ಬೆಂಗಳೂರಿಗೆ ಐಟಿ ಸಿಟಿ ಎಂದು ಹೆಸರು ಬರಲು “ಎಲೆಕ್ಟ್ರಾನಿಕ್ ಸಿಟಿ” ಪ್ರಮುಖ ಕಾರಣ. ಅಷ್ಟು ಐಟಿ ಕಂಪನಿಗಳು ಅಲ್ಲಿದೆ. ಅಂತಹ ಪ್ರತಿಷ್ಠಿತ ಬಡಾವಣೆಯ ಹೆಸರೆ ಚಿತ್ರದ ಶೀರ್ಷಿಕೆಯಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆಯುತ್ತಿದೆ.
ಕೆ.ಪಿ.ಸಿ.ಸಿ ಜನರಲ್ ಸೆಕ್ರೆಟರಿ ಶಿವಣ್ಣ, ಶಿಕ್ಷಣ ತಜ್ಞ ವುಡೆ ಪಿ ಕೃಷ್ಣ ಹಾಗೂ ಚಲನಚಿತ್ರ ನಿರ್ದೇಶಕ ಲಿಂಗದೇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಆರ್ ಚಿಕ್ಕಣ್ಣ ನಿರ್ಮಿಸಿ , ನಿರ್ದೇಶಿಸಿರುವ “ಎಲೆಕ್ಟ್ರಾನಿಕ್ ಸಿಟಿ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.
ನಾನು ಹದಿನಾರು ವರ್ಷದಿಂದ ಐಟಿ ಉದ್ಯೋಗದಲ್ಲಿದ್ದೇನೆ. ಐಟಿ ಉದ್ಯೋಗಿಗಳ ಬದುಕಿನ ಬಗ್ಗೆ ಚಿತ್ರ ಮಾಡುವ ಅಸೆ ಬಂತು. ಐದು ವರ್ಷಗಳ ಹಿಂದೆ ಈ ಚಿತ್ರದ ಕಥೆ ಬರೆದೆ. ಕಥೆಯ ಕುರಿತು ಚಿತ್ರರಂಗದ ಅನೇಕರ ಜೊತೆ ಚರ್ಚಿಸಿ, 2021ರಲ್ಲಿ ಚಿತ್ರೀಕರಣ ಆರಂಭ ಮಾಡಿದೆ.
2022 ರಲ್ಲಿ ಚಿತ್ರ ಸಿದ್ದವಾಯಿತು. ಈವರೆಗೂ ನಲವತ್ತೆರಡಕ್ಕೂ ಅಧಿಕ ಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿರುವ ನಮ್ಮ ಚಿತ್ರ ಮೂವತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ವಿವಿಧ ಭಾಗಗಳಲ್ಲಿ ಪಡೆದುಕೊಂಡಿದೆ.
ನವೆಂಬರ್ 24 ಚಿತ್ರ ತೆರೆಗೆ ಬರಲಿದೆ ನೋಡಿ ಹಾರೈಸಿ ಎಂದರು ನಿರ್ದೇಶಕ – ನಿರ್ಮಾಪಕ ಆರ್ ಚಿಕ್ಕಣ್ಣ.
ಈ ಚಿತ್ರದಲ್ಲಿ ನಾನು ಐಟಿ ಉದ್ಯೋಗಿ. ಚಿಕ್ಕಣ್ಣ ಅವರ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಬಂದಿದೆ. ಈ ಚಿತ್ರದಿಂದ ನನಗೆ “ಘೋಸ್ಟ್” ಚಿತ್ರದಲ್ಲಿ ನಟಿಸುವ ಅವಕಾಶ ದೊರೆಯಿತು ಎಂದು ನಾಯಕ ಆರ್ಯನ್ ಶೆಟ್ಟಿ ತಿಳಿಸಿದರು.
ನಾಯಕಿಯರಾದ ದಿಯಾ ಆಶ್ಲೇಶ, ರಕ್ಷಿತ ಕೆರೆಮನೆ ಹಾಗೂ ನಟಿ ರಶ್ಮಿ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಕಲನಾಕಾರ ಸೌಂದರ್ ರಾಜ್ ಹಾಗೂ ಕಲಾ ನಿರ್ದೇಶಕ ಹಂಪಿ ಸುಂದರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.