ಸಸ್ಪೆನ್ಸ್ ಕೊಲೆಗಳಿಗೆ ಕಾಣದ ಸೈಲೆನ್ಸ್ ಕಿಲ್ಲರ್ ನ ರೋಚಕತೆ!

ಚಿತ್ರವಿಮರ್ಶೆ: ರೇಟಿಂಗ್ 2.5 /5

ವಿಜಯ್ ಭರಮಸಾಗರ

ಚಿತ್ರ: 4ಎನ್ 6
ನಿರ್ದೇಶಕ: ದರ್ಶನ್ ಶ್ರೀನಿವಾಸ್
ನಿರ್ಮಾಣ: ಸಾಯಿ ಪ್ರೀತಿ
ತಾರಾಗಣ: ರಚನಾ ಇಂದರ್, ಭವಾನಿ ಪ್ರಕಾಶ್, ನವೀನ್ ಕುಮಾರ್, ಆದ್ಯ ಶೇಖರ್, ಅರ್ಜುನ್, ಆಶಿತಾ, ಸೌರವ್ ಇತರರು.

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ , ಮರ್ಡರ್‌ಮಿಸ್ಟ್ರಿ ಕಥೆ ಇರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ 4ಎನ್6 ಕೂಡ ಹೊರತಲ್ಲ. ಇಲ್ಲೂ ಕೊಲೆಗಳ ಸುತ್ತ ಕಥೆ ಸಾಗುತ್ತೆ. ಆದರೆ, ಮಂದಗತಿಯ ವೇಗವೇ ಸಿನಿಮಾದ ಮೈನಸ್. ಕಥೆಯ ಎಳೆ ಚೆನ್ನಾಗಿದೆ. ನಿರ್ದೇಶಕರ ನಿರೂಪಣೆ ಶೈಲಿ, ಚಿತ್ರಕಥೆಯಲ್ಲಿನ ಬಿಗಿ ಹಿಡಿತ ಇನ್ನಷ್ಟು ಗಟ್ಟಿಯಾಗಿ ಇದ್ದಿದ್ದರೆ ಒಂದೊಳ್ಳೆಯ ಸಿನಿಮಾ ಆಗುವ ಸಾಧ್ಯತೆ ಇತ್ತು. ಕಥೆ ಕಟ್ಟುವಲ್ಲಿ ಇರುವ ನಿರ್ದೇಶಕರ ಜಾಣತನ, ತೋರಿಸುವಲ್ಲಿ ಹೆಚ್ಚು ಪ್ರಭಾವ ಬೀರಿಲ್ಲ. ಆದರೂ ಒಂದಷ್ಟು ಕೊಲೆಗಳು ನಡೆಯೋದು ಯಾಕೆ, ಯಾರು ಆ ಕೊಲೆಗಳನ್ನು ಮಾಡಿದ್ದಾರೆ ಅಂತ ಬೆನ್ನತ್ತಿ ಹೋಗುವ ಸನ್ನಿವೇಶಗಳು ತಕ್ಕಮಟ್ಟಿಗೆ ಗಮನಸೆಳೆಯುತ್ತವೆ ಹೊರತು ಕುತೂಹಲ ಮೂಡಿಸಲ್ಲ.

ಇಲ್ಲಿ ವೈದ್ಯರ ಕರಾಳ ಮುಖ ಅನಾವರಣಗೊಂಡಿದೆ. ಅದು ಹೇಗೆ ಎಂಬ ಕುತೂಹಲ ಇದ್ದರೆ, ಸಮಯ ಮಾಡಿಕೊಂಡು ಸಿನಿಮಾ ನೋಡಬಹುದು. ಆರಂಭದಲ್ಲಿ ಕುತೂಹಲ ಕೆರಳಿಸುವ ಕಥೆ ದ್ವಿತಿಯಾರ್ಧ ಕೊಂಚ ಮಂದವಾಗುತ್ತೆ. ಪೊಲೀಸ್ ಅಧಿಕಾರಿಯ ಜೊತೆ ಕೊಲೆಗಳ ತನಿಖೆಯಲ್ಲಿ ತೊಡಗುವ ಫೋರೆನ್ಸಿಕ್ ತಂಡದ ಲೀಡರ್ ನೈಶಾ ಹೇಗೆಲ್ಲಾ ಕೊಲೆ ರಹಸ್ಯ ಬಯಲಿಗೆಳೆಯುತ್ತಾಳೆ ಅನ್ನೋದು ಕಥೆ. ಆ ತನಿಖೆಯ ಸನ್ನಿವೇಶಗಳು ಕೊಂಚ ಜಾಳು ಜಾಳು ಎನಿಸುತ್ತವೆ. ಅದನ್ನು ರೋಚಕವಾಗಿಸಿದಿದ್ದರೆ, ನಿಜಕ್ಕೂ ಇದು ನೋಡುಗರಿಗೆ ಸ್ವಲ್ಪವಾದರೂ ರುಚಿಸುತ್ತಿತ್ತು. ಈ ರೀತಿಯ ಕಥೆಗೆ ಹಣ ಹಾಕುವ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು.

