ರೇಟಿಂಗ್: 3/5
ವಿಜಯ್ ಭರಮಸಾಗರ
ಚಿತ್ರ : ಆಡೇ ನಮ್ God
ನಿರ್ದೇಶನ: ಪಿ.ಎಚ್. ವಿಶ್ವನಾಥ್
ನಿರ್ಮಾಣ: ಪ್ರೊ.ಬಿ. ಬಸವರಾಜ್, ರೇಣುಕಾ ಬಸವರಾಜ್
ತಾರಾಗಣ: ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್ ಶೂನ್ಯ, ಸಾರಿಕ ರಾವ್, ಬಿ. ಸುರೇಶ ಇತರರು.
‘ಆಡು ಕಟ್ಟಿಸಿಕೊಂಡಿದ್ದೀರಿ ಅಂದ್ರೆ ಖಂಡಿತವಾಗಿಯೂ ನಿಮಗೆ ಗಂಡು ಮಗುನೇ ಹುಟ್ಟುತ್ತೆ… ಆಡಾಣೆ… ಗಾಡಾಣೆ!
ಈ ಡೈಲಾಗ್ ಬರುವ ಹೊತ್ತಿಗೆ, ಒಂದೇ ಮನೆಯಲ್ಲಿ ವಾಸ ಮಾಡೋ ನಾಲ್ವರ ಪೈಕಿ ಮೂವರು ಬೇಜಾವಬ್ದಾರಿ ಗೆಳೆಯರಿಗೆ ಆಡು ಒಂದು ಆಕಸ್ಮಿಕವಾಗಿ ಸಿಕ್ಕಿ, ಅದು ‘ಆಡುಸ್ವಾಮಿ’ ರೂಪ ಪಡೆದು ಆ ಗೆಳೆಯರ ಬದುಕೇ ಬಂಗಾರವಾಗಿರುತ್ತೆ. ಹಲವು ತಿರುವುಗಳ ಬಳಿಕ ಆ ಗಾಡು ತೋರುವ ಮಹಿಮೆಯೇ ಚಿತ್ರದ ಟ್ವಿಸ್ಟು ಮತ್ತು ಟೆಸ್ಟು.
ಇದು ಒಂದು ಆಡು ಮತ್ತು ನಾಲ್ವರು ಗೆಳೆಯರ ಸುತ್ತ ಸಾಗುವ ಥ್ರಿಲ್ಲಿಂಗ್ ಸ್ಟೋರಿ. ಜನ ಮರುಳೋ ಜಾತ್ರೆ ಮರುಳೋ ಎಂಬ ಗಾದೆ ಮಾತು ಈ ಚಿತ್ರ ನೋಡುತ್ತ ನೆನಪಾಗುತ್ತೆ. ಕಥೆ ಚೆನ್ನಾಗಿದೆ. ಅದನ್ನು ಕಟ್ಟಿಕೊಟ್ಟಿರುವ ಪ್ರಯತ್ನವೂ ಸಾರ್ಥಕ. ನಿರ್ದೇಶಕ ಪಿ.ಎಚ್. ವಿಶ್ವನಾಥ್ ಅವರು ಈಗಿನ ಮೌಢ್ಯತೆ ಬಗ್ಗೆ ಸೂಕ್ಷ್ಮವಾಗಿ ತೋರಿಸುವುದರ ಜೊತೆಗೆ ಮನರಂಜನಾತ್ಮಕವಾಗಿ ಬಿಂಬಿಸಿದ್ದಾರೆ. ಆರಂಭದಿಂದ ಅಂತ್ಯದವರೆಗೆ ಸಿನಿಮಾ ನಗಿಸುತ್ತಲೇ ಸಾಗುತ್ತದೆ. ಅಲ್ಲಲ್ಲಿ ಬರುವ ಸಣ್ಣ ಪುಟ್ಟ ಏರಿಳಿತಗಳ ಮಧ್ಯೆ ಕೇಳುವ ಆಡು ಬಗೆಗಿನ ಹಾಡು ಆ ಎಲ್ಲಾ ಏರಿಳಿತವನ್ನೂ ಮರೆಸುತ್ತೆ. ಚುರುಕಾದ ಚಿತ್ರಕಥೆಗೆ ನಗೆಗಡಲ ಪ್ರಸಂಗಗಳು, ಕಚಗುಳಿಯ ಮಾತುಗಳು ಜೊತೆಗೆ ಪೂರಕವಾದ ಹಿನ್ನೆಲೆ ಸಂಗೀತ ಚಿತ್ರದ ವೇಗಕ್ಕೆ ಕಾರಣವಾಗಿದೆ.
ಒಂದು ಸರಳ ಕಥೆಯನ್ನು ಅಚ್ಚುಕಟ್ಟಾಗಿ ಹೇಳುವ ಮತ್ತು ತೋರಿಸುವ ಮೂಲಕ ಸಣ್ಣದ್ದೊಂದು ಮನರಂಜನೆಗೆ ಕಾರಣವಾಗಿರುವ ನಿರ್ದೇಶಕರು, ಪಾತ್ರಗಳ ಆಯ್ಕೆಯಲ್ಲೂ ಅಷ್ಟೇ ಜಾಣ್ಮೆ ಮೆರೆದಿದ್ದಾರೆ. ಹಾಗಾಗಿಯೇ ಚಿತ್ರ ನೋಡುಗರಿಗೆ ಎಲ್ಲೂ ಬೋರು ತರಿಸಲ್ಲ.
