ಮೈಸೂರಿನಲ್ಲಿ ವೃಷಭನ ಸಾಹಸ ಪೂರ್ಣ!

ಬಹು ನಿರೀಕ್ಷಿತ “ವೃಷಭ” ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ತಿಂಗಳ ಕಾಲ ಮೈಸೂರಿನಲ್ಲಿ ಚಿತ್ರೀಕರಣ ನಡೆದಿದೆ. ಭಾರತೀಯ ಚಿತ್ರರಂಗದಲ್ಲಿ ಕಂಡುಕೇಳರಿಯದ ಬೃಹತ್ ಆಕ್ಷನ್ ದೃಶ್ಯಗಳನ್ನು ಈ ಹಂತದಲ್ಲಿ ಚಿತ್ರೀಕರಣ ಮಾಡಲಾಗಿದೆ.

ನಂದಕಿಶೋರ್ ನಿರ್ದೇಶನದ ವೃಷಭ ಚಿತ್ರದ ಚಿತ್ರೀಕರಣ ಕಳೆದ ತಿಂಗಳು 22 ರಂದು ಮೈಸೂರಿನಲ್ಲಿ ಪ್ರಾರಂಭವಾಗಿತ್ತು. ಈ ಭಾಗದ ಚಿತ್ರೀಕರಣದಲ್ಲಿ ಮೋಹನ್ ಲಾಲ್, ರೋಶನ್ ಮೇಕಾ, ಶನಾಯ ಕಪೂರ್, ಶ್ರೀಕಾಂತ್ ಮೇಕಾ, ರಾಗಿಣಿ ದ್ವಿವೇದಿ ಮುಂತಾದವರು ಪಾಲ್ಗೊಂಡಿದ್ದರು. ಚಿತ್ರದ ನಿರ್ಮಾಪಕರು ಚಿತ್ರಕ್ಕೆ ಯಾವುದೇ ಕೊರತೆಯಾಗದಂತೆ ಅದ್ಭುತವಾಗಿ ಮೂಡಿಬರುವುದಕ್ಕೆ ಶ್ರಮವಹಿಸಿದ್ದಾರೆ.

ಹಾಲಿವುಡ್‌ ನ ಜನಪ್ರಿಯ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಗುರುತಿಸಿಕೊಂಡಿರುವ ನಿಕ್ ಥರ್ಲೋ ಈ ಚಿತ್ರಕ್ಕೆ ಕೆಲಸ ಮಾಡುತ್ತಿರುವುದು ಒಂದು ವಿಶೇಷತೆಯಾದರೆ, “ಬಾಹುಬಲಿ”, “ಪುಲಿಮುರುಗನ್”, “ಶಿವಾಜಿ – ದಿ ಬಾಸ್”, “ಎಂದಿರನ್”, “ಪುಷ್ಪ – ದಿ ರೈಸ್” ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಭಾರತೀಯ ಚಿತ್ರರಂಗದ ಜನಪ್ರಿಯ ಸಾಹಸ ನಿರ್ದೇಶಕರಾದ ಪೀಟರ್ ಹೇನ್ಸ್ ಈ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸುತ್ತಿರುವುದು ಇನ್ನೊಂದು ಹೆಗ್ಗಳಿಕೆ.


 
ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ನಂದಕಿಶೋರ್, ಮೊದಲ ಹಂತದ ಚಿತ್ರೀಕರಣದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಿದ ಖುಷಿ ನಮಗಿದೆ. ಜೊತೆಗೆ ಹಗಲು ರಾತ್ರಿ ಕಷ್ಟಪಟ್ಟು ದುಡಿದ ಚಿತ್ರತಂಡಕ್ಕೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಹೇಳುವುದಕ್ಕೆ ಬಯಸುತ್ತೇನೆ. ಮೋಹನ್ ಲಾಲ್ ಸರ್, ರೋಶನ್, ಶ್ರೀಕಾಂತ್, ರಾಗಿಣಿ ಮುಂತಾದವರು ನಮ್ಮ ಡೆಡ್ ಲೈನ್ ಗಳನ್ನು ಪೂರೈಸುವಲ್ಲಿ ಪೂರಕವಾಗಿ ಕೆಲಸ ಮಾಡಿದ್ದಾರೆ. “ಪುಲಿಮುರುಗನ್” ಚಿತ್ರದ ನಂತರ ಮೋಹನ್ ಲಾಲ್ ಮತ್ತು ಪೀಟರ್ ಹೇನ್ಸ್ ಈ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದು, ವೃಷಭ ಚಿತ್ರವು ಭಾರತದ ಅತೀ ದೊಡ್ಡ ಆಕ್ಷನ್ ಚಿತ್ರವಾಗಿ ಮೂಡಿಬರಲಿದೆ ಎಂದು ಹೇಳಿದ್ದಾರೆ.

 “ವೃಷಭ” ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಅತೀ ದೊಡ್ಡ ಆಕ್ಷನ್ ಚಿತ್ರವಾಗಿದ್ದು, ಮೋಹನ್ ಲಾಲ್, ರೋಶನ್ ಮೇಕಾ, ಶನಾಯ ಕಪೂರ್, ಝಹ್ರ ಎಸ್ ಖಾನ್, ಶ್ರೀಕಾಂತ್ ಮೇಕಾ, ರಾಗಿಣಿ ದ್ವಿವೇದಿ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ವಿಎಫ್ಎಕ್ಸ್ ದೊಡ್ಡ ಪ್ರಮಾಣದಲ್ಲಿದ್ದು, ಇದೊಂದು ಬರೀ ಆಕ್ಷನ್ ಚಿತ್ರವಷ್ಟೇ ಅಲ್ಲ, ಅದ್ಭುತ ಸೆಂಟಿಮೆಂಟ್ ಚಿತ್ರವಾಗಿ ಮೂಡಿಬರುತ್ತಿದ್ದು, 2024ರ ಅತೀ ಜನಿರೀಕ್ಷಿತ ಚಿತ್ರವಾಗಿದೆ.

ವೃಷಭ ಚಿತ್ರವನ್ನು ಕನೆಕ್ಟ್ ಮೀಡಿಯಾ ಮತ್ತು ಬಾಲಾಜಿ ಟೆಲಿಫಿಲಂಸ್, ಎವಿಎಸ್ ಸ್ಟುಡಿಯೋಸ್ ನ ಜೊತೆಗೆ ಅರ್ಪಿಸುತ್ತಿದೆ‌. ನಂದಕಿಶೋರ್ ನಿರ್ದೇಶನದ ಈ ಚಿತ್ರವನ್ನು, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಅಭಿಷೇಕ್ ವ್ಯಾಸ್ (ಏವಿಎಸ್), ಶ್ಯಾಮ್ ಸುಂದರ್ (ಫರ್ಸ್ಟ್ ಸ್ಟೆಪ್ ಮೂವೀಸ್), ಏಕ್ತಾ ಕಪೂರ್, ಶೋಭಾ ಕಪೂರ್ (ಬಾಲಾಜಿ ಟೆಲಿಫಿಲಂಸ್), ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ (ಕನೆಕ್ಟ್ ಮೀಡಿಯಾ) ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ತೆಲುಗು, ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರವು ತೆಲುಗು, ಮಲಯಾಳಂ, ಹಿಂದಿ, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Related Posts

error: Content is protected !!