ವಿಶ್ವಮಟ್ಟದಲ್ಲಿ ಕನ್ನಡ ಚಿತ್ರಗಳು ಗುರುತಿಸಿಕೊಳ್ಳುತ್ತಿವೆ. ಈ ಸಾಲಿಗೆ ವಿಭಿನ್ನ ಕಥಾಹಂದರ ಹೊಂದಿರುವ “ಜ್ಯೂಲಿಯೆಟ್ 2” ಸಹ PL production ಬ್ಯಾನರ್ ನಡಿ ನಿರ್ಮಾಣವಾಗಿದೆ. ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.
“ನೆನಪಿರಲಿ” ಪ್ರೇಮ್ ಅಭಿನಯದ “ಪ್ರೇಮ ಪೂಜ್ಯಂ” ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬೃಂದಾ ಆಚಾರ್ಯ “ಜ್ಯೂಲಿಯೆಟ್ 2” ಚಿತ್ರದಲ್ಲಿ ಜ್ಯೂಲಿಯೆಟ್ ಆಗಿ ಕಾಣಿಸಿಕೊಂಡಿದ್ದಾರೆ.
ಕ್ರೈಮ್ ಥ್ರಿಲ್ಲರ್ ಜಾನರ್ ನ ಈ ಚಿತ್ರವನ್ನು ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಕೂಡ ವಿರಾಟ್ ಅವರದೆ.
ಲಿಖಿತ್ ಆರ್ ಕೋಟ್ಯಾನ್ ನಿರ್ಮಿಸಿರುವ ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಮಂಗಳೂರು, ಬೆಳ್ತಂಗಡಿ ಹಾಗೂ ಅದರ ಸುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆದಿದೆ.
ನಗರವಾಸಿಯಾದ ಮಗಳು, ತನ್ನ ತಂದೆಯ ಕೊನೆಯ ಆಸೆ ಈಡೇರಿಸಲು ಹುಟ್ಟೂರಿಗೆ ಹೋಗಿ ನೆಲೆಸುತ್ತಾಳೆ. ಅಲ್ಲಿ ಏನೆಲ್ಲಾ ಆಗುತ್ತದೆ ಹಾಗೂ ಹೆಣ್ಣು ಶಾಂತರೂಪಿಯಾದ ಶಾರದೆಯ ರೀತಿ ಇರುತ್ತಾಳೆ. ಆದರೆ ತನಗೆ ತೊಂದರೆಯಾದಾಗ ಆಕೆ ದುರ್ಗೆಯೂ ಆಗುತ್ತಾಳೆ ಎಂಬುದು ಈ ಚಿತ್ರದ ಕಥಾಹಂದರ.
ಬೃಂದಾ ಆಚಾರ್ಯ, ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ shanto v anto ಅವರ ಛಾಯಾಗ್ರಹಣ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು.
ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮೊದಲು “ಜ್ಯೂಲಿಯೆಟ್ 2” ಫೆಬ್ರವರಿ ವೇಳೆಗೆ ತೆರೆಗೆ ಬರಲಿದೆ. ಆನಂತರ ಮೊದಲ ಭಾಗ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ವಿರಾಟ್ ತಿಳಿಸಿದ್ದಾರೆ.