ಈ ಹಿಂದೆ ಒಂದು ಶಿಕಾರಿಯ ಕಥೆ ನಿರ್ದೇಶಿಸಿದ್ದ ಸಚಿನ್ ಶೆಟ್ಟಿ, ಈಗ ಹೊಸ ಚಿತ್ರ ಅನೌನ್ಸ್ ಮಾಡಿದ್ದಾರೆ. ಸಂಪೂರ್ಣವಾಗಿ ಬೇರೆಯದೇ ಜಾನರ್ ಗೆ ಹೊರಳಿರುವ ನಿರ್ದೇಶಕ ಸಚಿನ್ ಶೆಟ್ಟಿ, ಈ ಬಾರಿ ಟೀನೇಜ್ ಲವ್ ಸ್ಟೋರಿಯೊಂದನ್ನು ಕ್ಲಾಸ್ ಸ್ಟೈಲ್ ನಲ್ಲಿ ನಿರೂಪಿಸಲು ಹೊರಟಿದ್ದಾರೆ.
ಚಿತ್ರದ ನಾಯಕ ಸಚಿನ್ ರಾಠೋಡ್, ನಾಯಕಿ ರಾಧಾ ಭಗವತಿ ಮತ್ತು ನಿರ್ಮಾಪಕರೆಲ್ಲರೂ ಬಿಜಾಪುರದವರಾಗಿದ್ದು, ಅದೇ ಜಿಲ್ಲೆಯ ಕನಮಡಿ ಎಂಬ ಗ್ರಾಮದಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ನಡೆಸಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳು, ಆ ಭಾಗದ ಕಥೆಗಳು ಮುನ್ನೆಲೆಗೆ ಬರಬೇಕು ಎಂಬ ಈಗಿನ ಕೂಗಿಗೆ ಈ ಚಿತ್ರ ಒಂದು ಸಣ್ಣ ಉತ್ತರವಾಗಬಹುದು. ಕರಾವಳಿಯ ನಿರ್ದೇಶಕರು ತಮ್ಮ ಕಥೆಯನ್ನು ಉತ್ತರ ಕರ್ನಾಟಕದ ಪರಿಸರದ ಹಿನ್ನೆಲೆಯ ಜೊತೆ ಹೇಳಲು ಹೊರಟಿರುವುದು ವಿಶೇಷವಾಗಿದೆ. ಇನ್ನು ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ನಿರತವಾಗಿರುವ ಚಿತ್ರತಂಡ ಇನ್ನು ಮುಂದೆ ಚಿತ್ರದ ಒಂದೊಂದೇ ವಿವರಗಳನ್ನು ಬಿಡುಗಡೆ ಮಾಡಲಿದೆ.
ವಸಂತ ಕಾಲದ ಹೂಗಳು ಚಿತ್ರದಲ್ಲಿ ಗುರುರಾಜ್ ಶೆಟ್ಟಿ, ಪವನ್, ನಂದೀಶ್ ಇತರರು ನಟಿಸಲಿದ್ದಾರೆ. ಅಶೋಕ್ ರಾಠೋಡ್, ಸಿದ್ದು ರಾಸುರೆ ನಿರ್ಮಾಣವಿದೆ. ಶಿವಶಂಕರ ನೂರಂಬಡ ಕ್ಯಾಮೆರಾ ಹಿಡಿದರೆ, ಬಿ.ಎಸ್.ಕೆಂಪರಾಜ್ ಅಂಕಲನವಿದೆ. ಭರತ್ ಜನಾರ್ಧನ್ ಸಂಗೀತವಿದೆ.