ಚಿತ್ರ ವಿಮರ್ಶೆ
ನಿರ್ದೇಶಕ: ಜಾಕಿ
ನಿರ್ಮಾಪಕ : ಟಿ.ಆರ್.ಚಂದ್ರಶೇಖರ
ತಾರಾಗಣ: ಅಜೇಯ್ ರಾವ್, ಸಂಜನಾ ಆನಂದ್, ಅರುಣ ಬಾಲರಾಜ್, ಶರತ್ ಲೋಹಿತಾಶ್ವ, ಗಿರಿ, ಪ್ರಮೋದ್ ಶೆಟ್ಟಿ ಇತರರು.
ಅವನಿಗೆ ಲವ್ ಮಾಡಿದ ಹುಡುಗಿಯರ ಲೆಕ್ಕ ಸಿಕ್ಕಿಲ್ಲ. ಆದರೂ ಅವನನ್ನ ಒಬ್ಭ ಹುಡುಗಿಯೂ ಲವ್ ಮಾಡಲ್ಲ! ಊರಲೆಲ್ಲ ಓಡಾಡೋ ಹುಡುಗಿಯರ ಹಿಂದಿಂದೆ ಅಲೆದಾಡೋ ‘ಶೋಕಿ’ ಹುಡುಗನಿಗೆ ಒಬ್ಬ ಹುಡುಗಿ ಕಣ್ಣಿಗೆ ಬೀಳ್ತಾಳೆ. ಅವಳೇ ನನ್ ಲೈಫು ಅಂತ ಖುಷಿ ಪಡುವ ಅವನ ಲೈಫಲ್ಲಿ ಒಂದಷ್ಟು ಘಟನಾವಳಿಗಳು ನಡೆದು ಹೋಗುತ್ತವೆ. ಆ ಘಟನೆಗಳೆಲ್ಲ ಏನು ಅನ್ನೋದೇ ಶೋಕಿವಾಲನ ಹೈಲೈಟ್.
ಇದೊಂದು ಹಳ್ಳಿ ಕಥೆ. ಅದರಲ್ಲೂ ಹಳ್ಳಿ ಹೈದರಿಗೆ ಖುಷಿಪಡಿಸೋ ಸಿನಿಮಾ. ಸ್ವಲ್ಪ ಕ್ಲಾಸು,ಫುಲ್ಲು ಮಾಸು ಇರೋ ಕಥೆಯಲ್ಲಿ ನೂರೆಂಟು ಟ್ವಿಸ್ಟ್ ಗಳಿವೆ. ಇಲ್ಲಿ ಗೆಳೆತನ, ಪ್ರೀತಿ, ತಾಯಿ ಸೆಂಟಿಮೆಂಟ್, ಕಚಗುಳಿ ಇಡುವ ಹಾಸ್ಯ, ಅಲ್ಲಲ್ಲಿ ಭಾವುಕತೆ ಹೆಚ್ಚಿಸುವ ಅಂಶಗಳು ನೋಡುಹರನ್ನು ಖುಷಿಪಡಿಸುತ್ತವೆ. ಹಾಗಾಗಿ ಶೋಕಿವಾಲ ಒಬ್ಬ ಪಕ್ಕಾ ಪ್ರೀತಿವಾಲ ಅನ್ನೋದನ್ನ ಇಲ್ಲಿ ಕಾಣಬಹುದು.
ಮೊದಲರ್ಧ ಕಥೆ ಸರಾಗವಾಗಿಯೇ ಸಾಗುತ್ತೆ. ದ್ವಿತಿಯಾರ್ಧ ಅಲ್ಲಲ್ಲಿ ಗೊಂದಲಕ್ಕೀಡು ಮಾಡಿದರೂ ಆಗಾಗ ಕಾಣ ಸಿಗುವ ಹಾಡುಗಳು ಆ ಗೊಂದಲಕ್ಕೆ ತೆರೆ ಎಳೆಯುತ್ತವೆ. ಕಥೆಯಲ್ಲಿ ಹೇಳುವಂತಹ ಹೊಸತನವೇನೂ ಇಲ್ಲ. ಆದರೆ, ನಿರೂಪಣೆಯಲ್ಲೊಂದಷ್ಟು ತಾಕತ್ತು ಕಾಣಬಹುದು. ಕೆಲವು ಕಡೆ ಚಿತ್ರಕಥೆ ಧಮ್ ಕಳೆದುಕೊಂಡಿದೆ. ಇನ್ನೂ ಕೆಲವು ಕಡೆ ಗೆಳೆಯರ ಹಾಸ್ಯ ಆ ಧಮ್ ಗೆ ಹೆಗಲು ಕೊಟ್ಟಿದೆ. ಇಡೀ ಸಿನಿಮಾದಲ್ಲಿ ಎಲ್ಲವೂ ಅದ್ಧೂರಿ. ಒಂದು ಹಳ್ಳಿಯಲ್ಲಿ ನಡೆಯುವ ಚಿತ್ರಣವನ್ನು ಹಾಗೆಯೇ ಉಣಬಡಿಸುವ ಪ್ರಯತ್ನವನ್ನು ನಿರ್ದೇಶಕ ಜಾಕಿ ಮಾಡಿದ್ದಾರೆ. ಒಟ್ಟಾರೆ ಇಲ್ಲಿ ಮನರಂಜನೆ ಜೊತೆಗೊಂದು ಸಣ್ಣ ಸಂದೇಶವೂ ಇದೆ. ಉಢಾಳ ಮಗನೊಬ್ಬನ ವಿಪರೀತ ಶೋಕಿ, ಧೈರ್ಯ, ಪ್ರೀತಿ ಗೀತಿ ಇತ್ಯಾದಿ ಸಿನಿಮಾದ ಆಕರ್ಷಣೆ.
