ಈ ಸಿನಿಮಾರಂಗವೇ ಹಾಗೆ. ಅಂದುಕೊಂಡಿದ್ದು ಆಗೋದು ಕಷ್ಟ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಜನಮನ್ನಣೆ ಪಡೆಯುವ ಕ್ಷೇತ್ರ ಯಾವುದಾದರೂ ಇದ್ದರೆ ಅದು ಸಿನಿಮಾರಂಗ ಮಾತ್ರ. ಇಲ್ಲೂ ಗೆಲುವು ಸುಲಭವಲ್ಲ. ಹೆಸರು ಸಿಗೋದು ಸಲೀಸಲ್ಲ. ನೂರಾರು ಸಮಸ್ಯೆ ಕಷ್ಟ -ನಷ್ಟಗಳ ನಡುವೆ ಬಣ್ಣದ ಲೋಕದಲ್ಲಿ ಮಿಂದೇಳಲೇಬೇಕು. ಇಲ್ಲಿ ಯಾರು, ಯಾವಾಗ, ಹೇಗೆ ಬೇಕಾದರೂ ಆಗಬಹುದು. ಅಂತಹ ಅನೇಕ ಉದಾಹರಣೆಗಳ ಮಧ್ಯೆ ಇಲ್ಲೊಬ್ಬ ನಿರ್ದೇಶಕ ಇದ್ದಾರೆ. ಸಿನಿಮಾದಿಂದಾಗಿ ಬೀದಿಗೆ ಬಂದಿದ್ದ, ಬದುಕೇ ಸಾಕು ಅಂತ ಸಾಯಲು ಹೊರಟಿದ್ದ ಅವರು ನಿರ್ಧರಿಸಿದ್ದು, ಇಲ್ಲೇ ಇದ್ದು ಗೆಲ್ಲಬೇಕು ಅಂತ ಹಠ ಮಾಡಿದ್ದರ ಹಿನ್ನೆಲೆ, ಈಗ ತೆಲುಗು ಸ್ಟಾರ್ ನಟಿಯನ್ನು ತಮ್ಮ ಸಿನಿಮಾಗೆ ಕರೆತರುವ ಪ್ರಯತ್ನದಲ್ಲಿದ್ದಾರೆ. ಯಾರು ಆ ನಿರ್ದೇಶಕ, ಯಾವ ನಟಿಯ ಹಿಂದೆ ಬಿದ್ದಿದ್ದಾರೆ ಅನ್ನೋ ಸ್ಟೋರಿ ಇದು…
ಆ ನಿರ್ದೇಶಕ ಎದುರಿಸಿದ ಸಮಸ್ಯೆ ಒಂದಾ ಎರಡಾ? ಬಹುಶಃ ಬೇರೆ ಯಾವುದೇ ನಿರ್ದೇಶಕನಿಗೆ ಅಂಥದ್ದೊಂದು ಸಮಸ್ಯೆ ಎದುರಾಗಿದ್ದರೆ, ಅವರ ಗತಿ ಅಷ್ಟೇ…
ಇದು ಕನ್ನಡದ ನಿರ್ದೇಶಕರೊಬ್ಬರ ಇಂಟ್ರೆಸ್ಟಿಂಗ್ ಸ್ಟೋರಿ. ಹೌದು, ಅದು ಬೇರಾರು ಅಲ್ಲ, ಅವರ ಹೆಸರು ನಮ್ ಋಷಿ. ಈ ಹೆಸರು ಕೇಳಿದಾಕ್ಷಣ ನೆನಪಾಗೋದೇ, ‘ಒಳಿತು ಮಾಡು ಮನಸ ನೀ ಇರೋದು ಮೂರು ದಿವಸ…’ ಎಂಬ ಅರ್ಥಪೂರ್ಣ ಸಾಹಿತ್ಯ ಇರುವ ಗೀತೆ. ಇಂಥದ್ದೊಂದು ಗೀತೆ ರಚಿಸಿದ ನಮ್ ಋಷಿ, ಕನ್ನಡ ಸಿನಿಮಾ ರಂಗದಲ್ಲಿ ಒಂದೆರೆಡು ಸಿನಿಮಾ ನಿರ್ದೇಶನ ಮಾಡಿದ್ದರು. ಇವರು ಗೆಲುವಿಗಿಂತ ಸೋಲು ಕಂಡಿದ್ದೇ ಹೆಚ್ಚು. ನಗುವಿಗಿಂತ ಅಳುವನ್ನು ನುಂಗಿದ್ದೇ ಹೆಚ್ಚು. ಇವೆಲ್ಲದರ ಜೊತೆ ಅವಮಾನಗಳ ಸರಮಾಲೆ ಕೂಡ ಧರಿಸಿದ್ದುಂಟು.