ಇಂತಹ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಪ್ರಧಾನ. ಆದರೆ ಅದೇ ಇಲ್ಲಿ‌ ನಿಧಾನ. ಕತ್ತರಿ ಪ್ರಯೋಗ ಇನ್ನಷ್ಟು ಮೊನಚಾಗಿರಬೇಕಿತ್ತು. ಅಲ್ಲಲ್ಲೇ ಸುತ್ತುವ ಕಥೆಯಲ್ಲಿ ರೋಚಕತೆ ಸಾಲದು. ಆದರೂ ಕೊಲೆ ರಹಸ್ಯ ಭೇದಿಸುವ ದೃಶ್ಯಗಳಿಗೆ ವೇಗ ಜೋರಾಗಿರಬೇಕಿತ್ತು. ಇರುವ ಅಗತ್ಯತೆಗಳಿಗೆ ಸರಿಯಾಗಿ ನಿರ್ದೇಶಕರು ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಫಸ್ಟ್ ಹಾಫ್ ಇದ್ದಂತೆ ಸೆಕೆಂಡ್ ಹಾಫ್ ಕೂಡ ಕುತೂಹಲ ಇರಿಸಿದ್ದರೆ ತನಿಖಾ ತಂಡದ ಓಡಾಟಕ್ಕೆ ಜೈಹೋ ಎನ್ನಬಹುದಿತ್ತು.

ಏನದು ಕಥೆ?

ಬಡ ಕುಟುಂಬದ ಹುಡುಗಿ ನೈಶಾ ಬಾಲ್ಯದಲ್ಲೇ ಚುರುಕು. ಮನೆಯಲ್ಲಿ ಏನಾದರೂ ಮಿಸ್ ಆಗಿದ್ದರೆ ಅದನ್ನು ಕಲ್ಪನೆಯಲ್ಲೇ ಮನಗಂಡು ಕಂಡು ಹಿಡಿಯುವಷ್ಟು ಬುದ್ಧಿವಂತೆ. ತನ್ನ ತಾಯಿಗೆ ಮಗಳು ಪೊಲೀಸ್ ಅಧಿಕಾರಿ ಆಗಬೇಕೆಂಬ ಆಸೆ. ಅದರಂತೆ ನೈಶಾಳ ಆ ಜಾಣತನ ಆಕೆಯನ್ನು ಫೋರೆನ್ಸಿಕ್ ಡಿಟೆಕ್ಟಿವ್ ತಂಡ ಸೇರುವಂತೆ ಮಾಡುತ್ತೆ.


ಅತ್ತ ಒಂದೊಂದೇ ವೈದ್ಯರ ಕೊಲೆಗಳು ನಡೆಯುತ್ತವೆ. ಅವು ಹೇಗಾದವು ಅನ್ನೋ ಕಲ್ಪನೆಯಲ್ಲೇ ನೈಶಾ ರಿಪೋರ್ಟ್ ಕೊಟ್ಟು ತನ್ನ ಬುದ್ಧಿವಂತಿಕೆ ಪ್ರದರ್ಶಿಸುತ್ತಾಳೆ. ಅವಳ ಜೊತೆ ಪೊಲೀಸ್ ಅಧಿಕಾರಿ ಕೂಡ ಸಾಥ್ ಕೊಡುತ್ತಾರೆ. ಕೊಲೆಗಳ ಸುತ್ತ ಸಾಗುವ ಕಥೆಯಲ್ಲಿ ಯಾರು ಕೊಲೆಗಾರ ಅನ್ನೋದೆ ಸಸ್ಪೆನ್ಸ್. ಕೊನೆಗೊಂದು ಟ್ವಿಸ್ಟ್ ಇದೆ. ಅದೇ ಸಿನಿಮಾದ ತಿರುವು. ಅದೇನೆಂಬ ಕುತೂಹಲ ಇದ್ದರೆ ಚಿತ್ರ ನೋಡಬಹುದು.

ರಚನಾ ಇಂದರ್ ಪೋರೆನ್ಸಿಕ್ ಡಿಟೆಕ್ಟಿವ್ ಆಗಿ ಗಮನ ಸೆಳೆದಿದ್ದಾರೆ. ಇನ್ನಷ್ಟು ಖಡಕ್ ಫರ್ಫಾರ್ಮೆನ್ಸ್ ಬೇಕಿತ್ತು. ನಿರ್ದೇಶಕರು ಹೇಳಿದ್ದಷ್ಟೇ ಮಾಡಿದಂತಿದೆ. ಇನ್ನು, ಪೊಲೀಸ್ ಅಧಿಕಾರಿಯಾಗಿ ಭವಾನಿ ಪ್ರಕಾಶ್ ಸಿಗರೇಟ್ ಎಳೆದು ಹೊಗೆ ಬಿಡುವಷ್ಟಕ್ಕೆ ಮಾತ್ರ ಸೀಮೀತ. ಅವರ ನಟನೆಯಲ್ಲೂ ಖದರ್ ಇಲ್ಲ. ಒಂದೊಳ್ಳೆ ಕಥೆಗೆ ನ್ಯಾಯ ಸಲ್ಲಿಸುವ ನಟನೆ ಕಡಿಮೆ ಎನಿಸಿದೆ. ಉಳಿದಂತೆ ರಚನಾ ತಾಯಿಯಾಗಿ ಕಾಣಿಸಿಕೊಂಡಿರುವ ಪಾತ್ರ ಗಮನ ಸೆಳೆಯುತ್ತೆ. ಇತರೆ ಪಾತ್ರಗಳು ನಿರ್ದೇಶಕರ ಪ್ರಕಾರ ಕಾಣಿಸಿಕೊಂಡಿವೆ.
ಚರಣ್ ತೇಜ್ ಕ್ಯಾಮೆರಾ ಕೈಚಳಕ ಪರವಾಗಿಲ್ಲ. ಸಂಗೀತಕ್ಕಿನ್ನೂ ಧಮ್ ಬೇಕಿತ್ತು.

Related Posts

error: Content is protected !!