ಸಿನಿಮಾ ಮಾಡಬೇಕೆಂಬ ಆಸಕ್ತಿಯಿಂದ ಐಟಿ ಕಂಪನಿಯಲ್ಲಿ ಒಳ್ಳೇ ಉದ್ಯೋಗವಿದ್ದರೂ ಸಹ ಚಿತ್ರರಂಗಕ್ಕೆ ಬಂದಿದ್ದಾರೆ ಆನಂದ್ ಅಹಿಪತಿ. ಸಿನಿಮಾ ಮಾಡುವುದಕ್ಕೂ ಮುನ್ನ ಅದೇ ಕ್ವಾಲಿಟಿಯಲ್ಲಿ ಸತ್ಯ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಕಥಾಹಂದರ ಒಳಗೊಂಡಿದೆ. ಈ ಕಿರುಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ಆನಂದ್ ಅಹಿಪತಿ ಅವರೇ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಯಾವುದೇ ಚಿತ್ರಕ್ಕೂ ಕಮ್ಮಿಯಿಲ್ಲದ ಹಾಗೆ ಈ ಕಿರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಆನಂದ್, 3 ವರ್ಷದ ಹಿಂದೆ ಐಟಿ ಕಂಪನಿಯಲ್ಲಿ ವರ್ಕ್ ಮಾಡ್ತಿದ್ದೆ. ಆದರೆ ನನಗೆ ಇಂಟರೆಸ್ಟ್ ಇದ್ದದ್ದು ಆಕ್ಟಿಂಗ್ ನಲ್ಲಿ. ಅನುಪಂ ಖೇರ್ ಇನ್ ಸ್ಟಿಟ್ಯೂಟ್ ನಲ್ಲಿ ಕೋರ್ಸ್ ಮುಗಿಸಿ, ಈ ಶಾರ್ಟ್ ಫಿಲಂನಲ್ಲಿ ಅಭಿನಯಿಸಿದೆ. ಹಠ ಹಿಡಿದು 38 ನಿಮಿಷಗಳ ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ಇದು ಪ್ರೀಕ್ವೇಲ್ ಟು ಫ್ಯೂಚರ್ ಫಿಲಂ ಅನ್ನಬಹುದು, ಹಣದ ಬಗ್ಗೆ ಯೋಚಿಸದೆ ಕ್ವಾಲಿಟಿ ಹೆಚ್ಚು ಆದ್ಯತೆ ಕೊಟ್ಟು ಈ ಚಿತ್ರ ಮಾಡಿದ್ದೇನೆ.
ಸತ್ಯ ಅಂದ್ರೆ ನಿಜ, ಈತ ಒಬ್ಬ ಸೈಕೋ ಕಿಲ್ಲರ್, ಆತನ ಮನದಲ್ಲಿ ಏನೇನು ನಡೀತಿದೆ ಅನ್ನೋದೇ ಈ ಚಿತ್ರದ ಕಾನ್ಸೆಪ್ಟ್. ಆತ ಏನೇನು ಮಾಡ್ತಾನೆ, ಯಾಕೆ ಮಾಡ್ತಾನೆ, ಹೇಗೆ ಮಾಡ್ತಾನೆ ಅಂತ ಈ ಚಿತ್ರದಲ್ಲಿ ತೋರಿಸಿದ್ದೇವೆ. ಕೊನೇವರೆಗೆ ನೋಡಿದಾಗ ಅದು ಅರ್ಥವಾಗುತ್ತದೆ ಎಂದರು. ನಾಯಕಿ ಪಾತ್ರ ಮಾಡಿರುವ ಸೌಮ್ಯ ಮಾತನಾಡಿ ಈ ಸಿನಿಮಾ ಆನಂದ್ ರ ಕನಸು, ಇದೊಂದು ವಿಭಿನ್ನ ಜಾನರ್ ಸಿನಿಮಾ, ನಾನೊಬ್ಬ ಕಲಾವಿದೆಯಾಗೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು.
ದುರ್ಗಾ ಸಿನಿಮಾಸ್ ಮೂಲಕ ನಿರ್ದೇಶಕ ಆನಂದ್ ಅಹಿಪತಿ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿದ್ದು, ಅಜಯ್ ಶಿವರಾಜ್ ಸಂಗೀತ ನಿರ್ದೆಶನ ಮಾಡಿದ್ದಾರೆ. ಕಾರ್ತೀಕ್ ಸಿದ್ದರಾಜು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.