ಪಿಂಕಿ ಎಲ್ಲಿ ಕನ್ನಡ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮೆಚ್ಚುಗೆ
ಈಗಾಗಲೇ ಹಲವು ವಿದೇಶಗಳನ್ನು ಸುತ್ತಿ ಬಂದಿದ್ದಲ್ಲದೆ, ಅಲ್ಲಿನ ಜನರ ಪ್ರೀತಿಗೆ ಪಾತ್ರವಾಗಿದೆ. ಸೌತ್ ಕೊರಿಯಾದ ಬುಸಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ಕೆಯಾದ ಭಾರತದ ೫ ಸಿನಿಮಾಗಳ ಪೈಕಿ “ಪಿಂಕಿ ಎಲ್ಲಿ” ಎಂಬ ಚಿತ್ರವೂ ಒಂದು. ಇನ್ನು, ಮುಂಬೈ ಫಿಲ್ಮ್ ಫೆಸ್ಟಿವಲ್‌ನ ಗೋಲ್ಡ್ ವಿಭಾಗದಲ್ಲೂ ಆಯ್ಕೆಯಾಗಿದೆ. ಇನ್ನು ಕಳೆದ ವರ್ಷ ಗೋವಾದ ಫಿಲ್ಮ್ ಬಜಾರ್ ಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರಶಸ್ತಿಗೆ ಭಾಜನವಾಗಿದೆ.
ಕನ್ನಡ ಚಿತ್ರರಂಗ ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿರುವುದು ಹೊಸದೇನಲ್ಲ. ಹಲವು ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಬಾಚಿಕೊಂಡಿರುವುದು ಗೊತ್ತೇ ಇದೆ. ಸದಾ ನೈಜತೆಗೆ ಹೆಚ್ಚು ಒತ್ತು ಕೊಡುವ ಮೂಲಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ವಿದೇಶಿ ಸಿನಿರಸಿಕರನ್ನು ರಂಜಿಸಿದ್ದಲ್ಲದೆ, ಅವರು ಅಂತಹ ಅಪರೂಪದ ಕನ್ನಡ ಸಿನಿಮಾಗಳ ಬಗ್ಗೆ ಹೊಗಳಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಅಂತಹ ಮೆಚ್ಚುಗೆಗೆ ಮತ್ತೊಂದು ಕನ್ನಡದ ಸಿನಿಮಾ ಪಾತ್ರವಾಗಿದೆ ಎಂಬುದು ವಿಶೇಷ. ಆ ಸಾಲಿಗೆ ಸೇರಿರುವ ಸಿನಿಮಾ. “ಪಿಂಕಿ ಎಲ್ಲಿ” ಎಂಬ ಸಿನಿಮಾ.
ವಿದೇಶದಲ್ಲಿ ಪಿಂಕಿ ಸದ್ದು
ವಿಶೇಷವೆಂದರೆ, “ಪಿಂಕಿ ಎಲ್ಲಿ” ಎಂಬ ಸಿನಿಮಾ ಸದ್ದಿಲ್ಲದೆಯೇ ಚಿತ್ರೀಕರಣಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೋರು ಸುದ್ದಿ ಮಾಡುತ್ತಿದೆ ಎಂಬುದು ಮತ್ತೊಂದು ವಿಶೇಷ. ಬಹುತೇಕ ಹೊಸ ಪ್ರತಿಭೆಗಳೇ ಇರುವ ಈ ಚಿತ್ರ ಈಗಾಗಲೇ ಹಲವು ವಿದೇಶಗಳನ್ನು ಸುತ್ತಿ ಬಂದಿದ್ದಲ್ಲದೆ, ಅಲ್ಲಿನ ಜನರ ಪ್ರೀತಿಗೆ ಪಾತ್ರವಾಗಿದೆ. ಸೌತ್ ಕೊರಿಯಾದ ಬುಸಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ಕೆಯಾದ ಭಾರತದ ೫ ಸಿನಿಮಾಗಳ ಪೈಕಿ “ಪಿಂಕಿ ಎಲ್ಲಿ” ಎಂಬ ಚಿತ್ರವೂ ಒಂದು. ಇನ್ನು, ಮುಂಬೈ ಫಿಲ್ಮ್ ಫೆಸ್ಟಿವಲ್‌ನ ಗೋಲ್ಡ್ ವಿಭಾಗದಲ್ಲೂ ಆಯ್ಕೆಯಾಗಿದೆ. ಇನ್ನು ಕಳೆದ ವರ್ಷ ಗೋವಾದ ಫಿಲ್ಮ್ ಬಜಾರ್ ಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರಶಸ್ತಿಗೆ ಭಾಜನವಾಗಿದೆ.
