ನಾಯಕ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದ ಕ್ಷಣದಲ್ಲಿ ಪ್ರಜ್ವಲ್ ನಾಯಕರಾಗಿ ನಟಿಸಿರುವ “ಗಣ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರಜ್ವಲ್ ಅವರ ತಾಯಿ ಚಂದ್ರಲೇಖ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ನಟ ದೇವರಾಜ್, ರಾಗಿಣಿ ಪ್ರಜ್ವಲ್ ಹಾಗೂ ಪ್ರಣಾಮ್ ದೇವರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಕನ್ನಡ ಚಿತ್ರ ನಿರ್ಮಾಣ ಮಾಡಬೇಕೆಂಬ ಆಸೆಯಾಯಿತು. ಹಾಗಾಗಿ “ಗಣ” ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ ಎಂದು ಮಾತು ಪ್ರಾರಂಭಿಸಿದ ನಿರ್ಮಾಪಕ ಪಾರ್ಥು, ಸೋಶಿಯಲ್ ಮೀಡಿಯಾದಲ್ಲಿ ನಾನು ಪ್ರಜ್ವಲ್ ಅವರನ್ನು ಫಾಲೋ ಮಾಡುತ್ತಿದ್ದೆ. ಅದರಲ್ಲಿ ಪ್ರಜ್ವಲ್ ಅವರ ಅಭಿಮಾನಿಗಳು ಯಾವ ರೀತಿ ಚಿತ್ರ ನಿರೀಕ್ಷಿಸುತ್ತಿದ್ದರೊ, ಅದೇ ತರಹದ ಚಿತ್ರ ಮಾಡಿದ್ದೇವೆ. ಪ್ರಜ್ವಲ್ ದೇವರಾಜ್ ಅವರು ಈವರೆಗೂ ಮಾಡಿರದ ಪಾತ್ರ ಎನ್ನಬಹುದು. ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ಸ್ ನಡೆಯುತ್ತಿದೆ. ಹರಿಪ್ರಾಸಾದ್ ಜಕ್ಕ ನಿರ್ದೇಶನ ಮಾಡಿದ್ದಾರೆ. ನಾನು ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದೇನೆ ಎಂದರು.
ಕನ್ನಡದ ಕಲಾವಿದರು ಹಾಗೂ ತಂತ್ರಜ್ಞರ ಜೊತೆ ಕೆಲಸ ಸಿನಿಮಾ ಮಾಡಬೇಕೆಂದು ಬಂದ ಪಾರ್ಥು ಅವರಿಗೆ ಅಭಿನಂದನೆ ತಿಳಿಸಿ “ಗಣ” ಚಿತ್ರದ ಬಗ್ಗೆ ಮಾತು ಆರಂಭಿಸಿದ ಪ್ರಜ್ವಲ್ ದೇವರಾಜ್, “ಗಣ” ನಾನು ಈವರೆಗೂ ಮಾಡಿರುವ ಚಿತ್ರಗಳಲ್ಲೇ ಬೇಗ ಮುಗಿದಿರುವ ಚಿತ್ರ ಹಾಗೂ ಡಿಫರೆಂಟ್ ಜಾನರ್ ನ ಚಿತ್ರ ಕೂಡ. 1993 ಹಾಗೂ 2023 ಎರಡು ಕಾಲಘಟ್ಟದಲ್ಲಿ ಈ ಕಥೆ ನಡೆಯುತ್ತದೆ. ಸಮಯದ ಜೊತೆ ಹೋರಾಡುವ ಚಿತ್ರ ಎನ್ನಬಹುದು. ನನ್ನ ಜೊತೆ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಅದ್ಭುತವಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.
ಚಿತ್ರದಲ್ಲಿ ನಟಿಸಿರುವ ವೇದಿಕ, ಕೃಷಿ ತಾಪಂಡ, ಶಿವರಾಜ್ ಕೆ.ಆರ್ ಪೇಟೆ, ಮಾಸ್ಟರ್ ರಘುನಂದನ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಛಾಯಾಗ್ರಹಕ ಜೈ ಆನಂದ್, ಕಲಾ ನಿರ್ದೇಶಕ ಸತೀಶ್, ಸಂಕಲನಕಾರ ಹರೀಶ್ ಕೊಮ್ಮೆ ಹಾಗೂ ಗೋಪಿ ಅವರು “ಗಣ”ದ ಬಗ್ಗೆ ಮಾತನಾಡಿದರು. ಶ್ರೀನಿವಾಸ್ ಚಿಕ್ಕಬಳ್ಳಾಪುರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.