ಸಿನಿಮಾ ಪ್ರೀತಿ ಹೆಚ್ಚಾಗಿ ಗಳಿಸಿದ್ದಕ್ಕಿಂತ ಕಳಕೊಂಡಿದ್ದೇ ಜಾಸ್ತಿ. ಸಿನಿಮಾ ಅಂದಮೇಲೆ ಲಾಸು ಲಾಭ ಕಾಮನ್. ಒಂದರ ಮೇಲೊಂದರ ಹೊಡೆತದಿಂದ ಕುಗ್ಗಿ ಹೋದ ನಿರ್ದೇಶಕ ನಮ್ ಋಷಿ, ಮೌನ ತಾಳಿದ್ದರು. ಅಷ್ಟೇ ಅಲ್ಲ, ದೂರವೇ ಉಳಿದಿದ್ದರು. ಆದರೆ, ಒಳಗಿರುವ ಬರಹಗಾರ ಸುಮ್ಮನಿರಲಿಲ್ಲ. ‘ಮೂಳೆ ಮಾಂಸದ ದೇಹಕೆ, ಚಿನ್ನದ ಲೇಪನ ಏತಕೆ’ ಎಂಬ ಮತ್ತೊಂದು ಅರ್ಥಪೂರ್ಣ ಸಾಹಿತ್ಯ ಗೀಚಿದರು. ಎಲ್ಲೆಡೆ ಈ ಹಾಡು ವೈರಲ್ ಆಯ್ತು. ‘ ಅಪ್ಪು ಮಾಡಿದ ತಪ್ಪೇನು’ ಎಂಬ ಹಾಡೂ ಹೊರಬಂತು. ಇದರ ಜೊತೆಯಲ್ಲೇ ಸದ್ದಿಲ್ಲದೆ ‘ರಾಮ್ ರಹೀಮ್’ ಎಂಬ ಸಿನಿಮಾವೊಂದನ್ನೂ ನಿರ್ದೇಶಿಸಿದ್ದಾರೆ. ಅದೀಗ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿದೆ.