ಮಗು ಸುತ್ತ ನಡೆಯೋ ತಲ್ಲಣದ ಕಥೆ
ಅಂದಹಾಗೆ, ಈ ಚಿತ್ರವನ್ನು ಪೃಥ್ವಿ ಕೊಣನೂರು ನಿರ್ದೇಶಿಸಿದ್ದಾರೆ. ಇವರಿಗೆ ಸಿನಿಮಾ ಹೊಸದೇನಲ್ಲ. ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಪೃಥ್ವಿ ಕೊಣನೂರು, ಈ ಹಿಂದೆ “ಆಲೆಗಳು” ಮತ್ತು “ರೈಲ್ವೇ ಚಿಲ್ಡ್ರನ್” ಸಿನಿಮಾ ನಿರ್ದೇಶಿಸಿದ್ದಾರೆ. ತಮ್ಮ “ಪಿಂಕಿ ಎಲ್ಲಿ” ಸಿನಿಮಾ ಕುರಿತು “ಸಿನಿ ಲಹರಿ” ಜೊತೆ ಮಾತನಾಡುವ ಅವರು, “ಇದೊಂದು ಎಂಟು ತಿಂಗಳ ಮಗುವಿನ ಸುತ್ತ ನಡೆಯುವ ಕಥೆ. ಆ ಮಗು ಕಳೆದು ಹೋದಾಗ, ನಡೆಯುವ ಒಂದು ಕಥಾಹಂದರ ಹೊಂದಿದೆ. ನೈಜ ಘಟನೆಯೊಂದರ ಸ್ಫೂರ್ತಿಯಿಂದ ಮಾಡಿದ ಸಿನಿಮಾ ಇದು. ಮಗು ಕಳೆದಾಗ, ಸುತ್ತಲೂ ಆವರಿಸಿಕೊಳ್ಳುವ ಒಂದಷ್ಟು ಪಾತ್ರಗಳ ಗೊಂದಲ ಇತ್ಯಾದಿ ಸಿನಿಮಾದ ಹೈಲೈಟ್. ಪ್ರಸ್ತುತ ನಗರಗಳಲ್ಲಿ ವಾಸಿಸುವ ಗಂಡ-ಹೆಂಡತಿ ಇಬ್ಬರೂ ಉದ್ಯೋಗಕ್ಕೆ ಹೊರ ಹೋದರೆ, ತಮ್ಮ ಮಗುವನ್ನು ನೋಡಿಕೊಳ್ಳುವಂತೆ ಮನೆಗೆಲಸದವರಿಗೆ ಬಿಡುತ್ತಾರೆ. ಆದರೆ, ಮನೆಗೆಲಸದವರು ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆ. ಆ ಮಗು ಯಾರ ಕೈಗೆ ಸಿಗುತ್ತದೆ. ಒಂದು ಹಂತದಲ್ಲಿ ಭಿಕ್ಷುಕರು ಈ ಮಗುವನ್ನು ಬಳಸಿಕೊಂಡು ಭಿಕ್ಷೆಗೆ ಮುಂದಾಗುತ್ತಾರೆ. ತಮ್ಮ ಮಗು ಕಳುವಾದಾಗ ನಡೆಯುವಂತಹ ತಲ್ಲಣವೇ ಕಥೆಯ ವಿಶೇಷ. ಇನ್ನು, ಈ ಚಿತ್ರದಲ್ಲಿ ಎಲ್ಲರೂ ಮೊದಲ ಸಲ ನಟಿಸಿದ್ದಾರೆ. ಬಹುತೇಕ ಸ್ಲಂ ವಾಸಿಗಳಿಂದಲೇ ನಟನೆ ಮಾಡಿಸಿದ್ದು ವಿಶೇಷ” ಎಂಬುದು ನಿರ್ದೇಶಕರ ಹೇಳಿಕೆ.
