ಚಿತ್ರ ವಿಮರ್ಶೆ
ರೇಟಿಂಗ್ : 3/5
ವಿಜಯ್ ಭರಮಸಾಗರ
ಚಿತ್ರ : ಟೋಬಿ
ನಿರ್ದೇಶಕ : ಬಾಸಿಲ್ ಅಲ್ಚಾಲ್ಕಲ್
ನಿರ್ಮಾಣ : ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲಂಸ್
ತಾರಾಗಣ : ರಾಜ್ ಬಿ.ಶೆಟ್ಟಿ, ಚೈತ್ರಾ ಆಚಾರ್, ಸಂಯುಕ್ತಾ ಹೊರನಾಡು, ಗೋಪಾಲ್ ದೇಶಪಾಂಡೆ, ದೀಪಕ್ ಶೆಟ್ಟಿ, ಭರತ್, ಸಂದ್ಯಾ ಅರಕೆರೆ ಇತರರು.
‘ ಈ ಟೋಬಿ ಯಾರು, ಎಲ್ಲಿರ್ತಾನೆ, ಇಷ್ಟಕ್ಕೂ ಟೋಬಿ ಅಂದರೇನು? ಹೀಗಂತ ಆ ಪೊಲೀಸ್ ಅಧಿಕಾರಿ ಚರ್ಚ್ ಫಾದರ್ ಬಳಿ ಕೇಳುತ್ತಾನೆ.
ಆ ಅಧಿಕಾರಿ ಪ್ರಶ್ನೆಗೆ ಚರ್ಚ್ ಫಾದರ್ ಹೇಳೋದಿಷ್ಟು. ‘ಟೋಬಿಯಾ ಅಲಿಯಾಸ್ ಟೋಬಿ ಅನ್ನೋದು ಹೆಬ್ರು ಭಾಷೆಯ ಪದ. ಹಾಗಂದರೆ, ‘ಗಾಡ್ ಈಸ್ ಗುಡ್’ ಅಂತ… ಟೋಬಿ ಎಂಬ ಹೆಸರಿಟ್ಟಾಕ್ಷಣ, ಮನುಷ್ಯ ದೇವರಾಗ್ತಾನಾ?
ಈ ಸಂಭಾಷಣೆ ಬರುವ ಹೊತ್ತಿಗೆ, ಬೆರಳೆಣಿಕೆ ಜನ ಇರುವ ಆ ಊರಲ್ಲಿ ಟೋಬಿ ಒಂದಷ್ಟು ಭಯ ಮತ್ತು ಕುತೂಹಲ ಹುಟ್ಟಿಸಿರುತ್ತಾನೆ. ಹಾಗಾದರೆ, ಆ ಟೋಬಿ ಯಾರು, ಹೇಗೆ? ಎಂಬ ಪ್ರಶ್ನೆಗೆ ಸಮಯ ಇದ್ದರೆ ಹಾಗೊಮ್ಮೆ ಟೋಬಿಯ ಆಟಾಟೋಪವನ್ನೊಮ್ಮೆ ನೋಡಿ ಬರಬಹುದು.
ಟೋಬಿ ತುಂಬಾ ಅದ್ಭುತ ಕಥೆಯೇನಲ್ಲ. ಒಂದು ಸಿಂಪಲ್ ಕಥೆಗೆ ರೋಚಕ ಎನಿಸುವ ಚಿತ್ರಕಥೆ ಚಿತ್ರದ ಜೀವಾಳ. ಒಂದೇ ಮಾತಲ್ಲಿ ಹೇಳುವುದಾದರೆ, ಸಿನಿಮಾ ತುಂಬಾ ನಿಧಾನ. ನೋಡುವಾಗ ಅಲ್ಲಲ್ಲಿ ಮಲಯಾಳಿ, ತಮಿಳಿನ ಕೆಲ ಸಿನಿಮಾಗಳು ಕಣ್ಮುಂದೆ ಹಾದು ಹೋಗುತ್ತವೆ. ಅದನ್ನು ಪಕ್ಕಕ್ಕಿಟ್ಟು ನೋಡಿದರೆ, ಒಂದು ಭಾವುಕ ಪಯಣ ಕಾಣಬಹುದು. ಆಗಾಗ ಒಂದಷ್ಟು ಕಚಗುಳಿ ಇಡುವಂತಹ ಸನ್ನಿವೇಶಗಳು, ಒಮ್ಮೊಮ್ಮೆ ರೌದ್ರಾವತಾರದ ದೃಶ್ಯಗಳು, ಮಗದೊಮ್ಮೆ ವಿನಾಕಾರಣ ಎನಿಸುವ ಸೀನ್ ಗಳು ಇಣುಕುವುದುಂಟು.
