ರೇಟಿಂಗ್: 5/ 3.5
ವಿಜಯ್ ಭರಮಸಾಗರ
ಚಿತ್ರ: ಟಗರು ಪಲ್ಯ
ನಿರ್ದೇಶನ: ಉಮೇಶ್ ಬಿ. ಕೃಪ
ನಿರ್ಮಾಣ : ಧನಂಜಯ
ತಾರಾಗಣ: ನಾಗಭೂಷಣ, ಅಮೃತಾ ಪ್ರೇಮ್, ರಂಗಾಯಣ ರಘು, ತಾರಾ, ಬಿರಾದಾರ, ಶರತ್ ಲೋಹಿತಾಶ್ವ, ಮಹಾಂತೇಶ್, ಹುಲಿ ಕಾರ್ತಿಕ್, ವಾಸುಕಿ ವೈಭವ್, ಚೈತ್ರಾ ಶೆಣೈ ಇತರರು.
‘ತಾಯಿ ನಮ್ಮವ್ವಂಗೆ ಹೆಂಗೋ ನನ್ ಲವ್ ವಿಷ್ಯ ಗೊತ್ತಾಗದೆ ಕಾಪಾಡಮ್ಮ…’
ನಾಯಕಿ ಈ ಡೈಲಾಗ್ ಹೇಳುವ ಹೊತ್ತಿಗೆ, ಆ ಹಳ್ಳಿ ಜನರೊಟ್ಟಿಗೆ ಊರ ಗೌಡ ತನ್ನ ಮಗಳ ಮದ್ವೆ ಸೆಟ್ಟೇರಿದರೆ, ಇಲ್ಲಿ ಬಂದು ಪೂಜೆ ಮಾಡಿಸಿ, ಟಗರು ಬಲಿ ಕೊಟ್ಟು ಬಾಡೂಟ ಹಾಕಿಸ್ತೀನಿ ಅಂತ ಬೆಟ್ಟದ ಕೆಳಗಿರುವ ನದಿ ಸಮೀಪದ ಕಾಡೊಳಗಿರುವ ಹೆಣ್ ದೇವ್ರಿಗೆ ಹರಕೆ ತೀರಿಸಲು ಬಂದಿರ್ತಾನೆ. ಅಲ್ಲಿ ಹರಕೆ ಈಡೇರುತ್ತಾ, ಮಗಳ ಮದ್ವೆ ನಡೆಯುತ್ತಾ, ಜನ ಬಾಡೂಟ ಸವಿತಾರ ಅನ್ನೋದೇ ಕಥೆ.
ಒಂದೇ ಮಾತಲ್ಲಿ ಹೇಳುವುದಾದರೆ, ಇದೊಂದು ಅಪ್ಪಟ ದೇಸಿ ಕಥೆಯ ಚಿತ್ರ. ಪಕ್ಕಾ ಹಳ್ಳಿ ಸೊಗಡು ತುಂಬಿರುವ ಕಥಾವಸ್ತು. ಸಿನಮಾದ ಮುಖ್ಯ ಆಕರ್ಷಣೆ ಅಂದರೆ, ಭಾಷೆ ಮತ್ತು ಇಡೀ ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಟ್ಟಿರೋದು.
ಇಲ್ಲಿ ನಿರ್ದೇಶಕರ ಜಾಣ್ಮೆ ಎದ್ದು ಕಾಣುತ್ತೆ. ರಾಶಿ ಪಾತ್ರಗಳನ್ನು ಕಟ್ಟಿಕೊಂಡು ಕಾಡೊಳಗಿನ ನದಿ ಬದಿಯ ಕಲ್ಲು ದೇವರನ್ನು ಪೂಜಿಸುವ ಮತ್ತು ಅಲ್ಲಿ ನಡೆಯುವ ಡ್ರಾಮಾಗಳೆ ಸಿನಿಮಾದ ತಾಕತ್ತು.
ಹೊಡಿ ಬಡಿ ಕಡಿ ಸಿನಿಮಾಗಳ ಮಧ್ಯೆ ಕುಟುಂಬ ಪ್ರೀತಿಯ ಕಥೆ ಕಟ್ಟಿಕೊಡುವ ಮೂಲಕ ನೋಡುಗರನ್ನು ನಗಿಸುವ ಮತ್ತು ಸಂಬಂಧಗಳ ಮೌಲ್ಯ ಸಾರುವಲ್ಲಿ ಚಿತ್ರ ಯಶಸ್ವಿ.
