ಸದಾ ಹೊಸಬರ ಹೊಸ ಪ್ರಯತ್ನಗಳಿಗೆ ಬೆನ್ನು ತಟ್ಟುವ ಕೆಲಸವನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಪುನೀತ್ ರಾಜಕುಮಾರ್ ಮಾಡಿಕೊಂಡು ಬರುತ್ತಿದ್ದರು. ಈಗ ಆ ಕೆಲಸವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪಿ.ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “O2” ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಇದೇ ಏಪ್ರಿಲ್ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಪುನೀತ್ ರಾಜಕುಮಾರ್ ಅವರು ಕೇಳಿ ಮೆಚ್ಚಿಕೊಂಡ ಕೊನೆಯ ಸಿನಿಮಾ ಕಥೆ.
“ಮಾಯಾಬಜಾರ್” ಚಿತ್ರದ ರಾಧಾಕೃಷ್ಣ ಅವರ ಮೂಲಕ ನಮಗೆ ಪುನೀತ್ ರಾಜಕುಮಾರ್ ಅವರ ಪರಿಚಯವಾಯಿತು. ಈ ಚಿತ್ರದ ಕಥೆ ಕೇಳಿದ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಿರ್ಮಾಣಕ್ಕೆ ಮುಂದಾದರು. “O2”, ಪ್ರಮುಖವಾಗಿ ಮೆಡಿಕಲ್ ಕುರಿತಾದ ಸಿನಿಮಾ. ಹೃದಯ ಸ್ತಂಭನವಾಗಿ ಸಾವಿನಂಚಿಗೆ ತಲುಪಿದ ವ್ಯಕ್ತಿಯನ್ನು “02” ಡ್ರಗ್ ಮೂಲಕ ಬದುಕಿಸಬಹುದು. ಆ ಹೊಸ ಆವಿಷ್ಕಾರವನ್ನು ನಮ್ಮ ಚಿತ್ರದಲ್ಲಿ ನಾಯಕಿ ಶ್ರದ್ದಾ(ಆಶಿಕಾ ರಂಗನಾಥ್) ಮಾಡುತ್ತಾರೆ. “O2” ಡ್ರಗ್ ಕುರಿತು ಸಂಶೋಧನೆ ನಡೆಸುವಾಗ ಆಕೆ ಸಾಕಷ್ಟು ಸವಾಲುಗಳನ್ನು ಎದರಿಸುತ್ತಾರೆ.
ಇದಷ್ಟೇ ಅಲ್ಲದೆ ನಮ್ಮ ಚಿತ್ರದಲ್ಲಿ ಪ್ರೀತಿ, ಅನಿರೀಕ್ಷಿತ ತಿರುವುಗಳು ಹಾಗೂ ಮನರಂಜನೆ ಕೂಡ ಇದೆ. ಕನ್ನಡದಲ್ಲಿ ಈ ರೀತಿಯ ಕಥೆ ವಿರಳ ಎನ್ನಬಹದು. ಅವಕಾಶ ನೀಡಿದ ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು ಎಂದರು ನಿರ್ದೇಶಕ ದ್ವಯರಾದ ಪ್ರಶಾಂತ್ ರಾಜ್ ಹಾಗೂ ರಾಘವ್ ನಾಯಕ್. ರಾಘವ್ ನಾಯಕ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ ಕೂಡ.
ಇದು ಅಪ್ಪು ಅವರು ಇದ್ದಾಗ ಕೇಳಿದ ಕಥೆ ಎಂದು ಮಾತನಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಾನು ಹಾಗೂ ಅವರು ಇಬ್ಬರು ಒಟ್ಟಿಗೆ ಈ ಕಥೆ ಕೇಳಿದ್ದೆವು. ಇದು ಅಪ್ಪು ಅವರು ಕೇಳಿದ ಕೊನೆಯ ಕಥೆ. “O2” ಈಗ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದ ಹಾಡು ಹಾಗೂ ಕ್ಕೈಮ್ಯಾಕ್ಸ್ ನನಗೆ ಬಹಳ ಇಷ್ಟವಾಯಿತು. ಸದ್ಯದಲ್ಲೇ ಎರಡು ಚಿತ್ರಗಳನ್ನು ನಮ್ಮ ಸಂಸ್ಥೆಯಿಂದ ಆರಂಭಿಸುತ್ತಿದ್ದೇವೆ. ಏಪ್ರಿಲ್ 19 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ನಮ್ಮ ಇಡೀ ಕುಟುಂಬದವರು ರಾಜಕುಮಾರ್ ಅವರ ಕುಟುಂಬದ ಅಪ್ಪಟ್ಟ ಅಭಿಮಾನಿಗಳು. ಅಂತಹುದರಲ್ಲಿ ನನಗೆ ಪುನೀತ್ ರಾಜಕುಮಾರ್ ಅವರ ನಿರ್ಮಾಣದ ಚಿತ್ರದಲ್ಲಿ ನಟಿಸುವ ಆವಕಾಶ ಸಿಕ್ಕಾಗ ತುಂಬಾ ಸಂತೋಷವಾಯಿತು. ನನ್ನದು ಈ ಚಿತ್ರದಲ್ಲಿ ಎನ್ ಆರ್ ಐ ವೈದ್ಯನ ಪಾತ್ರ ಎಂದು ನಾಯಕ ಪ್ರವೀಣ್ ತೇಜ್ ತಿಳಿಸಿದರು.
ಶ್ರದ್ದಾ ನನ್ನ ಪಾತ್ರದ ಹೆಸರು. ನಾನು ಕೂಡ ಈ ಚಿತ್ರದಲ್ಲಿ ವೈದ್ಯೆ. ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ ಎನ್ನುತ್ತಾರೆ ನಟಿ ಆಶಿಕಾ ರಂಗನಾಥ್. ಸಂಗೀತ ನಿರ್ದೇಶಕ ವಿವಾನ್ ರಾಧಾಕೃಷ್ಣ ಹಾಗೂ ನಟ ಪುನೀತ್ ಬಾ ಉಪಸ್ಥಿತರಿದ್ದರು.
ಪುಟ್ಟಸ್ವಾಮಿ ಕೆ.ಬಿ ಹಾಗೂ ಸತೀಶ್ ವಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ “O2” ಚಿತ್ರಕ್ಕೆ ನವೀನ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ. ಆಶಿಕಾ ರಂಗನಾಥ್, ಪ್ರವೀಣ್ ತೇಜ್, ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ, ಪುನೀತ್ ಬಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.