ಸತೀಶ್ ರಾಜ್ ನಿರ್ಮಿಸಿ, ನಿರ್ದೇಶಿಸಿರುವ “ಹುಷಾರ್” ಚಿತ್ರದ “ನೀ ನೋಡೋಕ್ಕೆ ಸಿಕ್ಸ್ಟೀನು ಸ್ವೀಟಿ” ಎಂಬ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದಾರೆ. ಇತ್ತೀಚಿಗೆ ಈ ಹಾಡನ್ನು ಪ್ರಿಯಾಂಕ ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಚಿತ್ರದ ಟ್ರೇಲರ್ ನ್ನು ನಿರ್ಮಾಪಕ ಎನ್.ಎಂ.ಸುರೇಶ್ ಅವರು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ಉಪೇಂದ್ರ ಅವರು ಹಾಡಿರುವುದು. ಈ ಹಾಡು H20 ಚಿತ್ರದ “ದಿಲ್ ಇಲ್ದೇ ಲವ್ ಮಾಡೋಕಾಗಲ್ವೆ” ಹಾಡಿನ ತರಹ ಇದೆ. ಈ ಹಾಡು ಅದೇ ರೀತಿ ಹಿಟ್ ಆಗಲಿ. ಹಾರರ್ ಜಾನರ್ ನ ಈ ಸಿನಿಮಾ ಎಲ್ಲರ ಮನ ಗೆಲ್ಲಲಿ ಎಂದು ಪ್ರಿಯಾಂಕ ಉಪೇಂದ್ರ ಶುಭ ಹಾರೈಸಿದರು.
ನಾನು ಡಾ.ರಾಜ್ ಅವರ ಅಭಿಮಾನಿ. ಕನ್ನಡ ಚಿತ್ರರಂಗದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ರಂಗಭೂಮಿ ನಂಟು ಇದೆ. ಲಾಕ್ ಡೌನ್ ಸಮಯದಲ್ಲಿ “ಹುಷಾರ್” ಪೆನ್ ಡ್ರೈವ್ ಎಂಬ ಕಥೆ ಬರೆದೆ. ಈ ಕಥೆ ಪುಸ್ತಕ ರೂಪದಲ್ಲಿ ಎಲ್ಲೆಡೆ ಲಭ್ಯವಿವೆ. ಆನಂತರ ಇದನ್ನು ಸಿನಿಮಾ ಮಾಡೋಣ ಎಂದು ಚಿತ್ರೀಕರಣ ಆರಂಭಿಸಿದೆ. ಹಲವು ಅಡೆತಡೆಗಳನ್ನು ದಾಟಿ, ಚಿತ್ರ ಬಿಡುಗಡೆ ಹಂತ ತಲುಪಿದೆ. ಉಪೇಂದ್ರ ಅವರು ನಮ್ಮ ಸಿನಿಮಾದ ಹಾಡೊಂದು ಹಾಡಿರುವುದು ನಮ್ಮ ಹೆಮ್ಮೆ. ಆ ಹಾಡನ್ನು ಬಿಡುಗಡೆ ಮಾಡಿದ ಪ್ರಿಯಾಂಕ ಉಪೇಂದ್ರ ಅವರಿಗೆ ಧನ್ಯವಾದ ಎಂದರು ನಿರ್ಮಾಪಕ- ನಿರ್ದೇಶಕ ಸತೀಶ್ ರಾಜ್.
ನಾಯಕ ಸಿದ್ದೇಶ್, ನಾಯಕಿ ಆದ್ಯಪ್ರಿಯ, ನಟಿ ಪುಷ್ಪಸ್ವಾಮಿ, ನಟರಾದ ಬುಲೆಟ್ ವಿನೋದ್, ಡಿಂಗ್ರಿ ನಾಗರಾಜ್, ನಟಿ ರಚನಾ ಮಲ್ನಾಡ್ ಮುಂತಾದ ಕಲಾವಿದರು ತಮ್ಮ ಅಭಿನಯದ ಬಗ್ಗೆ ಮಾತನಾಡಿದರು. ಸಹ ನಿರ್ಮಾಪಕಿ ಅಶ್ವಿನಿ ಅರುಣ್ ಕೃಷ್ಣನ್ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಆರ್ಥಿಕ ಸಲಹೆಗಾರರಾದ ಇಂದು ಶೇಖರ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.