ಧರ್ಮ ಕೀರ್ತಿರಾಜ್ ಹಾಗೂ ಅದಿತಿ ಅಭಿನಯದ ತಲ್ವಾರ್ ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.
ಇದೊಂದು ವಿಭಿನ್ನ ರೌಡಿಸಂ ಕಥಾಹಂದರ ಇರುವ ಸಿನಿಮಾ. ಈ ಚಿತ್ರದಲ್ಲಿ ಕ್ಯಾಟ್ ಬರೀಸ್ ಎಂದೇ ಕರೆಸಿಕೊಳ್ಳುವ ಧರ್ಮ ಕೀರ್ತಿರಾಜ್ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧರ್ಮ ಕೀರ್ತಿರಾಜ್ ಅವರಿಗೂ ಈ ಸಿನಿಮಾ ಹೊಸ ಇಮೇಜ್ ಸಿಗುತ್ತದೆ ಎಂಬ ಭರವಸೆ ಇದೆ.
ಕಥೆ, ಚಿತ್ರಕಥೆ ಸಂಭಾಷಣೆ ಬರೆದು ರಾಘವ ಮುರಳಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಮುಮ್ತಾಜ್ ಚಿತ್ರ ನಿರ್ದೇಶಿಸಿದ್ದ ರಾಘವ ಮುರಳಿ ಮತ್ತು ಧರ್ಮ ಕೀರ್ತಿರಾಜ್ ಕಾಂಬಿನೆಷನ್ ನ ಎರಡನೇ ಸಿನಿಮಾ ಇದು.
ಇನ್ನು, ಈ ಚಿತ್ರದಲ್ಲಿ ಮಜಾಭಾರತ ಖ್ಯಾತಿಯ ಮಿನಿ ದರ್ಶನ್ ಎಂದೇ ಕರೆಸಿಕೊಳ್ಳುವ ಅವಿನಾಶ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಪಡೆಯುತ್ತಿರುವ ಅವಿನಾಶ್, ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ವಿಶೇಷ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ (JK) ಕಲ್ಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರು ಮಂಗಳೂರಿನ ರೌಡಿ ಕಲ್ಕಿ ಎಂಬ ಪಾತ್ರ ನಿರ್ವಹಿಸುತ್ತಿರುವುದು ವಿಶೇಷತೆಗಳಲ್ಲೊಂದು.
ಈ ಚಿತ್ರ ಟಚ್ ಸ್ಟೋನ್ ಪಿಕ್ಚರ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದು, ಸುರ್ನಳ್ಳಿ ಜಯರಾಮ್ ಅರ್ಪಿಸಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಬೈರಸಂದ್ರ ಬಂಡವಾಳ ಹಾಕಿದ್ದಾರೆ, ಶ್ರೀನಗರ ಕಿಟ್ಟಿ ಅಭಿನಯದ ಬಹುಪರಾಕ್ ಚಿತ್ರಕ್ಕೆ ಸಹ ನಿರ್ಮಾಪಕರಗಿದ್ದ ಇವರು ಈ ಚಿತ್ರವನ್ನು ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ.
ಇವರು ಅನುಭವ ಇರುವ ಛಾಯಾಗ್ರಾಹಕರು ಆಗಿರುವುದರಿಂದ ಈ ಚಿತ್ರಕ್ಕೆ ತಾವೇ ಕ್ಯಾಮರಮಾನ್ ಆಗಿ ತಮ್ಮ ಕೈ ಚಳಕ ತೋರಿಸಿರುವುದು ಮತ್ತೊಂದು ವಿಶೇಷ.
ಕೆ.ಬಿ. ಪ್ರವೀಣ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಚಿತ್ರದ ಹಾಡುಗಳ ಹಕ್ಕುಗಳನ್ನು ಈಗಾಗಲೇ ಸರಿಗಮ ಆಡಿಯೋ ಕಂಪನಿ ದೊಡ್ಡ ಮೊತ್ತಕ್ಕೆ ಖರೀದಿಸಿದೆ.
ಈ ಚಿತ್ರದಲ್ಲಿ 5 ಭರ್ಜರಿ ಸಾಹಸ ದೃಶ್ಯಗಳಿವೆ. ವಿನೋದ್, ಡ್ಯಾನಿ ಮತ್ತು ಕುಂಫು ಚಂದ್ರು ಅವರುಗಳು ಸಾಹಸ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ, ‘ರೋಜ್ ಹಿಡಿದು ಲವ್ ಮಾಡಿದ್ರೆ ಪ್ರೀತಿಸಿದ ಇಬ್ಬರು ನೋವು ಪಡ್ತಾರೆ, ಆದರೆ ಲಾಂಗ್ ಇಡ್ಕೊಂಡು ಜೀವನ ಮಾಡಿದ್ರೆ ಆ ಲಾಂಗ್ ನಿಂದ ಅದೆಷ್ಟು ಫ್ಯಾಮಿಲಿ ಹಾಳಾಗ್ತವೆ ಎಂಬ ಸಂದೇಶವನ್ನು ಈ ಚಿತ್ರ ದಲ್ಲಿ ಹೇಳಲಾಗಿದೆ. ಇದು ರಕ್ತ ಹರಿಸುವ ರೌಡಿಸಂ ಚಿತ್ರವಾಗಿದ್ದರೂ, ಅಲ್ಲಲ್ಲಿ, ಎಮೋಷನ್ ಟಚ್ ಇದೆ ಎಂಬುದು ಚಿತ್ರ ತಂಡದ ಮಾತು.
ಸದ್ಯ ಯು/ಎ ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರ ರಿಲೀಸ್ ಆಗಲು ತಯಾರಿ ನಡೆಸಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಟೀಸರ್ ರಿಲೀಸ್ ಬಿಡುಗಡೆಯಾಗಲಿದೆ.