ಇಷ್ಟೆಲ್ಲಾ ಮಾಡಿದ ನಮ್ ಋಷಿ, ಸಾವಿಗೆ ಮುಂದಾಗಿದ್ದರು. ಅದಕ್ಕೆ ಕಾರಣ, ‘ಒನ್ ವೇ’ ಎಂಬ ಸಿನಿಮಾ. ಈ ಸಿನಿಮಾದಲ್ಲಿ ಋಷಿ ಕೈ ಸುಟ್ಟುಕೊಂಡರು. ಸಾಲ ಮೈ ಮೇಲೆ ಬಂತು. ಇಂಡಸ್ಟ್ರಿಯಿಂದ ದೂರ ಉಳಿದರು. ಕೈಯಲ್ಲಿ ಸಿನಿಮಾ ಇಲ್ಲ. ಇನ್ನು ಸಾಲದ ಹೊರೆ ಬೇರೆ, ಸಾವಿಗೆ ಶರಣಾಗದೆ ಗತಿ ಇಲ್ಲ ಅಂತ ಸಾಯೋಕೆ ನಿರ್ಧರಿಸಿದರು. ಅದೇ ವೇಳೆ ಹಾಡೊಂದನ್ನು ಬರೆಯುವ ಅವಕಾಶ ಬಂತು. ಆಗ ‘ ಸಾವು ಇದೆ ಅಂತ ಗೊತ್ತು ಮನುಜ ನಿನಗೇ. ಸಾವಿಗಿಂತ ದೊಡ್ಡ ನಷ್ಟ ಇಲ್ಲ ಜಗದೊಳಗೆ. ಪರಿಹಾರ ಹುಟ್ಟಿದ ಮೇಲೆ ಸಮಸ್ಯೆ ಹುಟ್ಟಿದ್ದು, ಸಮಸ್ಯೆಗೆ ಅಂಜಿ ಇಲ್ಲಿ ಯಾರು ಸಾಯಬಾರದು…’ ಎಂಬ ಸಾಲು ಬರೆದರು. ಹಾಡು ಸೊಗಸಾಗಿ ಮೂಡಿಬಂತು. ಆಗ ನಮ್ ಋಷಿ ಸಾಯುವ ನಿರ್ಧಾರ ಬದಲಿಸಿದರು. ಮತ್ತೆ ಸಿನಿಮಾ ಮಾಡಲು ಹೊರಟರು. ಆಗ ನಿರ್ಧರಿಸಿದ್ದೇ ಹೊಸ ಸಿನಿಮಾ ನಿರ್ದೇಶನ ಮಾಡೋಕೆ. ಸದ್ದಿಲ್ಲದೆ ಆ ಸಿನಿಮಾ ಮಾಡಿ ಇದೀಗ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ.
ಆ ಸಿನಿಮಾಗೆ ‘ಟೈಮ್’ ಎಂದು ನಾಮಕರಣ ಮಾಡಿದ್ದಾರೆ. ಈ ಸಿನಿಮಾಗೆ ತೆಲುಗಿನ ಸ್ಟಾರ್ ನಟಿ ತಮನ್ನಾ ಅವರನ್ನು ಕರೆತರುವ ಪ್ರಯತ್ನದಲ್ಲಿದ್ದಾರೆ ಅನ್ನೋದೇ ವಿಶೇಷ. ಈಗಾಗಲೇ ತಮನ್ನಾ ಅವರ ಮ್ಯಾನೇಜರ್ ಜೊತೆ ಚರ್ಚೆ ಕೂಡ ಮಾಡಿದ್ದಾರಂತೆ. ಈ ಮೊದಲು ಕನ್ನಡದ ನಟಿಯೊಬ್ಬರನ್ನು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಕೇಳಲು ಹಲವಾರು ಸಲ ಫೋನ್ ಮಾಡಿದರೂ ಅವರು ಇವರ ಫೋನ್ ತೆಗೆದಿಲ್ಲ. ಅದೊಂದೇ ಕಾರಣಕ್ಕೆ ನಮ್ ಋಷಿ, ತಮನ್ನಾ ಮೊರೆ ಹೋಗಲು ನಿರ್ಧರಿಸಿ, ಅವರ ಮ್ಯಾನೇಜರ್ ಬಳಿ ಒಂದು ಸುತ್ತು ಮಾತಾಡಿದ್ದಾರೆ. ಅವರ ಸಂಭಾವನೆ ಹೆಚ್ಚು ಅಂತ ತಿಳಿದರೂ ಕೂಡ ಅವರನ್ನೇ ಟೈಮ್ ಸಿನಿಮಾಗೆ ಕರೆ ತರುವ ಹಠ ಮಾಡಿದ್ದಾರೆ.
