ನಟರಾಜ್ ಅವರು ಅರ್ಪಿಸುವ, ಕೋಮಲ ನಟರಾಜ್ ನಿರ್ಮಿಸಿರುವ “ಮಾರಕಾಸ್ತ್ರ” ಚಿತ್ರಕ್ಕಾಗಿ ಮಂಜು ಕವಿ ಬರೆದು, ಸಂಗೀತ ಸಂಯೋಜಿಸಿರುವ “ಗ್ಲಾಮರು ಗಾಡಿ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಅನನ್ಯ ಭಟ್ ಹಾಡಿರುವ ಈ ಹಾಡು A2 music ಮೂಲಕ ಬಿಡುಗಡೆಯಾಗಿ ಎಲ್ಲರ ಮನ ಗೆಲ್ಲುತ್ತಿದೆ. ಹೀನಾ ಎಂ ಪಂಚಾಲ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ಈ ಹಾಡು ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ನಡೆಯಿತು.
ನಾನು ಸಿನಿಮಾ ಮಾಡುತ್ತೇನೆ ಎಂದಾಗ, ಬೇಡ ಅಂದವರೆ ಹೆಚ್ಚು. ಆದರೆ ಅವರುಗಳು ಹೇಳಿದ ತರಹ ಅನುಭವ ನನಗೆ ಈ ಚಿತ್ರದಲ್ಲಿ ಆಗಿಲ್ಲ. ಏಕೆಂದರೆ ಒಳ್ಳೆಯ ತಂಡದ ಸಹಕಾರ. ಆಕ್ಷನ್ ಕ್ವೀನ್ ಮಾಲಾಶ್ರೀ ಅವರು ಸೇರಿದಂತೆ ಬಹು ದೊಡ್ಡ ತಾರಾಬಳಗ ಹೊಂದಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಾನು ಈ ಚಿತ್ರದ ನಾಲ್ಕು ಹಾಡುಗಳನ್ನು ಹಾಡಿದ್ದೇನೆ ಹಾಗೂ ನಟಿಸಿದ್ದೇನೆ ಎನ್ನುತ್ತಾರೆ ನಟರಾಜ್. ನಟರಾಜ್ ಅವರ ಪತ್ನಿ ನಿರ್ಮಾಪಕಿ ಕೋಮಲ ನಟರಾಜ್ ಸಹ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.
ಇದು ನನ್ನ ಮೊದಲ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದು ಮಾತನಾಡಿದ ನಿರ್ದೇಶಕ ಗುರುಮೂರ್ತಿ ಸುನಾಮಿ, “ಮಾರಕಾಸ್ತ್ರ” ಒಂದು ಕೌಟುಂಬಿಕ ಚಿತ್ರ. ಇದರಲ್ಲಿ ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ. ಈಗಾಗಲೇ ಟೀಸರ್ ಎಲ್ಲರ ಮನ ಗೆದ್ದಿದೆ. ಚಿತ್ರ ಕೂಡ ಸದ್ಯದಲ್ಲೇ ತೆರೆಗೆ ಬರಲಿದೆ ಎಂದು ತಿಳಿಸಿದರು.
ಚಿತ್ರದಲ್ಲಿ ಏಳು ಹಾಡುಗಳಿವೆ. ಆ ಪೈಕಿ ನಾಲ್ಕು ಹಾಡುಗಳನ್ನು ನಟರಾಜ್ ಅವರೆ ಹಾಡಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡನ್ನು ನಾನೇ ಬರೆದಿದ್ದೇನೆ. ಅನನ್ಯಾ ಭಟ್ ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಮಂಜು ಕವಿ ತಿಳಿಸಿದರು.
“ಮಾರಕಾಸ್ತ್ರ” ಚಿತ್ರದ ನಿರ್ಮಾಪಕರು ಈಗಾಗಲೇ ಅರ್ಧದಷ್ಟು ಸೇಫ್ ಆಗಿದ್ದಾರೆ. ಮುಂಬೈ ಮೂಲದ ವ್ಯಕ್ತಿಯೊಬ್ಬರು ಈ ಚಿತ್ರದ ಹಿಂದಿ ರೈಟ್ಸ್ ಬಾರಿ ಮೊತ್ತಕ್ಕೆ ಖರೀದಿಸಿದ್ದಾರೆ ಎಂದು ನೃತ್ಯ ನಿರ್ದೇಶಕ ಹಾಗೂ ಕ್ರಿಯೇಟಿವ್ ಹೆಡ್ ಧನ ಕುಮಾರ್ ಮಾಹಿತಿ ನೀಡಿದರು.
ಚಿತ್ರದ ಛಾಯಾಗ್ರಹಕ ಅರುಣ್ ಸುರೇಶ್, ಸಂಕಲನಕಾರ ವಿಶ್ವ ಹಾಗೂ ಚಿತ್ರದಲ್ಲಿ ನಟಿಸಿರುವ ಆನಂದ್ ಆರ್ಯನ್, ರವಿಚೇತನ್, ಮೈಕೊ ನಾಗರಾಜ್, ಮನಮೋಹನ್ ರೈ, ಭರತ್ ಮುಂತಾದವರು “ಮಾರಕಾಸ್ತ್ರ” ಚಿತ್ರದ ಕುರಿತು ಮಾತನಾಡಿದರು.
ಮಾಲಾಶ್ರೀ ಹಾಗೂ ಹರ್ಷಿಕಾ ಪೂಣಚ್ಛ ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ.