ಮಾಮೂಲಿ ತರಹದ ಕಥೆಯಲ್ಲದೇ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳಿಗೆ ಕನ್ನಡ ಪ್ರೇಕ್ಷಕರು ಜೈ ಎಂದದ್ದು ಹೆಚ್ಚು. ಅಂತಹ ವಿಭಿನ್ನ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಯೆಲ್ಲೋ ಗ್ಯಾಂಗ್ಸ್” ಚಿತ್ರದ ಟ್ರೇಲರ್ ವಿಭಿನ್ನವಾಗಿದ್ದು, ನೋಡುಗರಲ್ಲಿ ಕುತೂಹಲ ಮೂಡಿಸಿದೆ. ಹಲವಾರು ಸ್ನೇಹಿತರ ಸಮ್ಮಿಲನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ನವೆಂಬರ್ 11 ರಂದು ತೆರೆ ಕಾಣುತ್ತಿದೆ.
ಬೇರೊಂದು ಉದ್ಯೋಗ ಮಾಡುತ್ತಿದ್ದ ನನ್ನನ್ನು ಚಿತ್ರರಂಗ ಆಕರ್ಷಿಸಿತ್ತು. ಮೊದಲ ಪ್ರಯತ್ನವಾಗಿ ಈ ಚಿತ್ರ ನಿರ್ದೇಶಿಸಿದ್ದೇನೆ. ಕನ್ನಡದಲ್ಲಿ ಕ್ರೈಮ್ ಥ್ರಿಲ್ಲರ್ ಚಿತ್ರಗಳು ಬಂದಿದೆಯಾದರೂ, ಇದು ಸ್ವಲ್ಪ ಭಿನ್ನ. ನಾಯಕ ದೇವ್ ದೇವಯ್ಯ, ನಾಯಕಿ ಅರ್ಚನಾ ಕೊಟ್ಟಿಗೆ ಸೇರಿದಂತೆ ಹತ್ತೊಂಬತ್ತು ಪ್ರಮುಖ ಪಾತ್ರಗಳು ನಮ್ಮ ಚಿತ್ರದಲ್ಲಿದೆ. ಎಲ್ಲಾ ಪಾತ್ರಗಳ ಮೇಲೂ ನಮ್ಮ ಚಿತ್ರದ ಕಥೆ ಸಾಗುತ್ತದೆ. ಮೂರು ಗ್ಯಾಂಗ್ ಗಳಿದ್ದು, ಅದಕ್ಕೆ ಮೂರು ಜನ ಮುಖ್ಯಸ್ಥರಿರುತ್ತಾರೆ.
ಸುಜ್ಞಾನ್ ಅವರ ಸುಂದರ ಛಾಯಾಗ್ರಹಣ ಹಾಗೂ ರೋಹಿತ್ ಸೋವರ್ ಅವರ ಸಂಗೀತ ನಿರ್ದೇಶನ ಈ ಚಿತ್ರದ ಹೈಲೆಟ್. ಇಡೀ ಚಿತ್ರವನ್ನು ಟ್ರ್ಯಾಲಿ ಬಳಸದೆ , ಕೈಯಲ್ಲಿ ಕ್ಯಾಮೆರಾ ಹಿಡಿದು ಚಿತ್ರಿಸಿರುವುದು ವಿಶೇಷ. ಇಂತಹ ಹಲವು ವಿಶೇಷಗಳ ಸಂಗಮವಾಗಿರುವ ನಮ್ಮ “ಯೆಲ್ಲೋ ಗ್ಯಾಂಗ್ಸ್” ಗೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ.
ವಿಭಿನ್ನ ಸ್ಟುಡಿಯೋಸ್, ವಾಟ್ ನೆಕ್ಸ್ಟ್ ಮೂವೀಸ್ ಹಾಗೂ ಕೀ ಲೈಟ್ಸ್ ಸಂಸ್ಥೆ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಶಿವಮೊಗ್ಗದ ನವೋದಯ ಶಾಲೆಯಲ್ಲಿ ಓದಿರುವ ಸಾಕಷ್ಟು ವಿದ್ಯಾರ್ಥಿಗಳು ಈ ಚಿತ್ರಕ್ಕೆ ಹಣ ಹೂಡಿದ್ದೇವೆ. ಏಕೆಂದರೆ ನಿರ್ದೇಶಕ ರವೀಂದ್ರ ನಮ್ಮ ಸಹಪಾಠಿ. ಮೊದಲಿನಿಂದಲೂ ಅವರ ಯೋಚನೆ ವಿಭಿನ್ನವಾಗಿರುವುದರಿಂದ ನಮ್ಮ ಸಂಸ್ಥೆಗೆ ವಿಭಿನ್ನ ಸ್ಟುಡಿಯೋಸ್ ಎಂದು ಹೆಸರಿಟ್ಟಿದ್ದೇವೆ ಎಂದರು ನಿರಂಜನ್.
ವಿಕ್ರಮ್ ಎಂಬ ಹೆಸರಿನಿಂದ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ಅಭಿನಯಿಸಿರುವುದಾಗಿ ನಾಯಕ ದೇವ್ ದೇವಯ್ಯ ಹೇಳಿದರು. ನನಗೆ ಇದೊಂದು ಉತ್ತಮ ಚಿತ್ರವೆಂದರು ನಾಯಕಿ ಅರ್ಚನಾ ಕೊಟ್ಟಿಗೆ.
ಚಿತ್ರದಲ್ಲಿ ನಟಿಸಿರುವ ಸತ್ಯ ಬಿ.ಜಿ, ಅರುಣ್ ಕುಮಾರ್, ನಾಟ್ಯ ರಂಗ, ವಿನೀತ್ ಕಟ್ಟಿ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಹಾಡುಗಳಿಲ್ಲ. ರೀರೇಕಾರ್ಡಿಂಗ್ ಚಿತ್ರದ ಹೈಲೆಟ್ ಎಂದರು ಸಂಗೀತ ನಿರ್ದೇಶಕ ರೋಹಿತ್.
ಸಹ ನಿರ್ಮಾಪಕ ಮನೋಜ್ ಪಿ ಅವರ ಪುತ್ರಿ ಪ್ರತೀಕ್ಷ ಟ್ರೇಲರ್ ಬಿಡುಗಡೆ ಮಾಡಿದರು. ನಿರ್ದೇಶಕರೊಟ್ಟಿಗೆ ಸಂಭಾಷಣೆ ಬರೆದಿರುವ ಪ್ರವೀಣ್ ಕುಮಾರ್ ಇದ್ದರು.