ಮೊದಲರ್ಧ ಹಾಸ್ಯಮಯವಾಗಿಯೇ ಸಾಗುವ ಸಿನಿಮಾದಲ್ಲಿ ಎಲ್ಲೂ ತೆಗೆದು ಹಾಕುವ ಅಂಶಗಳಿಲ್ಲ. ಯಾವ ದೃಶ್ಯದಲ್ಲೂ ಅನಗತ್ಯ ಮಾತಾಗಲಿ, ಅಸಹ್ಯ ತರುವ ದೃಶದಯಗಳಾಗಲಿ ಇಲ್ಲ. ಸಿನಿಮಾ ನೋಡುವಾಗ, ನಮ್ಮ ಅಕ್ಕಪಕ್ಕದ ಮನೆಯ ಕಥೆಯೇನೋ ಎಂಬ ಫೀಲ್ ಬರುತ್ತೆ. ಅದಕ್ಕೆಕಾರಣ ನಿರ್ದೇಶಕರು ಆಯ್ಕೆ ಮಾಡಿಕೊಂಡ ಕಥೆ ಮತ್ತು ನಿರೂಪಿಸಿರುವ ಜಾಣತನ.
ಗ್ರಾಮೀಣ್ಯ ಭಾಗದಲ್ಲಿ ನಡೆಯೋ ದೇವರ ಆಚರಣೆ, ಆಚಾರ, ವಿಚಾರಗಳ ಜೊತೆಗೆ ನಂಬಿಕೆಯ ಸುತ್ತಬಕಥೆ ಸಾಗುತ್ತೆ. ಹಾಗಾಗಿ ಇಲ್ಲಿ ಯಾವುದು ಡಮ್ಮಿ ಎನಿಸಲ್ಲ. ಎಲ್ಲವೂ ನೈಜತೆ ಎನಿಸುತ್ತೆ. ಆಯ್ಕೆ ಮಾಡಿಕೊಂಡ ಪಾತ್ರಗಳೂ ಕೂಡ ಸಿನಿಮಾ ವೇಗ ಹೆಚ್ಚಿಸಲು ಕಾರಣವಾಗಿವೆ.
ಮೊದಲಿಗೆ ಕಥೆ ಗಮನ ಸೆಳೆದರೆ, ಅದರೊಳಗಿನ ಭಾಷೆ ಆಪ್ತವೆನಿಸುತ್ತೆ. ದೇವ್ರ ಆಚರಣೆ ಅಂದರೆ ಗ್ರಾಮೀಣ ಜನರ ಭಕ್ತಿ, ನಂಬಿಕೆ, ಉತ್ಸಾಹ. ಅದಿಲ್ಲೂ ಚಾಚು ತಪ್ಪದೆ ಸೆರೆಹಿಡಿಯುವಲ್ಲಿ ನಿರ್ದೇಶಕರು ಯಶಸ್ವಿ.
ಇನ್ನು ಮೊದಲರ್ಧ ಚಿತ್ರ ಸಾಕಷ್ಟು ನಗಿಸಿಕೊಂಡೇ ಸಾಗುತ್ತೆ. ದ್ವಿತಿಯಾರ್ಧ ಕೂಡ ಸಣ್ಣ ತಿರುವು ಪಡೆದು ಒಂದಷ್ಟು ಸಂಬಂಧಗಳ ಮೌಲ್ಯ ಬಗ್ಗೆ ಹೇಳುತ್ತೆ. ಇಲ್ಲೂ ಪ್ರೀತಿ, ನಂಬಿಕೆ, ಕುಟುಂಬಗಳ ನಡುವಿನ ಬಾಂಧವ್ಯ ಇತ್ಯಾದಿ ಅಂಶಗಳು ಕಾಡುತ್ತವೆ. ಆ ಕಾರಣಕ್ಕೆ ಟಗರು ಪಲ್ಯ ಇಷ್ಟವಾಗುತ್ತೆ.
ಕಥೆ ಏನು?