ನಿರ್ದೇಶಕರು ಒಂದಷ್ಟು ಸಿನಿಮಾ ಅವಧಿ ಕಡೆಗೆ ಗಮನ ಹರಿಸಿದ್ದರೆ ಟೋಬಿ ಮತ್ತಷ್ಟು ಚಂದ ಆಗುತ್ತಿದ್ದನೇನೋ? ಎರಡುವರೆ ತಾಸು ಕುಳಿತು ನೋಡೋದು ತುಸು ತ್ರಾಸು. ಮೊದಲರ್ಧ ಜಾಲಿಯಾಗಿ ಸಾಗುವ ಸಿನಿಮಾ ಮಧ್ಯೆ ಕೆಲ ದೃಶ್ಯಗಳು ಜಾಳು ಜಾಳು ಎನಿಸುತ್ತವೆ. ನೋಡುಗರಿಗೆ ವಿನಾಕಾರಣ ಎಳೆದಾಡಿದ್ದಾರೆ ಎಂಬ ಫೀಲ್ ಬರದೇ ಇರದು. ದ್ವಿಯಾರ್ಧ ಕೂಡ ವೇಗ ಹೆಚ್ಚಿಸಿಕೊಳ್ಳಲು ಅವಕಾಶವಿತ್ತು. ಆದರೆ, ಟೋಬಿ ಆಡಿದ್ದೇ ಆಟವನ್ನು ಅನಿವಾರ್ಯವಾಗಿ ನೋಡಲೇಬೇಕು.
ಇಲ್ಲಿ ಕಥೆಗಿಂತ ಚಿತ್ರಕಥೆ ಚುರುಕಾಗಿದೆ. ನಿರೂಪಣೆ ಶೈಲಿ ಹೊಸದಾಗಿದೆ. ಪ್ರತಿ ಪಾತ್ರಗಳನ್ನು ನೈಜವಾಗಿ ಕಟ್ಟಿ ಕೊಡುವಲ್ಲಿ ನಿರ್ದೇಶಕರ ಪ್ರಯತ್ನ ಸಾರ್ಥಕ. ಸಿನಿಮಾದಲ್ಲಿ ವಾವ್ ಎನ್ನುವಂತಹ ದೃಶ್ಯಕಾವ್ಯ ಕಾಣ ಸಿಗಲ್ಲ. ಆದರೆ, ಒಂದೊಳ್ಳೆಯ ಮನರಂಜನೆಗಂತೂ ಮೋಸವಿಲ್ಲ. ಹಾಗಂತ ಇಲ್ಲಿ ಹಾಡು, ಕುಣಿತ ಮೇಳೈಸಿಲ್ಲ. ಆಗಾಗ ಹೊಡೆದಾಟಗಳಿಗೆ ಬರವಿಲ್ಲ. ಇಲ್ಲಿ ಇನ್ನೊಂದು ವಿಷಯ ಹೇಳುವುದಾದರೆ, ಕಥೆಯೇ ಇಲ್ಲಿ ಹೀರೋ. ಹಾಗಾಗಿ ಹೀರೋಯಿಸಂನ ಸುಳಿವಿಲ್ಲ. ಇಲ್ಲಿ ಮಾನವೀಯತೆ ಇದೆ, ಭಾವುಕತೆ ಇದೆ, ನಿಷ್ಕಲ್ಮಷ ಪ್ರೀತಿ ವಾತ್ಸಲ್ಯವಿದೆ, ಪಾಪ ಪ್ರಜ್ಞೆ ಇದೆ, ನೆತ್ತರು ಚಿಮುತ್ತೆ, ಮೋಸ, ದ್ವೇಷ, ಭಯ, ಭಕ್ತಿ ಎಲ್ಲವೂ ಇದೆ. ಇವೆಲ್ಲವೂ ಒಂದೊಳ್ಳೆಯ ಹೂರಣವಾಗಿದೆ. ಆ ಹೂರಣದಲ್ಲಿ ಕೊಂಚ ‘ಬೆಲ್ಲ’ದ ಸಿಹಿ ಕಡಿಮೆ ಎನ್ನಬಹುದಷ್ಟೇ.
