ಸಿನಿಮಾ ಅನ್ನೋದೇ ಒಂದು ಅದ್ಭುತ ಪ್ರಕ್ರಿಯೆ. ಬೆಳಕಲ್ಲಿ ಚಿತ್ರೀಕರಿಸಿ ಕತ್ತಲಲ್ಲಿ ತೋರಿಸುವ ಅನನ್ಯ ಅನುಭವ. ಸಿನಿಮಾವನ್ನೇ ಧ್ಯಾನಿಸಿ ಅಂದುಕೊಂಡಿದ್ದನ್ನು ತೆರೆಯ ಮೇಲೆ ತೋರಿಸಿ ಖುಷಿಪಡುವ ಮನಸ್ಸುಗಳಿಗೆ ಇಲ್ಲಿ ಲೆಕ್ಕವಿಲ್ಲ. ಅಂತಹ ಪ್ರತಿಭಾವಂತರನ್ನು ಗುರುತಿಸಿ, ಗೌರವಿಸುವ ಪ್ರಯತ್ನ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಂದರೆ, ಚಿತ್ರೋತ್ಸವಗಳಲ್ಲಿ ತಮ್ಮ ಸಿನಿಮಾಗಳನ್ನು ತೋರಿಸಿ ಪ್ರಶಂಸೆ ಪಡೆಯುವ, ಮೆಚ್ಚುಗೆಯನ್ನು ಪಡೆಯುವ ಮನಸ್ಸುಗಳಿಗೆ ಪ್ರೋತ್ಸಾಹಿಸುವ ಸಿನಿಮಂದಿ ಅನೇಕ. ಅಂತಹ ಚಿತ್ರೋತ್ಸವದ ವೇದಿಕೆ ಹುಟ್ಟು ಹಾಕಿ ಪ್ರತಿಭಾವಂತರಿಗೊಂದು ಮನ್ನಣೆ ಕೊಡಬೇಕೆಂಬ ಉದ್ದೇಶದಿಂದ ಕನ್ನಡಿಗರಿಬ್ಬರು ದೂರದ ಮುಂಬೈನಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಸಲು ಮುನ್ನುಡಿ ಬರೆದಿದ್ದಾರೆ
ಹೌದು, ಹಲವು ವೈಶಿಷ್ಟ್ಯತೆಗಳ ಮೂಲಕ ತಯಾರಾಗುತ್ತಿರುವ ‘ಮುಂಬಾಯಿಂಡಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲೋಗೋ (ಲಾಂಛನ) ಬಿಡುಗಡೆ ಸಮಾರಂಭ ಇತ್ತೀಚೆಗೆ ಮುಂಬೈನ ಅಂಧೇರಿಯಲ್ಲಿರುವ ಫನ್ ರಿಪಬ್ಲಿಕ್ ನಲ್ಲಿ ಸಕ್ಸಸ್ ಫಿಲ್ಮ್ಸ್ ನ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿದೆ.
ಅಂತಾರಾಷ್ಟ್ರೀಯ ಖ್ಯಾತ ಪಾಪ್ ಅವರ ಗಾಯಕಿ ಶರನ್ ಪ್ರಭಾಕರ್ ಮತ್ತು ಕನ್ನಡಿಗ ಸುಧೀರ್ ಅತ್ತಾವರ್ ರವರ ಕನಸಿ ಕೂಸಿಗೆ ಮತ್ತೊಬ್ಬ ಕನ್ನಡಿಗ ಹಾಗೂ ನಿರ್ಮಾಪಕ ತ್ರಿವಿಕ್ರಮ್ ಬೆಳ್ತಂಗಡಿ, ಹಾಲಿವುಡ್, ಫ಼್ರೆಂಚ್ ಮತ್ತು ಬಾಲಿವುಡ್ ನ ಖ್ಯಾತ ಕೋರಿಯೋಗ್ರಾಫರ್ ಮತ್ತು ಬಾಲ್ ಡಾನ್ಸರ್ ಸಂದೀಪ್ ಸೋಪರ್ಕರ್ ಜೊತೆಗೆ ದೇಶಾದ್ಯಂತ ಹರಡಿರುವ “ವೀ”( W E E ) ಕಮ್ಯೂನಿಟಿ ಯ ಮುಖ್ಯಸ್ಥೆ ಚೈತಾಲಿ ಚಟರ್ಜಿ ಈ ಚಿತ್ರೋತ್ಸವದ ಸಂಸ್ಥಾಪಾಕರಾಗಿ ಕೈ ಜೋಡಿಸಿರುವುದು ವಿಶೇಷ.