ಮಗಳಿಗೆ ಸಿಟಿ ಹುಡುಗನ ಹುಡುಕಿ ಮದ್ವೆ ಸೆಟ್ಟಾದರೆ ಊರ ಬೆಟ್ಟದ ಬಳಿ ಇರುವ ಹೆಣ್ ದೇವ್ರಿಗೆ ಟಗರು ಬಲಿ ಕೊಟ್ಟು ಬಾಡೂಟ ಹಾಕಿಸ್ತೀನಿ ಎಂಬುದು ಗೌಡನ ಹರಕೆ. ಜನರ ಜೊತೆ ಹೋಗುವ ಗೌಡನ ಟಗರು ದೇವ್ರ ಮುಂದೆ ತಲೆ ಅಲ್ಲಾಡಿಸಿ, ಒದರಬೇಕು. ಆದರೆ, ಆ ಟಗರು ಒದರೋದೇ ಇಲ್ಲ. ಅಲ್ಲಿಗೆ ಬಲಿ ಕೊಡುವಂತೆಯೂ ಇಲ್ಲ. ಈ ನಂಬಿಕೆ ಪ್ರತೀತಿ ಮುಂದುವರೆಯುತ್ತಲೇ ಟಗರು ಬಲಿ ಕೊಡುವ ಪ್ರಸಂಗ ನಡೆಯುತ್ತೆ. ಅದೇ ಸಿನಿಮಾದ ಟ್ವಿಸ್ಟು. ಟಗರು ಯಾಕೆ ಒದರಲ್ಲ? ಹರಕೆ ಈಡೇರುತ್ತಾ? ಮಗಳ ಮದ್ವೆ ನಡೆಯುತ್ತಾ? ಬಾಡೂಟ ಸವಿಯಲು ಬಂದ ಜನರ ಆಸೆ ಫಲಿಸುತ್ತಾ ಅನ್ನೋದೇ ಕಥೆ. ಇಂತಹ ಮಜವಾದ ಕಥೆಯುಳ್ಳ ಚಿತ್ರ ನೋಡುವ ಕುತೂಹಲ ಇದ್ದರೆ ಮಿಸ್ ಮಾಡಬೇಡಿ.
ಯಾರು ಹೇಗೆ?
ನಾಗಭೂಷಣ ಚಿಕ್ಕನ ಪಾತ್ರ ಮೂಲಕ ಕಾಡುತ್ತಾರೆ, ನಗಿಸಿ ಅಳಿಸುತ್ತಾರೆ. ಅಮೃತಾ ಪ್ರೇಮ್ ಮೊದಲ ಬಾಲ್ ನಲ್ಲೇ ಬೌಂಡರಿ ಬಾರಿಸಿದ್ದಾರೆ. ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರಿಗೆ ಮುಂದೆ ಚಿತ್ರರಂಗದಲ್ಲಿ ಭವಿಷ್ಯ ಎದ್ದು ಕಾಣುತ್ತೆ. ರಂಗಾಯಣ ರಘು ಪಾತ್ರ ಕೊನೆಯವರೆಗೂ ನೆನಪಲ್ಲುಳಿಯುತ್ತೆ. ಒಬ್ಬ ತಂದೆಯಾಗಿ ಅವರು ಆಪ್ತವೆನಿಸುತ್ತಾರೆ. ತಾರಾ ಅಮ್ಮನಾಗಿ ಇಷ್ಟವಾಗುತ್ತಾರೆ. ಶರತ್ವಲೋಹಿತಾಶ್ವ, ಬಿರಾದಾರ, ಮಹಾಂತೇಶ್, ಚಿತ್ರಾ ಶೆಣೈ, ವಾಸುಕಿ ವೈಭವ್ ಸೇರಿದಂತೆ ಹಲವರು ಪಾತ್ರಕ್ಕೆ ಮೋಸ ಮಾಡಿಲ್ಲ.
ಹಾಡು ಹಾಗು ಹಿನ್ನೆಲೆ ಸಂಗೀತ ಕಥೆಗೆ ಪೂರಕ. ಛಾಯಾಗ್ರಹಣ ಕೂಡ ಪರಿಸರದ ಅಂದ ಹೆಚ್ಚಿಸಿದೆ.
ಕೊನೆ ಮಾತು : ಇಲ್ಲಿ ಸಂಬಂಜ ಅನ್ನೋದು ದೊಡ್ದು ಕನಾ ಅನ್ನೋದನ್ನು ಸಾಬೀತು ಮಾಡಲಾಗಿದೆ. ಅದೇ ಇಲ್ಲಿ ಭಾವುಕ ಪಯಣ ಅದು ಹೇಗೆ ಅನ್ನೋದನ್ನ ಸಿನಿಮಾದಲ್ಲೇ ನೋಡಬೇಕು.