ಟೋಬಿ ಕಥೆ ಏನು?
ಟೋಬಿ ಒಬ್ಬ ಅನಾಥ. ಮಾತು ಬಾರದ ಮೂಗ. ಚಿಕ್ಕಂದಿನಲ್ಲೇ ಅವಮಾನ ಕಂಡು ಎಲ್ಲರನ್ನು ದ್ವೇಷಿಸೋ ವ್ಯಕ್ತಿ. ಕೆಣಕಿದವರನ್ನ ಹಿಂದೆ ಮುಂದೆ ನೋಡದೆ ಹೊಡೆದುರುಳಿಸೋ ಛಾಳಿ. ಅಂತಹವನನ್ನು ಆ ಊರ ಮಂದಿ ಹೇಗೆ ಬಳಸಿಕೊಳ್ತಾರೆ. ಸಣ್ಣ ಅಸೆಗೆ ಆ ಜೀವ ಏನೆಲ್ಲಾ ತಪ್ಪು ಮಾಡುತ್ತೆ. ಅದರಿಂದ ಎಷ್ಟೆಲ್ಲಾ ನೋವು ಅನುಭವಿಸುತ್ತೆ ಅನ್ನೋದು ಕಥೆಯ ಸಾರಾಂಶ.
ಹಾಗಾದರೆ ಆ ಟೋಬಿ ಎಂಬ ಮುಗ್ಧ ಜೀವದ ಬದುಕಿನುದ್ದಕ್ಕೂ ಎದುರಾಗುವ ಸಮಸ್ಯೆಗಳೇನು, ಜೊತೆ ನಿಲ್ಲೋರಾರು, ದೂರ ಮಾಡೋರಾರು ಎಂಬ ಕುತೂಹಲ ಇದ್ದರೆ ಟೋಬಿಯ ‘ಮಾರಾಮಾರಿ’ ನೋಡಬಹುದು.
ಯಾರು ಹೇಗೆ?
ಟೋಬಿಯಾಗಿ ರಾಜ್ ಬಿ.ಶೆಟ್ಟಿ ಅಬ್ಬರಿಸಿದ್ದಾರೆ. ಮಾತು ಬಾರದ ಮೂಗನಾಗಿ ಅವರ ನಟನೆಗೆ ಜೈ ಎನ್ನಬಹುದು. ಮೂಗನಾಗಿಯೇ ಅಲ್ಲಲ್ಲಿ ನಗಿಸಿ, ಭಾವುಕತೆಗೆ ದೂಡುವಲ್ಲಿ ಅವರು ಯಶಸ್ವಿ.
ಚೈತ್ರಾ ಆಚಾರ್ ಟೋಬಿ ಮಗಳಾಗಿ ಗಮನ ಸೆಳೆದಿದ್ದಾರೆ. ಬಜಾರಿ ಹುಡುಗಿಯಾಗಿ ಸೈ ಎನಿಸಿಕೊಂಡಿದ್ದಾರೆ. ನಿರ್ದೇಶಕರ ಕಲ್ಪನೆಯ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ.
ಸಂಯುಕ್ತಾ ಹೊರನಾಡು ‘ಮಾರಿ’ ಗೆ ಸಿಗದೆ ಮೈ ಮಾರಿಕೊಳ್ಳೋ ಹೆಣ್ಣಾಗಿ ಇಷ್ಟವಾಗುತ್ತಾರೆ.
ಗೋಪಾಲ್ ದೇಶಪಾಂಡೆ ಕೂಡ ಗಮನ ಸೆಳೆಯುತ್ತಾರೆ. ದೀಪಕ್ ಶೆಟ್ಟಿ ಖಳನಾಗಿ ಆವರಿಸಿದ್ದಾರೆ. ತೆರೆ ಮೇಲೆ ಬರುವ ಪ್ರತಿ ಪಾತ್ರಗಳು ಅಚ್ಚು ಕಟ್ಟಾಗಿ ಕೆಲಸ ಮಾಡಿವೆ.
ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತ ಇಲ್ಲಿ ಹೈಲೆಟ್ ಆಗಿದೆ. ಬರುವ ಹಾಡೊಂದು ಪರವಾಗಿಲ್ಲ. ಕ್ಯಾಮೆರಾ ಕೂಡ ಟೋಬಿಯನ್ನು ಅಂದಗಾಣಿಸಿದೆ.