ತಂತ್ರಜ್ಞಾನ ಮುಂದುವರೆದ ಹಾಗೆ ಜನರ ಆಲೋಚನೆ ಶಕ್ತಿಯು ಬೆಳೆಯುತ್ತಾ ಹೋಗುತ್ತಿದೆ.
ಎರಡು, ಮೂರು ಗಂಟೆಗಳಲ್ಲಿ ಹೇಳ ಬೇಕಾದ ವಿಷಯವನ್ನು ಇಪ್ಪತ್ತು, ಮೂವತ್ತು ನಿಮಿಷಗಳ ಕಿರುಚಿತ್ರಗಳಲ್ಲಿ ಮನತಟ್ಟುವಂತೆ ಹೇಳುವ ನಿರ್ದೇಶಕರು ಈಗ ಹೆಚ್ಚಾಗುತ್ತಿದ್ದಾರೆ. ಅಂತಹ ಉತ್ತಮ ಕಿರುಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರುತ್ತಿದೆ.
ಸತ್ಯ ಹೆಗಡೆ ಸ್ಟುಡಿಯೋಸ್ ಅರ್ಪಿಸುವ, ಸೌಮ್ಯ ಚಂದ್ರಶೇಖರ್ ನಿರ್ಮಿಸಿರುವ ಹಾಗೂ ಪ್ರದೀಪ್ ಕೃಷ್ಣಮೂರ್ತಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ” ದಿ ಲಾಸ್ಟ್ ಕೇಸ್” ಕಿರುಚಿತ್ರದ ಪ್ರದರ್ಶನ ಹಾಗು ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.
ಎಲ್ಲಾ ಸಾಕ್ಷಿಗಿಂತ ಮನಸಾಕ್ಷಿಯೇ ದೊಡ್ಡದು ಎಂಬ ಅಂಶವನ್ನು ನಿರ್ದೇಶಕರು ಈ ಕಿರುಚಿತ್ರದಲ್ಲಿ ಮನಮುಟ್ಟುವಂತೆ ತೋರಿದ್ದಾರೆ.
ನನಗೆ ಈ ಕಿರುಚಿತ್ರದ ಕಥೆ ಬಹಳ ಮೆಚ್ಚುಗೆಯಾಯಿತು. ಅಪರಾಧಿಯೊಬ್ಬ ನಾನೇ ಕೊಲೆಗಾರ ಎಂದು ಹೇಳಿ ಪೊಲೀಸರ ಬಳಿ ಶರಣಾಗುವ ವಿಷಯ ಬಹಳ ಮನಸ್ಸಿಗೆ ಹತ್ತಿರವಾಯಿತು. ಉತ್ತಮ ಕಿರುಚಿತ್ರ ನಿರ್ಮಿಸಿರುವ ಇಡೀ ತಂಡಕ್ಕೆ ಧನ್ಯವಾದ ಎಂದರು ಈ ಕಿರುಚಿತ್ರದಲ್ಲಿ ಅಭಿನಯಿಸಿರುವ ನಟ ರಮೇಶ್ ಪಂಡಿತ್.
ಈ ಕಿರುಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ತಮ್ಮ ತಂಡಕ್ಕೆ ನಿರ್ದೇಶಕ ಪ್ರದೀಪ್ ಕೃಷ್ಣಮೂರ್ತಿ ಧನ್ಯವಾದ ತಿಳಿಸಿದರು.
“ದಿ ಲಾಸ್ಟ್ ಕೇಸ್” ಕಿರುಚಿತ್ರ ಚೆನ್ನಾಗಿದೆ. ಈ ತಂಡದಿಂದ ಆದಷ್ಟು ಬೇಗ ಹಿರಿತೆರೆಯಲ್ಲಿ ನಾನು ಚಿತ್ರವನ್ನು ನಿರೀಕ್ಷಿಸುತ್ತೇನೆ ಎಂದರು ಸತ್ಯ ಹೆಗಡೆ. ಕಿರುಚಿತ್ರ ತಂಡದ ಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು .
ಹಿರಿಯ ನಿರ್ದೇಶಕ ಚಿಂದೋಡಿ ಬಂಗಾರೇಶ್, ಸಾಹಿತಿ ಕವಿರಾಜ್ ಹಾಗೂ ಸಂಭಾಷಣೆಕಾರ ಮಾಸ್ತಿ ಮುಂತಾದ ಗಣ್ಯರು ಕಿರುಚಿತ್ರವನ್ನು ಶ್ಲಾಘಿಸಿದರು.
ವಾಸುದೇವ ಮೂರ್ತಿ ಕಥೆ ಬರೆದಿದ್ದು, ಗಿರೀಶ್ ಸಂಗೀತ ನೀಡಿದ್ದಾರೆ. ರಂಗನಾಥ್ ಛಾಯಾಗ್ರಹಣ ಹಾಗೂ ಉಜ್ವಲ್ ಸಂಕಲನ ಈ ಕಿರುಚಿತ್ರಕ್ಕಿದೆ. ರಮೇಶ್ ಪಂಡಿತ್, ಶಂಕರ್ ಅಶ್ವತ್ಥ್, ಪುನೀತ್ ಬಾಬು, ಪ್ರದೀಪ್ ಅಂಚೆ “ದಿ ಲಾಸ್ಟ್ ಕೇಸ್” ನಲ್ಲಿ ನಟಿಸಿದ್ದಾರೆ.