ಸಾಮಾಜಿಕ ಕಾಳಜಿ ಚಿತ್ರ
ನಟನೆ ಬಗ್ಗೆ ಏನೂ ಗೊತ್ತಿಲ್ಲದವರನ್ನು ಕರೆತಂದು, ಅವರಿಗೆ ಒಂದಷ್ಟು ತರಬೇಡಿ ಕೊಟ್ಟು ನಂತರ ಕ್ಯಾಮೆರಾ ಮುಂದೆ ನಿಲ್ಲಿಸಿರುವುದು ಸುಲಭದ ವಿಷಯವಲ್ಲ. ನೈಜತೆಗಾಗಿಯೇ ನಿರ್ದೇಶಕರು ಸ್ಲಂನಲ್ಲಿ ವಾಸಿಸುವ, ಕಥೆ ಮತ್ತು ಪಾತ್ರಕ್ಕೆ ಸೂಕ್ತವೆನಿಸುವ ಮಂದಿಯನ್ನು ಆಯ್ಕೆ ಮಾಡಿಕೊಂಡು ನಟನೆ ಮಾಡಿಸಿರುವುದು ಸವಾಲಿನ ಕೆಲಸ. ಸ್ಲಂ ಸೇರಿದಂತೆ ಇತರೆಡೆ ಚಿತ್ರೀಕರಿಸಲಾಗಿದೆ. ಇಂಥದ್ದೊಂದು ಸಾಮಾಜಿಕ ಕಾಳಜಿ ಇರುವಂತಹ ಸಿನಿಮಾ ನಿರ್ಮಾಣ ಮಾಡಿರುವುದು ಕೃಷ್ಣೇಗೌಡ. ತಮ್ಮ “ಪಿಂಕಿ ಎಲ್ಲಿ” ಸಿನಿಮಾ ಬಗ್ಗೆ ಹೇಳುವ ಅವರು, “ನಾನು ನಿರ್ದೇಶಕರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅಭಿರುಚಿ ಇರುವ ನಿರ್ಮಾಪಕರಿಗೆ ಇಂತಹ ನಿರ್ದೇಶಕರು ಸಿಗಬೇಕು.
ಒಂದೊಳ್ಳೆ ಚಿತ್ರ ಮಾಡಿದ ತೃಪ್ತಿ
ಒಳ್ಳೆಯ ಕಥೆಗಾರ. ಹೇಳಿದ್ದನ್ನು ಮಾಡಿ ತೋರಿಸುವ ನಿರ್ದೇಶಕ ಎನ್ನುವುದು ಗೊತ್ತಾದ ಮೇಲೆ, ಅವರಿಗೆ ನಾನು ಸಂಪೂರ್ಣ ಬೆಂಬಲ ಕೊಟ್ಟೆ. ನಿರ್ದೇಶಕರು ಹಾಲಿವುಡ್‌ನಲ್ಲಿ ಸಿನಿಮಾ ಕುರಿತು ಓದಿಕೊಂಡು ಬಂದವರು. ತುಂಬಾನೇ ಸೂಕ್ಷ್ಮತೆ ಇರುವ ಕಥೆ ಆಯ್ಕೆ ಮಾಡಿಕೊಂಡು, ಒಂದು ಸಾಮಾಜಿಕ ಬದ್ಧತೆ ಇಟ್ಟುಕೊಂಡು ಮಾಡಿರುವಂತಹ ಸಿನಿಮಾ ಇದು. ಈ ಚಿತ್ರ ನೋಡಿದವರು ಖಂಡಿತವಾಗಿಯೂ ಇದರ ಬಗ್ಗೆ ಮಾತಾಡುತ್ತಾರೆ. ದೊಡ್ಡ ಮಟ್ಟದಲ್ಲಿ ಜಾಗೃತಿಯೂ ಮೂಡುತ್ತದೆ. ಈ ಹಿಂದೆ ನಿರ್ದೇಶಕ ಪೃಥ್ವಿ ಕೊಣನೂರು ಅವರು, “ರೈಲ್ವೇ ಚಿಲ್ಡ್ರನ್” ಸಿನಿಮಾ ಮಾಡಿದ್ದರು. ಆ ಚಿತ್ರ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಅಲ್ಲಿಯೂ ಕೂಡ ನೈಜತೆಗೆ ಒತ್ತು ಕೊಟ್ಟಿದ್ದರು. ಈಗ “ಪಿಂಕಿ ಎಲ್ಲಿ” ಸಿನಿಮಾದಲ್ಲೂ ಅಂತಹ ನೈಜತೆ ಕಾಣಬಹುದು. ಒಂದೊಳ್ಳೆಯ ಸಿನಮಾ ನಿರ್ಮಾಣ ಮಾಡಿದ್ದೇನೆ ಎಂಬ ತೃಪ್ತಿ ನನ್ನದು” ಎನ್ನುತ್ತಾರೆ ಕೃಷ್ಣೇಗೌಡ.