ಕನ್ನಡ ಚಿತ್ರರಂಗವನ್ನು ಈಗ ಇಡೀ ಭಾರತೀಯ ಸಿನಿಮಾರಂಗವೇ ತಿರುಗಿ ನೋಡುವಂತಾಗಿದೆ. ಕನ್ನಡದ ಅನೇಕ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ವ್ಯಾಪಾರದ ದೃಷ್ಟಿಯಲ್ಲೂ ಕನ್ನಡದ ಸಿನಿಮಾಗಳಿಗೆ ಈಗ ಬೇಡಿಕೆ ಹೆಚ್ಚಿದೆ. ಆ ನಿಟ್ಟಿನಲ್ಲಿ ಅನೇಕ ಹೊಸಬರ ಕಂಟೆಂಟ್ ಸಿನಿಮಾಗಳು ಜೋರಾಗಿಯೇ ಸೆಟ್ಟೇರುತ್ತಿವೆ. ಆ ಸಾಲಿಗೆ ಈಗ ಹೊಸಬರ ‘ರೆಡ್ ರಮ್’ ಸಿನಿಮಾ ಕೂಡ ಸೇರಿದೆ
ಹೌದು, ಕೌಟಿಲ್ಯ ಸಿನಿಮಾಸ್ ಹಾಗೂ ಹನಿ ಚೌಧರಿ ಫಿಲಮ್ಸ್ ಮೂಲಕ ‘ ರೆಡ್ ರಮ್’ ಚಿತ್ರಕ್ಕೆ ಪೂಜೆ ನಡೆದಿದೆ. ಅಶೋಕ್ ದೇವನಾಂಪ್ರಿಯ, ಕಿಶೋರ್ ಎ. ವಿಜಯ್ ಕುಮಾರ್ ಹಾಗೂ ಹನಿ ಚೌಧರಿ ಈ ಸುನಿಮಾದ ನಿರ್ಮಾಪಕರು. ” ರೆಡ್ ರಮ್” ಚಿತ್ರದ ವಿಶೇಷವೆಂದರೆ, ಇದರ ಮುಹೂರ್ತ ಪೂಜೆ ಉತ್ತರ ಪ್ರದೇಶದ ಮೋದಿನಗರದ ಶ್ರೀ ಸನಾತನ ಧರ್ಮ ದೇವಸ್ಥಾನದಲ್ಲಿ ನೆರವೇರಿದೆ.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮೋದಿ ನಗರದ ಶಾಸಕರಾದ ಶ್ರೀಮತಿ ಮಂಜು ಶಿವಾಚ್, ಸ್ಥಳೀಯ ಕೌನ್ಸಿಲರ್ ರಾಜಕುಮಾರಿ ಮುನ್ನಿ ಜಿ ಹಾಗೂ ಅನೇಕ ಗಣ್ಯರು ಆಗಮಿಸಿ ಕನ್ನಡ ಸಿನಿಮಾ ತಂಡಕ್ಕೆ ಶುಭಹಾರೈಸಿದ್ದಾರೆ.
‘ರೆಡ್ ರಮ್’ ಚಿತ್ರಕ್ಕೆ ಆರ್. ಪ್ರಮೋದ್ ಜೋಯಿಸ್ ನಿರ್ದೇಶಕರು. ಇದೊಂದು ಈ ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿದೆ. ಹಿಂದೆಂದೂ ಕೇಳಿರದ ಕಥಾಹಂದರ ಇಲ್ಲಿದೆ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ಬಾಲಿವುಡ್ ನಟ ರಾಜ್ ವೀರ್, ಮಧುರಾ, ಅಫ್ಜಲ್ , ಶ್ರೀದತ್ತಾ, ಪ್ರಾಚಿಶರ್ಮ, ಧ್ರಿತೇಶ್ ವಿನಯ್ ಸೂರ್ಯ ಹಾಗೂ ಯತಿರಾಜ್ ಅಭಿನಯಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ಕಲಾವಿದರ ಸಮಾಗಮವಿದೆ.
ಚಿತ್ರಕ್ಕೆ ಶಿವಶಂಕರ್(ಶಂಖು) ಛಾಯಾಗ್ರಹಣವಿದೆ. ಆರ್. ಚೇತನ್ ಕೃಷ್ಣ ಸಂಗೀತವಿದೆ. ಅಫ್ಜಲ್ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸಿನಿಮಾಗೆ ಮುಹೂರ್ತ ಪೂಜೆ ನಡೆದಿದ್ದು, ಸುಮಾರು 20 ದಿನಗಳ ಕಾಲ ಉತ್ತರ ಪ್ರದೇಶದ ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ. ಕೆಲ ಭಾಗ ಬೆಂಗಳೂರಿನಲ್ಲೂ ಚಿತ್ರೀಕರಣ ಮಾಡುವ ಯೋಜನೆ ಚಿತ್ರತಂಡಕ್ಕಿದೆ ಎಂದು ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ತಿಳಿಸಿದ್ದಾರೆ.