ಇತ್ತೀಚಿನ ದಿಗಳಲ್ಲಿ ಭಕ್ತಿಪ್ರಧಾನ ಮತ್ತು ಪೌರಾಣಿಕ ಚಿತ್ರಗಳ ನಿರ್ಮಾಣ ಕಡಿಮೆಯಾಗುತ್ತಿವೆ. ಅದರಲ್ಲೂ ಕೆಲವರು ಅಂಥಾ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಹೇಮಂತ್ ಪ್ರೊಡಕ್ಷನ್ಸ್ ಮೂಲಕ ಹೇಮಂತ್ ಕುಮಾರ್ ಅವರು ಸೂರ್ಯವಂಶದ ಸಾಮ್ರಾಟ್ ಮಾಂಧಾತನ ಕಥೆಯನ್ನು ತೆರೆಮೇಲೆ ತರುತ್ತಿದ್ದಾರೆ. ನಿರ್ಮಾಣದ ಜೊತೆಗೆ ಚಿತ್ರದ ನಿರ್ದೇಶನ ಕೂಡ ಮಾಡಿದ್ದಾರೆ.
ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಇತ್ತೀಚೆಗೆ ಸಾಮ್ರಾಟ್ ಮಾಂಧಾತ ಚಿತ್ರದ ಟ್ರೈಲರನ್ನು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ಬಿಡುಗಡೆಗೊಳಿಸಿದರು.
ಇಕ್ಷ್ವಾಕು ವಂಶದ (ಸೂರ್ಯವಂಶ) ಯುವನಾಶ್ವ ಮಹಾರಾಜನ ಮಗನಾದ ಮಾಂಧಾತ ತನ್ನ ಸತ್ಯ ಮತ್ತು ಧರ್ಮದ ಆಡಳಿತದಿಂದಲೇ ಪ್ರಖ್ಯಾತಿ ಗಳಿಸಿದ್ದನು. ಶಶಬಿಂದುವಿನ ಮಗಳು ಬಿಂದುಮತಿ ಚೈತ್ರರಥಿಯನ್ನು ವರಿಸಿದ ಮಾಂಧಾತನಿಗೆ ಪುರುಕುತ್ಸ ಅಥವಾ ಸುಸಂಧಿ, ಅಂಬರೀಷ ಮತ್ತು ಮುಚುಕುಂದರೆಂಬ ಮೂವರು ಗಂಡು ಮಕ್ಕಳು ಮತ್ತು ಐವತ್ತು ಹೆಣ್ಣುಮಕ್ಕಳಿದ್ದರೆಂದು ಹೇಳಲಾಗುತ್ತಿದೆ. ಆತನ ಕಥೆಯನ್ನು “ಸಾಮ್ರಾಟ್ ಮಾಂಧಾತ” ಚಿತ್ರದ ಮೂಲಕ ಹೇಮಂತ್ ಅವರು ನಿರೂಪಿಸಹೊರಟಿದ್ದಾರೆ.
