Content is protected !!