ಉಗ್ರಾವತಾರ ಮೋಷನ್ ಪೋಸ್ಟರ್ ಬಂತು
ಪ್ರಿಯಾಂಕ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಒಂದಷ್ಟು ವಿಶೇಷತೆಗಳು ನಡೆದಿವೆ. ಕಳೆದ ವರ್ಷದ ಹುಟ್ಟುಹಬ್ಬ ಆಚರಣೆ ವೇಳೆ, “ಉಗ್ರಾವತಾರ” ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು. ಈ ಹುಟ್ಟುಹಬ್ಬಕ್ಕೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಅಷ್ಟಕ್ಕೂ “ಉಗ್ರಾವತಾರ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು ನಟ ಉಪೇಂದ್ರ. ಮೋಷನ್ ಪೋಸ್ಟರ್ ವೀಕ್ಷಿಸಿದ ಉಪೇಂದ್ರ, ಚಿತ್ರದ ಕೆಲ ತುಣುಕು ನೋಡಿದರೆ, ಮಾಲಾಶ್ರೀ ಅವರ ಚಿತ್ರಗಳು ನೆನಪಾಗುತ್ತವೆ ಎಂದು ಹೇಳುವುದರ ಜೊತೆಗೆ, ಪ್ರಿಯಾಂಕ ಉಪೇಂದ್ರ ಅವರು ಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದು, ಚಿತ್ರ ಎಲ್ಲರಿಗೂ ಗೆಲುವು ಕೊಡಲಿ ಎಂದು ಶುಭಹಾರೈಸಿದ್ದಾರೆ.
ಪ್ರಿಯಾಂಕ ಉಪೇಂದ್ರ ಅವರು ಈ ಹಿಂದೆ “ಸೆಕೆಂಡ್ ಹಾಫ್” ಚಿತ್ರದಲ್ಲಿ ಪೊಲೀಸ್ ಆಗಿ ಕಾಣಿಸಿಕೊಂಡಿದ್ದರು. ಈಗ “ಉಗ್ರಾವತಾರ” ಚಿತ್ರದಲ್ಲಿ ಇನ್ಸ್ಪೆಕ್ಟರ್ ಆಗಿ ಮಿಂಚಲಿದ್ದಾರೆ. ಅವರು ತಮ್ಮ ಪಾತ್ರದ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. “ಆರಂಭದಲ್ಲಿ ನಿರ್ದೇಶಕರು ಕಥೆ ಮತ್ತು ಪಾತ್ರದ ಕುರಿತು ವಿವರಿಸಿದಾಗ, ನಾನು ಈ ಪಾತ್ರವನ್ನು ನಿರ್ವಹಿಸಬಹುದಾ ಎಂಬ ಪ್ರಶ್ನೆ ಕಾಡಿದ್ದು ನಿಜ. ಆದರೆ, ಚಿತ್ರದ ನಿರ್ಮಾಪಕರು, ನಿರ್ದೇಶಕರು ಮತ್ತು ಛಾಯಾಗ್ರಾಹಕರು ಧೈರ್ಯ ತುಂಬಿ ಎಲ್ಲರೂ ಪ್ರೋತ್ಸಾಹಿಸಿ ಸಾಥ್ ಕೊಟ್ಟಿದ್ದರಿಂದ ಪಾತ್ರದಲ್ಲಿ ಜೀವಿಸಲು ಸಾಧ್ಯವಾಯಿತು. ಇನ್ನು, ಈ ಚಿತ್ರದಲ್ಲಿ ವಾಸ್ತವ ಅಂಶಗಳಿವೆ. ಮಹಿಳೆಯರ ಮೇಲಿನ ಶೋಷಣೆ, ಅಪರಾಧ ಇದರ ಜೊತೆಗೆ ಒಂದಷ್ಟು ಗಂಭೀರ ವಿಷಯಗಳನ್ನು ಇಟ್ಟುಕೊಂಡೇ ನಿರ್ದೇಶಕರು ಕಮರ್ಷಿಯಲ್ ಅಂಶಗಳೊಂದಿಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು, ನಾನಿಲ್ಲಿ ಸ್ಟಂಟ್ ಮಾಡಿದ್ದೇನೆ. ಎಲ್ಲವೂ ನೈಜವಾಗಿರಬೇಕೆಂಬ ಕಾರಣಕ್ಕೆ ಡ್ಯೂಪ್ ಇಲ್ಲದೆಯೇ ಒಂದಷ್ಟು ತರಬೇತಿ ಪಡೆದುಕೊಂಡೇ ಕ್ಯಾಮೆರಾ ಮುಂದೆ ಫೈಟ್ ಮಾಡಿದ್ದೇನೆ. ಇನ್ನು, ಐಪಿಎಸ್ ಅಧಿಕಾರಿ ರೂಪ ಮೇಡಮ್ ನನಗೆ ಪ್ರೇರಣೆ ಎಂಬುದು ಪ್ರಿಯಾಂಕ ಉಪೇಂದ್ರ ಅವರ ಮಾತು.
ನಿರ್ದೇಶಕ ಗುರುಮೂರ್ತಿ ಅವರಿಗೆ ಪ್ರಿಯಾಂಕ ಉಪೇಂದ್ರ ಅವರ ಜೊತೆ ಕೆಲಸ ಮಾಡಿದ್ದು ತುಂಬಾನೇ ಹೆಮ್ಮೆ ಎನಿಸಿದೆಯಂತೆ. ಅವರೇ ಹೇಳುವಂತೆ, ಮೇಡಮ್ ಚಿತ್ರೀಕರಣ ವೇಳೆ ತಮ್ಮ ಪಾತ್ರದ ಬಗ್ಗೆ ಸಾಕಷ್ಟು ಆಸಕ್ತಿ ವಹಿಸುತ್ತಾರೆ, ಕಾಳಜಿ ತೋರುತ್ತಾರೆ. ಅವರ ಸಹಕಾರ, ಪ್ರೋತ್ಸಾಹದಿಂದಲೇ ನಾವೀಗ ಶೇ.30 ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಸದ್ಯ ಮೂರು ಫೈಟ್ಸ್ ಬಾಕಿ ಇದೆ. ಚಿತ್ರದಲ್ಲಿ ಮಹಿಳೆಯರಿಗೆ ಹೇಗೆ ಗೌರವ ತೋರಬೇಕು ಎಂಬುದು ಹೈಲೆಟ್. ಸತ್ಯಪ್ರಕಾಶ್, ಸುಮನ್ ಸೇರಿದಂತೆ ಇತರರು ನಟಿಸಿದ್ದಾರೆ. ಇಷ್ಟು ದಿನ ಪ್ರಿಯಾಂಕ ಅವರು ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಮೊದಲ ಸಲ ಈ ಚಿತ್ರದಲ್ಲಿ ಸ್ಟಂಟ್ ಮಾಡುವ ಮೂಲಕ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸಂಕ್ರಾಂತಿ ಹೊತ್ತಿಗೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ ಎಂಬುದು ನಿರ್ದೇಶಕರ ಮಾತು. ಈ ಚಿತ್ರವನ್ನು ಎಸ್.ಜಿ.ಸತೀಶ ನಿರ್ಮಿಸಿದ್ದಾರೆ. ಕಿನ್ನಾಳ್ ರಾಜ್ ಸಂಭಾಷಣೆ, ಸಾಹಿತ್ಯ ಬರೆದಿದ್ದಾರೆ. ವೀಣಾ ನಂದಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.