ಎಪ್ಪತ್ತರ ವಯಸ್ಸಿನಲ್ಲೂ ಇಪ್ತತ್ತರ ಯುವಕನ ಉತ್ಸಾಹ ಹೊಂದಿರುವ, ತಮ್ಮ ಕಾಮಿಡಿ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಬಿರಾದಾರ್ ನಾಯಕನಾಗಿ ಅಭಿನಯಿಸಿರುವ ಚಿತ್ರ “90 ಬಿಡಿ ಮನೀಗ್ ನಡಿ”. ಇದು ಅವರ ನಟನೆಯ 500ನೇ ಚಿತ್ರವೂ ಹೌದು.
ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ ಅರೆಹೊಳೆ ಕಥೆ ಬರೆದು, ಜಂಟಿಯಾಗಿ ನಿರ್ದೇಶಿಸಿರುವ ಈ ಚಿತ್ರಕ್ಕೆ ರತ್ನಮಾಲ ಬಾದರದಿನ್ನಿ ನಿರ್ಮಾಪಕರು.
ಉತ್ತಮ ಸಂದೇಶ ಹೇಳುವಂತ ಕಥಾಹಂದರವನ್ನಿಟ್ಟುಕೊಂಡು ಉತ್ತರ ಕರ್ನಾಟಕ ಶೈಲಿಯಲ್ಲಿ ಕಥೆ ಹೇಳಲು ಹೊರಟ್ಟಿದ್ದೇವೆ. 80 ಭಾಗದಷ್ಟು ಸಂಭಾಷಣೆ ಉತ್ತರ ಕರ್ನಾಟಕ ಶೈಲಿಯಲ್ಲಿರುತ್ತದೆ. ಹಾಗಾಗಿ ನಮಗೆ ಉತ್ತರ ಕರ್ನಾಟಕದ ಕಲಾವಿದನೇ ಬೇಕಾಗಿತ್ತು. ಆಗ ಬಿರಾದಾರ್ ಅವರನ್ನು ಆಯ್ಕೆ ಮಾಡಿಕೊಂಡೆವು. ಅವರ 500 ನೇ ಚಿತ್ರವನ್ನು ನಿರ್ದೇಶಿಸುತ್ತಿರುವುದು ಸಂತೋಷವಾಗಿದೆ ಎನ್ನುತ್ತಾರೆ ನಿರ್ದೇಶಕರಾದ ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ ಅರೆಹೊಳೆ.
500ಚಿತ್ರಗಳಲ್ಲಿ ಅಭಿನಯಿಸಿದ್ದಿನೆಂದರೆ ಅದಕ್ಕೆ ರಂಗಭೂಮಿ ಹಾಗೂ ಚಿತ್ರರಂಗದವರ ಪ್ರೋತ್ಸಾಹವೇ ಕಾರಣ. ಈ ಚಿತ್ರದಲ್ಲಿ
ಊದಿನ ಕಡ್ಡಿ ಮಾರುವವನ ಪಾತ್ರ ನನ್ನದು. ನನಗೆ ಕುಡಿತದ ಚಟ ಇರುತ್ತದೆ. ಒಬ್ಬ ಹೆಂಗಸಿನ ಪರಿಚಯವಾಗುತ್ತದೆ. ಆನಂತರ ಸಾಕಷ್ಟು ತಿರುವುಗಳಿರುತ್ತದೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ನಾಟಕದಲ್ಲಿ ಹಾಗೋಹೀಗೋ ಕುಣಿಯುತ್ತಿದ್ದೆ. ಈ ಚಿತ್ರದಲ್ಲಿ ಹಾಡೊಂದಕ್ಕೆ ಪೂರ್ಣಪ್ರಮಾಣದಲ್ಲಿ ನೃತ್ಯ ಮಾಡಿದ್ದೇನೆ. ಭೂಷಣ್ ಮಾಸ್ಟರ್ ಮಾಡಿಸಿದ್ದಾರೆ. ಈ ಹಾಡನ್ನು ನಟ ಶರಣ್ ಮೆಚ್ಚಿಕೊಂಡಿದ್ದಾರೆ ಎಂದು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ವೈಜನಾಥ್ ಬಿರಾದಾರ್ ವಿವರಿಸಿದರು.
ವೃತ್ತಿ ರಂಗಭೂಮಿಯಲ್ಲಿ ಚಿಕ್ಕ ವಯಸ್ಸಿನಿಂದ ನಾಟಕ ಮಾಡಿಕೊಂಡು ಬಂದಿದ್ದೀನಿ. ಮೊದಲ ಬಾರಿಗೆ ಬಿರಾದಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದೀನಿ. ಈ ಚಿತ್ರದಲ್ಲಿ ವೇಶ್ಯೆ ಪಾತ್ರ ಮಾಡಿದ್ದೇನೆ. ನಾಯಕನನ್ನು ದುಶ್ಚಟಗಳಿಂದ ದೂರ ಮಾಡುತ್ತೇನೆ ಎಂದು ನಾಯಕಿ ನೀತಾ ಪಾತ್ರದ ಬಗ್ಗೆ
ಹೇಳಿದರು.
ಬಿರಾದಾರ್ ಅವರಲ್ಲಿ ವಿಶೇಷ ಶಕ್ತಿ ಇದೆ.ಈ ವಯಸ್ಸಿನಲ್ಲಿ ಅವರು ಈ ರೀತಿ ನೃತ್ಯ ಮಾಡಿದ್ದು ನೋಡಿ ಕಣ್ಣೀರು ಬಂತು. ನನ್ನದು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಎಂದರು ನಟ ಧರ್ಮ.
500ನೇ ಸಿನಿಮಾ ಆದರೂ ಮೊದಲ ಚಿತ್ರದ ಹುಮ್ಮಸಿನಲ್ಲಿ ಬಿರಾದಾರ್ ಅಭಿನಯಿಸಿದ್ದಾರೆ. ಉತ್ತರ ಕರ್ನಾಟಕ ಸೊಗಡಿನ ಚಿತ್ರ. ನಾನು ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ ಎಂದು ಕರಿಸುಬ್ಬು ತಿಳಿಸಿದರು.
ಹಾಡನ್ನು ಬರೆದು ಸಂಗೀತ ನೀಡಿರುವ ಶಿವು ಭೇರಗಿ, ಗಾಯಕ ರವೀಂದ್ರ ಸೊರಗಾವಿ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ವೀರ ಸಮರ್ಥ್ ಚಿತ್ರದ ಕುರಿತು ಮಾತನಾಡಿದರು.