ಕಥೆ ಏನು?
ದಾಮು, ಶಿವಲಿಂಗು, ತುಕಾರಾಮ್, ತಿಪ್ಪೇಶಿ ಎಂಬ ನಾಲ್ವರು ಗೆಳೆಯರು. ಈ ಗೆಳೆಯರಲ್ಲಿ ಒಬ್ಬ ವ್ಯಾನ್ ಡ್ರೈವರ್, ಒಬ್ಬ ಕ್ಷೌರಿಕ, ಒಬ್ಬ ಬ್ರೋಕರ್ ಇನ್ನೊಬ್ಬ ಹೋಟೆಲ್ ಇಟ್ಟುಕೊಂಡು ಬದುಕು ನಡೆಸುವವರು. ಅವರೆಲ್ಲರೂ ಕೊರೊನಾ ಸಮಸ್ಯೆಗೆ ತತ್ತರಿಸಿದವರು. ಬದುಕು ಸರಿ ಹೋಗಲೆಂದು ದೇವರ ಮೊರೆ ಹೋದವರಿಗೆ, ಆಡೊಂದು ಆಕಸ್ಮಿಕವಾಗಿ ಸಿಗುತ್ತದೆ. ಅಲ್ಲಿಂದ ಅಚರ ಅದೃಷ್ಟವೇ ಬದಲಾಗುತ್ತೆ! ಅದೇಗೆ ಎಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಲು ಅಡ್ಡಿಯಿಲ್ಲ.
ಬದುಕು ನಡೆಸಲು ಹೆಣಗಾಡುವ ಅವರಿಗೆ ಆಡು ದೇವರಾ್ಇ ಬಿಡುತ್ತೆ. ಅದು ಎಷ್ಟರ ಮಟ್ಟಿಗೆಂದರೆ, ಇಡೀ ಊರಿಗೆ ಊರೇ ಆ ಆಡು ಸ್ವಾಮಿಯನ್ನು ಪೂಜಿಸಿ, ಆರಾಧಿಸುತ್ತಾರೆ. ಆಡು ಮೂಲಕ ಪವಾಡಗಳೇ ನಡೆದು ಹೋಗುತ್ತವೆ. ಅದನ್ನೇ ಗಟ್ಟಿ ಮಾಡಿಕೊಂಡ ಗೆಳೆಯರು ಆಡುಸ್ವಾಮಿ ಅಂತ ಪಟ್ಟ ಕಟ್ಟಿ ಬದುಕು ಹಸನು ಮಾಡಿಕೊಂಡು ಖುಷಿಯಲ್ಲಿರುತ್ತಾರೆ. ಜನರ ನಂಬಿಕೆಯನ್ನು ಎನ್ ಕ್ಯಾಶ್ ಮಾಡಿಕೊಂಡು ದೇವಸ್ಥಾನ ಕಟ್ಟಿಸಿ ಬಿಡುತ್ತಾರೆ. ಅದರಿಂದ ಹಣ ಹರಿದು ಬರುತ್ತೆ. ಹೀಗಿರುವಾಗ ಒಂದು ಘಟನೆ ನಡೆಯುತ್ತೆ. ಅದೇ ಸಿನಿಮಾದ ಟ್ವಿಸ್ಟು ಅದನ್ನು ನೀವು ಸಿನಿಮಾದಲ್ಲೇ ನೋಡಬೇಕು.
ಯಾರು ಹೇಗೆ?
ಚಿತ್ರದಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಬ್ಬರೂ ಗಮನ ಸೆಳೆದಿದ್ದಾರೆ. ಮುಖ್ಯವಾಗಿ ಇಲ್ಲಿ ಬಿ.ಸುರೇಶ ಹೈಲೆಟ್. ಅವರಿಲ್ಲಿ ವಾಸ್ತುಬಗುರುವಾಗಿ, ಆಡುಸ್ವಾಮಿ ದೇವಾಲಯದ ಟ್ರಸ್ಟ್ ಅಧ್ಯಕ್ಷರಾಗಿ ಇಷ್ಟವಾಗುತ್ತಾರೆ. ಅವರ ಅಭಿನಯ ಆವರಿಸಿಕೊಂಡಿದೆ.
ನಟರಾಜ್, ಅಜಿತ್ ಬೊಪ್ಪನಹಳ್ಳಿ, ಮಂಜುನಾಥ್ ಜಂಬೆ, ಅನೂಪ್ ಶೂನ್ಯ ಈ ನಾಲ್ವರು ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಇಲ್ಲಿ ಪಿ.ಕೆ.ಎಚ್.ದಾಸ್ ಅವರ ಕ್ಯಾಮೆರಾ ಕೈಚಳಕ ಇಷ್ಟವಾಗುತ್ತೆ.