ಕಥೆ ಬಗ್ಗೆ ಹೇಳುವುದಾದರೆ, ಅದೊಂದು ಹಳ್ಳಿ. ಅಲ್ಲೊಬ್ಬ ಶೋಕಿವಾಲ. ಹೆಸರು ಕೃಷ್ಣ. ಅವನಿಗೆ ಹುಡುಗಿಯರ ಹಿಂದೆ ಹೋಗೋ ಖಯಾಲಿ. ಅಂದರೆ ಲವ್ ಮಾಡೋ ಶೋಕಿ. ಆದರೆ ಅವನಿಗೆ ಯಾವ ಹುಡುಗಿಯೂ ಕ್ಯಾರೆ ಅನ್ನಲ್ಲ. ಅಂತಹ ಹೊತ್ತಲ್ಲೇ ಊರ ಗೌಡನ ಮಗಳೊಬ್ಬಳು ಆ ಕೃಷ್ಣನ ಕಣ್ಣಿಗೆ ಬೀಳ್ತಾಳೆ. ಅದೇ ಶೋಕಿಯಲ್ಲೇ ಅವನು ಗೌಡನ ಮಗಳನ್ನು ಒಲಿಸಿಕೊಳ್ಳೋಕೆ ನಾನಾ ರೀತಿ ಕಸರತ್ತು ಮಾಡ್ತಾನೆ. ಕೊನೆಗೆ ಆಕೆ ಅವನ ಲವ್ ಗೆ ಜೈ ಅಂತಾಳೆ. ಅವರಿಬ್ಬರು ಮದುವೆಯನ್ನೂ ಆಗ್ತಾರೆ. ಹಾಗಂತ, ಆ ಗೌಡ ತನ್ನ ಮಗಳನ್ನು ರಾತ್ರೋ ರಾತ್ರಿ ಕರೆದೊಯ್ದು ಮದುವೆ ಆಗುವ ಆ ಶೋಕಿವಾಲನನ್ನು ಸುಮ್ಮನೆ ಬಿಡ್ತಾನಾ? ಇದು ಮುಂದೆ ಸಾಗುವ ಇಂಟ್ರೆಸ್ಟಿಂಗ್ ಸ್ಟೋರಿ. ಆ ಕುತೂಹಲ ಇದ್ದರೆ, ಒಮ್ಮೆ ಶೋಕಿವಾಲನ ಶೋಕಿ ನೋಡಬಹುದು.
ಕಥೆಯಲ್ಲಿ ಒಂದಷ್ಟು ತಿರುವುಗಳಿವೆ. ಬದುಕಿನ ಪಾಠವೂ ಇದೆ. ಪ್ರೀತಿ ಸುಲಭವಲ್ಲ ಅನ್ನುವ ಸಂದೇಶವೂ ಇದೆ. ಗೆಳೆಯರ ಸಾಥ್ ಹೇಗಿರಬೇಕು ಅನ್ನುವುದನ್ನೂ ನಿರ್ದೇಶಕರಿಲ್ಲಿ ತೋರಿಸಿಕೊಟ್ಟಿದ್ದಾರೆ. ಒಟ್ಟಾರೆ ಇಲ್ಲಿ ಇನ್ನೊಂದು ವಿಷಯ ಪ್ರಸ್ತಾಪ ಮಾಡಲೇಬೇಕು ಅದು ಸಂಗೀತ ಮತ್ತು ಸಾಹಿತ್ಯ. ಹಾಡು ಹಾಗು ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಶ್ರೀಧರ್ ವಿ.ಸಂಭ್ರಮ್ ಅವರ ಕೀ ಬೋರ್ಡ್ ಇಲ್ಲಿ ಸದ್ದು ಮಾಡಿದೆ. ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ ಕೂಡ ಚಿತ್ರದ ಮತ್ತೊಂದು ಹೈಲೈಟ್.
ಅಜೇಯ್ ರಾವ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಶೋಕಿವಾಲನಾಗಿ ಇಷ್ಟವಾಗುತ್ತಾರೆ. ಎಂದಿಗಿಂತಲೂ ಇಲ್ಲಿ ಡ್ಯಾನ್ಸ್ ಮತ್ತು ಫೈಟ್ ನಲ್ಲಿ ಗಮನ ಸೆಳೆಯುತ್ತಾರೆ. ಸಂಜನಾ ಆನಂದ್ ಮುದ್ದಾಗಿ ಕಾಣುತ್ತಾರೆ ಬಿಟ್ಟರೆ ಡ್ಯಾನ್ಸ್ ನಲ್ಲಿ ಹಿಂದೆ ಉಳಿದಿಲ್ಲ. ನಟನೆಯಲ್ಲಿನ್ನೂ ಧಮ್ ಕಟ್ಟಬೇಕಿತ್ತು. ಉಳಿದಂತೆ ಇಲ್ಲಿ ಅರುಣ ಬಾಲರಾಜ್ ಅಮ್ಮನಾಗಿ ಇಷ್ಟ ಆಗುತ್ತಾರೆ. ಶರತ್ ಲೋಹಿತಾಶ್ವ ಅವರೂ ಸಿಕ್ಕ ಪಾತ್ರಕ್ಕೆಮೋಸ ಮಾಡಿಲ್ಲ. ನಾಗರಾಜಯ್ಯ, ಗಿರಿ, ಪ್ರಮೋದ್, ಸುಧಾಕರ್ ಎಲ್ಲರೂ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ನವೀನ್ ಅವರ ಕ್ಯಾಮೆರಾ ಕೈಚಳಕ ಹಳ್ಳಿಯ ಸೊಬಗನ್ನು ಹೆಚ್ಚಿಸಿದೆ.