ಅಂದುಕೊಂಡಂತೆ ಆದರೆ ಏಪ್ರಿಲ್ನಲ್ಲಿ ಸಾಮ್ರಾಟ ಮಾಂಧಾತ ತೆರೆಗೆ ಬರುವ ಸಾಧ್ಯತೆಗಳಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಓಂ ಸಾಯಿ ಪ್ರಕಾಶ್ ಆಗಿನ ಕಾಲದಲ್ಲಿ ಕಥೆ ಬರೆಯಲು 6 ತಿಂಗಳು, ವರ್ಷ ಕಷ್ಟಪಡುತ್ತಿದ್ದೆವು. ಒಳ್ಳೆಯ ಕಂಟೆಂಟ್ ಇಟ್ಟುಕೊಂಡು ಮಾಡಿದ ಯಾವುದೇ ಸಿನಿಮಾ ಯಶಸ್ವಿಯಾಗುತ್ತವೆ. ಅದೇ ರೀತಿ ಈ ಚಿತ್ರವೂ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ನಿರ್ದೇಶಕ ನಿರ್ಮಾಪಕ ಹೇಮಂತ್ ಕುಮಾರ್ ಮಾತನಾಡಿ ಇದು ಪೌರಾಣಿಕ ಚಿತ್ರ. ಇದರಲ್ಲಿ ಅಭಿನಯಿಸಿರುವ ಎಲ್ಲರೂ ರಂಗಭೂಮಿ ಕಲಾವಿದರು. ಐದಾರು ತಿಂಗಳವರೆಗೆ ಎಲ್ಲರಿಗೂ ತರಬೇತಿ ನೀಡಿದ ನಂತರ ಕ್ಯಾಮೆರಾ ಮುಂದೆ ಅಭಿನಯಿಸಿದ್ದಾರೆ .ಕೋರೋನಾ ಸಮಯದಲ್ಲಿ ಚಿತ್ರೀಕರಣ ಆರಂಭಿಸಿದ್ದೆವು. ವಿಎಫ್ಎಕ್ಸ್ ಜಾಸ್ತಿ ಇರೋದ್ರಿಂದ ಚಿತ್ರ ಮೂರು ವರ್ಷ ತೆಗೆದುಕೊಂಡಿತು. ಮುಂದಿನವಾರ ಸೆನ್ಸಾರ್ ಗೆ ಅಪ್ಲೈ ಮಾಡಿ, ಏಪ್ರಿಲ್ನಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ. ತ್ರೇತಾಯುಗದ ಆದಿಭಾಗದಲ್ಲಿ ಭೂಲೋಕದಲ್ಲಿ ಅಧರ್ಮ ಹೆಚ್ಚಾದಾಗ ಧರ್ಮದೇವ ಶನಿ ಮಹಾತ್ಮನ ಮೊರೆ ಹೋಗುತ್ತಾನೆ.
ಆ ಸಂದರ್ಭದಲ್ಲಿ ಶನಿ ಮತ್ತು ಲಕ್ಷ್ಮಿಯ ನಡುವೆ ಯಾರು ಶ್ರೇಷ್ಠರೆಂದು ನಿರ್ಧರಿಸುವ ಕಥೆಯೇ ಸಾಮ್ರಾಟ್ ಮಾಂಧಾತ ಎಂದರು
ಚಿತ್ರದಲ್ಲಿ ಮಾಂಧಾತನಾಗಿ ನಟಿಸಿರುವ ಬಸವರಾಜು ಅವರು ನಾಟಕದಲ್ಲೂ ಸಹ ಅದೇ ಪಾತ್ರ ಮಾಡಿ ಗುರುತಿಸಿಕೊಂಡವರು. ಉಳಿದಂತೆ ಶನಿದೇವನಾಗಿ ನಟಿಸಿರುವ ಸುಂದರಬಾಬು, ಬಿಂದುಮತಿಯಾಗಿ ಕಾಣಿಸಿಕೊಂಡಿರಯವ ಭಾರತಿ, ನಾರದನಾಗಿರುವ ನಂಜುಂಡಪ್ಪ, ಶೌಭರಿ ಮಹರ್ಷಿಯಾಗಿರುವ ನರಸಿಂಹಮೂರ್ತಿ, ಯವನಾಶ್ವನಾಗಿರುವ ಮಂಜುನಾಥ, ಕಲಾನಿರ್ದೇಶಕ ರವಿ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಸಾಮ್ರಾಟ ಮಾಂಧಾತ ಚಿತ್ರಕ್ಕೆ ಆರ್.ವೀರೇಂದ್ರಕುಮಾರ್ ಸಂಭಾಷಣೆ ಸಾಹಿತ್ಯ ರಚಿಸಿದ್ದಾರೆ. ಶಿವರಾಮ್ ಅವರ ಸಂಕಲನ ಈ ಚಿತ್ರಕ್ಕಿದೆ.