ಇಂಡಸ್ಟ್ರಿಯಿಂದ ಮಾಯವಾಗೇ ಬಿಟ್ಟರು ಅಂದುಕೊಂಡರೆ ನಾನಿಲ್ಲೇ ಇದೀನಿ ಅಂತ ತೋರಿಸಲು ಈ ಬಾರಿ ದೊಡ್ಡಮಟ್ಟದಲ್ಲೇ ಸದ್ದು ಮಾಡೋಕೆ ಅಣಿಯಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಿರ್ದೇಶಕರುಗಳೇ ಅವರು ಬರ್ತಾರೆ, ಇವರು ಬರ್ತಾರೆ ಅಂತ ಸುದ್ದಿ ಮಾಡಿದ್ದು ಗೊತ್ತೇ ಇದೆ. ಆಮೇಲೆ ಅವರ್ಯಾರು ಬರದೆ ಸುಮ್ಮನಾದ ಉದಾಹರಣೆಗಳೂ ಸಾಕಷ್ಠಿದೆ. ಈಗ ಋಷಿ ತೆಲುಗು ಸ್ಟಾರ್ ನಟಿ ಕರೆತರುವ ಉತ್ಸಾಹದಲ್ಲಿದ್ದಾರೆ. ಅದು ಎಷ್ಟರಮಟ್ಟಿಗೆ ಸಾಧ್ಯವಾಗುತ್ತೋ ಗೊತ್ತಿಲ್ಲ. ಆದರೆ, ಪ್ರಯತ್ನ ಮಾಡುವುದರಲ್ಲಿ ತಪ್ಪೇನಿದೆ?ಇಷ್ಟು ವರ್ಷಗಳ ಋಷಿ ತಪಸ್ಸು ತಮನ್ನಾ ಮೂಲಕವಾದರೂ ಈಡೇರಲಿ.
ಅದೇನೆ ಇರಲಿ, ಈ ಟೈಮ್ ಕಥೆ ಬಗ್ಗೆ ಹೇಳುವ ಅವರು, ಅದೊಂದು ಕ್ರೈಮ್ ಥ್ರಿಲ್ಲರ್ ಸ್ಟೋರಿ. ತಮನ್ನಾ ಅವರು ನಟಿಸಲು ಒಪ್ಪಿಕೊಂಡರೆ, ಅವರದು ಡಿಸಿಪಿ ಪಾತ್ರವಂತೆ. ನೈಜ ಘಟನೆಗಳ ಎಳೆ ಇಟ್ಟುಕೊಂಡು ಮಾಡುತ್ತಿರುವ ಸಿನಿಮಾದಲ್ಲಿ ಹಲವು ಕಾಡುವ ಅಂಶಗಳಿರಲಿವೆ ಎಂಬುದು ನಮ್ ಋಷಿ ಮಾತು.
ಅಂದಹಾಗೆ, ಈ ಸಿನಿಮಾಗೆ ನಮ್ ಋಷಿ ಅವರದೇ ಕಥೆ, ಚಿತ್ರಕಥೆ, ಸಂಭಾಷಣೆ ಇದೆ. ಎಸ್.ಟಿ. ಸೋಮಶೇಖರ್, ಹನುಮಂತು, ನಾರಬಂಡ, ಪಾರ್ಥಸಾರಥಿ, ರಂಗನಾಥ್ ಅವರ ನಿರ್ಮಾಣವಿದೆ. ಶಂಕರ್ ಕ್ಯಾಮೆರಾ ಹಿಡಿದರೆ, ಶ್ರೀ ಗುರು ಅವರ ಸಂಗೀತವಿದೆ. ಕುಮಾರ್ ಸಂಕಲನ ಮಾಡಿದರೆ, ಥ್ರಿಲ್ಲರ್ ಮಂಜು ಅವರ ಸಾಹಸವಿದೆ. ಈ ಸಿನಿಮಾಗೆ ಕ್ರಿಯೇಟಿವ್ ಹೆಡ್ ಆಗಿ ಜಿ. ವಸಂತ್ ಕುಮಾರ್ ಕೆಲಸ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಆಸುಪಾಸಿನಲ್ಲಿ ಚಿತ್ರೀಕರಣ ನಡೆಯಲಿದೆ.