ದಿವ್ಯಕುಮಾರ್ ಎಚ್.ಎನ್. ನಿರ್ಮಾಣದ ಹಾಗೂ ಸಿದ್ದು ಸಿ ಕಟ್ಟಿಮನಿ ನಿರ್ದೇಶನದ “ಅಲೆಮಾರಿ ಈ ಬದುಕು” ಚಿತ್ರ ಫೆಬ್ರವರಿ 16 ರಂದು ತೆರೆಗೆ ಬರುತ್ತಿದೆ. ಬಿಡುಗಡೆಗೂ ಮುನ್ನ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಟ ಹಾಗೂ ಸಮಾಜಿಕ ಹೋರಾಟಗಾರ ಚೇತನ್ ಅಹಿಂಸ ಹಾಗೂ ಪರಿಸರ ಪ್ರೇಮಿ ಪ್ರಕೃತಿ ಪ್ರಸನ್ನ ಮುಖ್ಯ ಅತಿಥಿಗಳಾಗಿ ಆಗಮಿಸಿ ಟೀಸರ್, ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ನಮ್ಮ ಚಿತ್ರತಂಡದ ಬಹುತೇಕ ಸದಸ್ಯರು “ಅಲೆಮಾರಿ” ಗಳು. ಒಂದು ಹಂತ ತಲುಪಬೇಕೆಂದು ಅಲೆದು, ಅಲೆದು ಇಂದು ಇಲ್ಲಿ ಬಂದು ಕುಳಿತ್ತಿದ್ದೇವೆ. “ಅಲೆಮಾರಿ”ಗಳ ಕುರಿತಾಗಿಯೇ ನಮ್ಮ ಚಿತ್ರದ ಕಥೆ ಇದೆ. ” “ಪ್ರೇಮಪೂಜ್ಯಂ” ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿದ್ದ ನನಗೆ ಇದು ಮೊದಲ ನಿರ್ದೇಶನದ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಹಾಗೂ ನಿರ್ದೇಶನವನ್ನು ನಾನೇ ಮಾಡಿದ್ದೇನೆ. ಫೆಬ್ರವರಿ 16ರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಸಿದ್ದು ಸಿ ಕಟ್ಟಿಮನಿ ತಿಳಿಸಿದರು.
ನಿರ್ದೇಶಕ ಸಿದ್ದು ಸಿ ಕಟ್ಟಿಮನಿ ಅವರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ಖಂಡಿತಾವಾಗಿಯೂ ಈ ಚಿತ್ರ ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ. ನಮ್ಮ ಚಿತ್ರಕ್ಕೆ ಹಾರೈಸಲು ಬಂದಿರುವ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕ ದಿವ್ಯಕುಮಾರ್.
ಚಿತ್ರದಲ್ಲಿ ಐದು ಹಾಡುಗಳಿದೆ. ನಿರ್ದೇಶಕ ಸಿದ್ದು ಸಿ ಕಟ್ಟಿಮನಿ ಹಾಗೂ ಮನೋಜ್ ಸೌಗಂದ್ ಬರೆದ್ದಿದ್ದಾರೆ ಎಂದು ತಿಳಿಸಿದ ಸಂಗೀತ ನಿರ್ದೇಶಕ ತ್ಯಾಗರಾಜ ಎಂ.ಎಸ್, ಹಾಡುಗಳ ಹಾಗೂ ಹಾಡಿದವರ ಬಗ್ಗೆ ಪರಿಚಯ ಮಾಡಿದರು. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.
ಈ ಚಿತ್ರತಂಡದವರು ಹಾಡುಗಳನ್ನು ನನಗೆ ತೋರಿಸಿದಾಗ ಬಹಳ ಇಷ್ಟವಾಯಿತು. ಬೇರೆ ಬೇರೆ ಕಡೆ ಹರಿಯುವ ನದಿಗಳು ಸಮುದ್ರವನ್ನು ಸೇರಿದಂತೆ. ಈ ತಂಡದವರು ಬೇರೆ ಬೇರೆ ಕಡೆಯಿಂದ ಬಂದು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಸಿರಿ ಮ್ಯೂಸಿಕ್ ಮೂಲಕ ಈ ಚಿತ್ರದ ಹಾಡುಗಳನ್ನು ಕೇಳಿ ಆನಂದಿಸಿ ಎಂದರು ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ.
ನಾನು ಮೂಲತಃ ರಂಗಭೂಮಿ ಕಲಾವಿದ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೇನೆ ಜೊತೆಗೆ ಸಂಕಲನಕಾರನಾಗೂ ಕಾರ್ಯ ನಿರ್ವಹಿಸಿದ್ದೇನೆ ಎಂದು ಶ್ರೀಧರ್ ಅಟವಿ ತಿಳಿಸಿದರು.
ನಟರಾದ ಸಂದೀಪ್, ರಾಘವೇಂದ್ರ ಸಿ ಕಟ್ಟಿಮನಿ ನಟಿಯರಾದ ಸಹನ ಹಾಗೂ ನೀಲಾಂಬಿಕ ಮುಂತಾದವರು “ಅಲೆಮಾರಿ ಈ ಬದುಕು” ಚಿತ್ರದ ಬಗ್ಗೆ ಮಾತನಾಡಿದರು.