ಆಕ್ಷನ್ ಕ್ವೀನ್ ಮಾಲಾಶ್ರೀ ಗ್ಯಾಪ್ ನಂತರ ’ನೈಟ್ ಕರ್ಫ್ಯೂ’ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಸೇನೆಯಲ್ಲಿದ್ದು ಸೇವೆ ಸಲ್ಲಿಸಿದ ವೈದ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಹಸ ಹಾಗೂ ಕುತೂಹಲದ ಕಥೆ ಹೊಂದಿದ್ದು, ಕೋವಿಡ್ 19 ಸಂದರ್ಭದಲ್ಲಿ ನಡೆದಂತಹ ಸತ್ಯ ಘಟನೆಗಳನ್ನು ತೆಗೆದುಕೊಂಡು ಅದನ್ನು ದೃಶ್ಯ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.
ರಚನೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ರವೀಂದ್ರವೆಂಶಿ. ಇವರು ಈ ಹಿಂದೆ ’ಪುಟಾಣಿ ಸಫಾರಿ’ ’ಮಠ’ ಮತ್ತು ’ವಾಸಂತಿ ನಲಿದಾಗ’ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯುಎ ಪ್ರಮಾಣಪತ್ರ ನೀಡಿದೆ.
ಬಿಲ್ಡರ್ ಹಾಗೂ ಡೆವಲಪರ್ ಆಗಿರುವ ಬೆಂಗಳೂರಿನ ಬಿ.ಎಸ್.ಚಂದ್ರಶೇಖರ್ ನಿರ್ಮಾಣ ಮಾಡಿದ್ದ ಮಕ್ಕಳ ಸಿನಿಮಾ ’ಪುಟಾಣಿ ಸಫಾರಿ’ ಅನೇಕ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಗಳಿಸಿತ್ತು. ಅಲ್ಲದೆ ನೂರು ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಇದರ ಪ್ರೇರಣೆಯಿಂದಲೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶಕ್ತಿಗಾಗಿ ಮಾಲಾಶ್ರೀ, ಯುಕ್ತಿಗಾಗಿ ರಂಜನಿರಾಘವನ್ ಸಹ ಡಾಕ್ಟರ್ ಆಗಿ ನಟನೆ ಮಾಡಿದ್ದಾರೆ.
ಇವರೊಂದಿಗೆ ಪ್ರಮೋದ್ಶೆಟ್ಟಿ, ರಂಗಾಯಣರಘು, ಸಾಧುಕೋಕಿಲ, ಸಹನಶ್ರೀ, ಅಶ್ವಿನ್ರಮೇಶ್, ವರ್ಧನ್ತೀರ್ಥಹಳ್ಳಿ, ಮಂಜುಪಾವಗಡ, ಮಂಡ್ಯಸಿದ್ದು, ಸದಾನಂದ, ಗಂಗರಾಜು, ನಿತಿನ್, ವಸಂತಕುಮಾರ್.ಸಿ, ಬೇಬಿ ಮೌಲ್ಯಮಂಜುನಾಥ, ಜ್ಯೋತಿ, ರಜನಿ, ಶಿವರಾಜ್ಶೆಟ್ಟಿ, ಮಹೇಶ್.ಎಂ, ಅಲ್ಸೂರು ರಾಜಕುಮಾರ್ ಅಭಿನಯಿಸಿದ್ದಾರೆ.
ಹಿನ್ನಲೆ ಸಂಗೀತ ಎಂ.ಎಸ್.ಮಾರುತಿ, ಛಾಯಾಗ್ರಹಣ ಪ್ರಮೋದ್ಭಾರತೀಯ, ಸಾಹಸ ಜಾಗ್ವಾರ್ಸಣ್ಣಪ್ಪ, ಸಂಕಲನ ಸಿ.ರವಿಚಂದ್ರನ್ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿದ್ದಗೊಂಡಿದ್ದು, ಏಪ್ರಿಲ್ 12ರಂದು ತೆರೆ ಕಾಣುತ್ತಿದೆ.