ಕನ್ನಡದಲ್ಲೀಗ ಹೊಸ ಪ್ರತಿಭೆಗಳ ವಿಭಿನ್ನ ಪರ್ವ ಕಾಲ ಶುರುವಾಗಿದೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾ ಡಾಲರ್ಸ್ ಪೇಟೆ. ಮಾರ್ಫಿ, ಮದಗಜ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮೋಹನ್ ಎನ್ ಮುನಿನಾರಾಯಣಪ್ಪ ನಿರ್ದೇಶನದ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ದರೋಡೆ ಹಿಂದಿನ ರೋಚಕ ಕಥೆಯನ್ನು ಬಿಚ್ಚಿಡುವ ಟೀಸರ್ ನಲ್ಲಿ ಬುಲೆಟ್ ಗಳ ಆರ್ಭಟ, ಹೊಡೆದಾಟ-ಬಡಿದಾಟ, ಹಣ, ವಿಲನ್ ಅಬ್ಬರ ಜೋರಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿದೆ.
ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಟೀಸರ್ ರಿಲೀಸ್ ಮಾಡಿದ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಮಾತನಾಡಿ, ಡಾಲರ್ಸ್ ಪೇಟೆ ಸತ್ಯ ಘಟನೆಯಾಧಾರಿತ ಚಿತ್ರ. ತಮಿಳುನಾಡಿನ ಬ್ಯಾಂಕ್ ಒಂದ್ರಲ್ಲಿ ಬ್ಯಾಂಕ್ ಮ್ಯಾನರ್ ನಿಂದ 13 ಕೋಟಿ ಹಣ 100 ಜನಕ್ಕೆ ಮಿಸ್ ಆಗಿ ಡೆಪೋಸಿಟ್ ಆಗುತ್ತದೆ. ಅದು ಹೇಗೆ ಏನು ಅನ್ನೋದರ ಸುತ್ತ ಸಿನಿಮಾ ಸಾಗುತ್ತದೆ. ಇಡೀ ಸಿನಿಮಾವನ್ನು ಒಂದು ಪಾತ್ರದ ಮೇಲೆ ಡೆವಲಪ್ ಮಾಡಿಲ್ಲ. ಇದೊಂದು ಹೈಪರ್ ಲಿಂಕ್ ಹಾಗೂ ಡಾರ್ಕ್ ಕಾಮಿಡಿ ಥ್ರಿಲ್ಲರ್. ನಾಲ್ಕು ಐದು ಪಾತ್ರಗಳು ಒಂದು ಜಾಗದಲ್ಲಿ ಕ್ರಾಸ್ ಓವರ್ ಆಗುತ್ತೇ ಅನ್ನೋದು ಚಿತ್ರದ ಹೈಲೆಟ್. 50ರಷ್ಟು ಸಿನಿಮಾ ಬ್ಯಾಂಕ್ ನಡೆಯಲಿದೆ ಎಂದರು.
ಸೌಮ್ಯಾ ಮಾತನಾಡಿ, ನಾನು ಪೂಜಾ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಈ ಸಿನಿಮಾದ ಭಾಗವಾಗಿರುವುದು ನನಗೆ ಖುಷಿಕೊಟ್ಟಿದೆ. ನಿರ್ಮಾಪಕಿ ಪೂಜಾ ಬೆನ್ನೆಲುಬಾಗಿ ನಿಂತು ಯಾವುದೇ ಕುಂದುಕೊರೆತೆ ಬಾರದೆ ನೋಡಿಕೊಂಡಿದ್ದಾರೆ. ನಿರ್ದೇಶಕರು ನನಗೆ ಕಥೆ ಹೇಳಿದಾಗ ತಕ್ಷಣ ಸಿನಿಮಾ ಮಾಡಲು ಒಪ್ಪಿಕೊಂಡೆ. ಥ್ರಿಲ್ಲರ್ ಜಾನರ್ ಆದರೂ ಪಾತ್ರಗಳು ಅಳುತ್ತಿದ್ದರು ಪ್ರೇಕ್ಷಕರು ನಗುವಂತೆ ಮಾಡುವ ಸನ್ನಿವೇಶ ಚಿತ್ರದಲ್ಲಿದೆ. ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದರು.
ನಟ ವೆಂಕಟ್ ರಾಜು ಮಾತನಾಡಿ, ಡಾನ್ ಪಾತ್ರದಲ್ಲಿ ನಟಿಸಿದ್ದು, ನನ್ನ ಸ್ನೇಹಿತನಿಂದ ಈ ಪಾತ್ರ ಸಿಕ್ಕಿದೆ. ಮೂರು ತಿಂಗಳು ಪಾತ್ರಕ್ಕೆ ತಯಾರಿ ಮಾಡಿಕೊಂಡೆ. ಸೆಟ್ ನಲ್ಲಿ ಇಡೀ ಕುಟುಂಬದ ರೀತಿ ಎಲ್ಲರೂ ಟ್ರೀಟ್ ಮಾಡುತ್ತಿದ್ದರು. ಇದು ಒಳ್ಳೆ ಅನುಭವ. ಪ್ರತಿಯೊಬ್ಬರು ಸಿನಿಮಾ ಬೆಂಬಲ ಕೊಡಿ ಎಂದರು.
ಹೈಪರ್ ಲಿಂಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಲೂಸಿಯಾ ಪವನ್ ಪತ್ನಿ ಸೌಮ್ಯ ಜಗನ್ ಮೂರ್ತಿ, ಮೆಟ್ರೋ ಸಾಗಾ ಖ್ಯಾತಿಯ ಆಕರ್ಷ್ ಕಮಲ, ವೆಂಕಟ್, ರಾಜ್, ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ದಿಯಾ ಪೃಥ್ವಿ ಅಂಬರ್ ಗೆಸ್ಟ್ ಅಪಿಯರೆನ್ಸ್ ಚಿತ್ರದಲ್ಲಿದೆ. ಉಳಿದಂತೆ ದತ್ತು ಬಣಕರ್, ಕೌಶಿಲ್, ರಾಘವೇಂದ್ರ, ಹೊನ್ನವಳ್ಳಿ, ಡ್ರಾಮಾ ಜೂನಿಯರ್ಸ್ ಮಹೇಂದ್ರ ಒಳಗೊಂಡ ಕಲಾಬಳಗ ಚಿತ್ರದಲ್ಲಿದೆ.
ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಆನಂದ್ ಸುಂದರೇಶ ಛಾಯಾಗ್ರಹಣ, ಮಹೇಶ್ ತೊಗಟ್ಟ ಸಂಕಲನ, ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ನಿರ್ದೇಶನ, ರಮೇಶ್ ಎಸ್, ಮನೋಹರ ಸಹಬರವಣಿಗೆ ಸಿನಿಮಾಕ್ಕಿದೆ. ಪೆಂಟ್ರಿಕ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಪೂಜಾ ಟಿ.ವೈ ಚಿತ್ರ ನಿರ್ಮಾಣ ಮಾಡಿದ್ದಾರೆ.