ಹಾಡು ಮತ್ತು ಟ್ರೇಲರ್ ಮೂಲಕ ಸದ್ದು ಮಾಡಿದ್ದ ‘ತೋತಾಪುರಿ’, ಬಿಡುಗಡೆಯಾದ ಮೇಲೂ ಗಮನ ಸೆಳೆದಿತ್ತು. ಇದೀಗ ‘ತೋತಾಪುರಿ-2’ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಹರಿಬಿಟ್ಟ ಈ ಸಿನಿಮಾದ ಪೋಸ್ಟರ್ಗಳು ಹಾಗೂ ಹಾಡೊಂದು ನಾನಾ ಕಾರಣಗಳಿಂದಾಗಿ ಸದ್ದು ಮಾಡಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಜಗ್ಗೇಶ್-ಡಾಲಿ ಧನಂಜಯ್ ಕಾಂಬಿನೇಷನ್ ಇದೇ ಮೊದಲ ಬಾರಿಗೆ ಎಂಬುದು ಒಂದೆಡೆಯಾದರೆ, ಎರಡು ಭಾಗಗಳಲ್ಲಿ ಮೂಡಿಬಂದಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ಕಾನಿಸಿಕೊಂಡಿರೋದು ವಿಶೇಷ.
ಡಾಲಿ ಧನಂಜಯ್ ಈವರೆಗೂ ವಿಭಿನ್ನ ರೀತಿಯ ಪಾತ್ರಗಳ ಮೂಲಕ ಮಿಂಚು ಹರಿಸಿದ್ದಾರೆ. ಅವರು ನಟಿಸಿರುವ ಪಾತ್ರಗಳಲ್ಲಿ ನಾಯಕ-ಖಳನಾಯಕನಾಗಿ ಅಬ್ಬರಿಸಿದ್ದಾರೆ. ಇದೀಗ ‘ತೋತಾಪುರಿ-2’ ಮೂಲಕ ಮತ್ತಷ್ಟು ಸೌಂಡು ಮಾಡಲು ಸಜ್ಜಾಗಿದ್ದಾರೆ ಡಾಲಿ.
ಈಗಾಗಲೇ ತೋತಾಪುರಿ ಮೊದಲ ಭಾಗದಲ್ಲಿ ಅವರ ಪಾತ್ರದ ಪರಿಚಯವಾಗಿತ್ತು. ಆದರೆ ಅವರು ಎಷ್ಟು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ, ಗೆಟಪ್, ಡೈಲಾಗ್ ಇತ್ಯಾದಿ ವಿಷಯಗಳ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿ ಹೊರ ಹಾಕಿರಲಿಲ್ಲ. ಇದೀಗ ‘ತೋತಾಪುರಿ-2’ ಬಿಡುಗಡೆಯ ಹಂತಕ್ಕೆ ಬಂದಿದೆ. ಹೀಗಾಗಿ ಅವರ ಪಾತ್ರದ ಬಗ್ಗೆ ಒಂದಷ್ಟು ವಿವರಣೆ ಹೊರಬಿದ್ದಿದೆ.
ನಾರಾಯಣ್ ಪಿಳ್ಳೈ ಎಂಬ ಪಾತ್ರ ನಿರ್ವಹಿಸುತ್ತಿರುವ ಡಾಲಿ, ಬೃಹತ್ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಲೈಫ್ಸ್ಟೈಲ್, ಲವ್ಸ್ಟೋರಿ ಸೇರಿದಂತೆ ಇನ್ನಿತರ ವಿಷಯಗಳ್ನು ‘ತೋತಾಪುರಿ-೨’ರಲ್ಲಿ ತೆರೆದಿಡುವ ಪ್ರಯತ್ನವಾಗಿದೆಯಂತೆ. ಇತ್ತೀಚೆಗಷ್ಟೇ ಡಾಲಿ ಹಾಗೂ ಸುಮನ್ ರಂಗನಾಥ್ ಕಾಣಿಸಿಕೊಂಡಿರುವ ‘ಮೊದಲ ಮಳೆ’ ಹಾಡು ಬಿಡುಗಡೆಯಾಗಿದ್ದು. ಇದೀಗ ‘ಲಾಂಗ್ ಡ್ರೈವ್ ಹೋಗೋಣ’ ಎಂಬ ಹಾಡು ಸಹ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಡಾಲಿ ಮೂರ್ನಾಲ್ಕು ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನ ಶೇಡ್ ಕೂಡ ಇರಲಿದೆ ಎಂಬುದು ಸದ್ಯದ ಮಾಹಿತಿ. ಈವರೆಗೂ ಕಾಣಿಸಿಕೊಂಡಿರದ ಸ್ಟೈಲ್, ಮಾತಿನ ಲಹರಿ ‘ತೋತಾಪುರಿ-2′ ಮೂಲಕ ಅನಾವರಣ ಮಾಡಲು ಸಜ್ಜಾಗಿದೆ ಚಿತ್ರತಂಡ. ಬಿಡುಗಡೆಗೂ ಮುನ್ನ ಡಾಲಿ ಗೆಟಪ್ಗಳನ್ನು ಹರಿಬಿಟ್ಟಿರುವ ಚಿತ್ರತಂಡ, ಸಿನಿಮಾ ಮೇಲೆ ನೀರಿಕ್ಷೆ ಹೆಚ್ಚುವಂತೆ ಮಾಡಿದೆ. ಮೈಸೂರು, ಕೂರ್ಗ್, ಕೇರಳ ಸೇರಿದಂತೆ ರಮಣೀಯ ಸ್ಥಳಗಳಲ್ಲಿ ಡಾಲಿ-ಸುಮನ್ ಅಭಿನಯಿಸಿರುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ಇನ್ನು ಡಾಲಿ ಜೋಡಿಯಾಗಿ ಸುಮನ್ ರಂಗನಾಥ್ ನಟಿಸಿದ್ದಾರೆ. ಹಾಗೆಯೇ ಈ ಚಿತ್ರದಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಬೃಹತ್ ತಾರಾಗಣವೇ ಇದೆ. ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರವನ್ನು ಕೆ.ಎ.ಸುರೇಶ್ ನಿರ್ಮಿಸಿದ್ದಾರೆ.