ಜನವರಿ ಎರಡನೇ ವಾರದಲ್ಲಿ ಆರು ವಿಭಾಗಗಳಲ್ಲಿ ಐದು ದಿನಗಳ ಕಾಲ ನಡೆಯಲಿರುವ ಚಿತ್ರೋತ್ಸವದಲ್ಲಿ ಶರನ್ ಪ್ರಭಾಕರ್ ರವರ ಪತಿ ಹಾಗೂ ದೇಶದ ಸುಪ್ರಸಿದ್ದ “ಆಡ್ ಫಿಲ್ಮ್ ಮೇಕರ್ ” ಪದ್ಮಶ್ರೀ ವಿಜೇತ ಆಲೆಕ್ ಪದಂಸಿ ಅವರ ನೆನಪಿನಾರ್ಥ ಮೊದಲ ಬಾರಿಗೆ “ಮಿಫ್ ” ಚಿತ್ರೋತ್ಸವದಲ್ಲಿ ಜಾಹಿರಾತು ಚಿತ್ರಗಳ ಪ್ರದರ್ಶನವಿದೆ. ಉಳಿದಂತೆ ಎಲ್ ಜಿ ಬಿ ಟಿ ( LGBT) ಕಮ್ಯೂನಿಟಿ ಸಂಬಂಧಿಸಿದ ಚಿತ್ರಗಳು, ಮಹಿಳಾ ನಿರ್ದೇಶಕಿಯರ ಸಿನಿಮಾಗಳು, ಮರಾಠಿ ಸಿನಿಮಾಗಳು, ಫಿಲ್ಮ್ ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿಗಳ ಸಿನಿಮಾ ಹಾಗು ವರ್ಲ್ಡ್ ಸಿನಿಮಾ ಚಿತ್ರೋತ್ಸವದಲ್ಲಿರಲಿವೆ.
ಶರೋನ್ ಪ್ರಭಾಕರ್, ಸುಧೀರ್ ಅತ್ತಾವರ್ ಹಾಗೂ ಸಂದೀಪ್ ಸೋಪರ್ಕರ್ ರವರು ಚಿತ್ರೋತ್ಸವದ ರೂಪುರೇಷೆ ಬಗ್ಗೆ ವಿವರಿಸಿದ್ದಾರೆ. ಈ ಸಿನಿಮಾ ಉತ್ಸವ ಇತರ ಚಿತ್ರೋತ್ಸವಗಳಿಗಿಂತ ಹೇಗೆ ಭಿನ್ನವಾಗಿರುತ್ತದೆ ಎನ್ನುವುದನ್ನು ಸಹ ಹೇಳಿದ್ದಾರೆ.
ಮುಂಬಾದೇವಿ ದೇವಸ್ಥಾನದಿಂದ “ಮುಂಬಾಯಿ” ಹೆಸರು ಬಂದಿರುವುದರಿಂದ ಆ ದೇವಿ “ಮುಂಬಾ” ಹೆಸರನ್ನೇ ಈ ಚಿತ್ರೋತ್ಸವಕ್ಕೆ ಇಡಲಾಗಿದ್ದು ಅದೇ “ಮುಂಬಾಯಿಂಡಿಯಾ” ಎಂದು ತಮ್ಮ ಚಿತ್ರೋತ್ಸವದ “ಲೋಗೋ ಲಾಂಚ್” ಬಳಿಕ ಈ ಚಿತ್ರೋತ್ಸವದ ಹೆಸರಿನ ಕುರಿತ ವಿವರಣೆಯನ್ನು ಸುಧೀರ್ ಅತ್ತಾವರ್ ನೀಡಿದರು.
ಅಂದಿನ ಕಾರ್ಯಕ್ರಮಕ್ಕೆ ಬಾಲಿವುಡ್ ನ ಹಲವಾರು ಗಣ್ಯರು ಆಗಮಿಸಿದ್ದು, ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ನಡೆಯುತ್ತಿರುವ ಲಾಭಿ ಮತ್ತು ರಾಜಕೀಯ ಬಗ್ಗೆ ಅಗಲಿದ ಖ್ಯಾತ ಬಾಲಿವುಡ್ ನಟ ಓಂಪುರಿಯವರ ಪತ್ನಿ ಅಂತಾರಾಷ್ಟ್ರೀಯ ಖ್ಯಾತಿಯ ನಂದಿತಾ ಓಂ ಪುರಿಯವರು ತೀಕ್ಷ್ಣವಾಗಿ ಖಂಡಿಸಿ, ಈ ಚಿತ್ರೋತ್ಸವವು ಸ್ಪಷ್ಟ ಹಾಗೂ ಸ್ವಚ್ಚ ಇಮೇಜಿನಿಂದ ಕೂಡಿಬರಲಿ ಎಂದು ಶುಭ ಹಾರೈಸಿದರು.
ಸಕ್ಸಸ್ ಫಿಲ್ಂಸ್ ನ ವಿದ್ಯಾಧರ್ ಶೆಟ್ಟಿ ಕಾರ್ಯಕ್ರಮ ವ್ಯವಸ್ಥೆಗೊಳಿಸಿದ್ದರು.