ಕನ್ನಡದಲ್ಲಿ ದಿನ ಕಳೆದಂತೆ ಹೊಸ ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಇಲ್ಲಿ ನೂರಾರು ಆಸೆ-ಆಕಾಂಕ್ಷೆ ಹೊತ್ತು ಬರುವ ಪ್ರತಿಭಾವಂತರಿಗೇನೂ ಕಮ್ಮಿ ಇಲ್ಲ. ಅದೆಷ್ಟೋ ಪ್ರತಿಭೆಗಳು ಇಲ್ಲಿ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಆ ಸಾಲಿಗೆ ಈಗ ಹೊಸ ಪ್ರತಿಭೆಯೊಂದು ಸೇರಿದೆ. ಹೌದು, ರಜನಿ ಎಂಬ ನಟಿ ಈಗ ಕನ್ನಡದಲ್ಲಿ ಗಟ್ಟಿ ನೆಲೆ ಕಾಣಬೇಕು ಎಂಬ ಕನಸು ಹೊತ್ತು ಬಂದಿದ್ದಾರೆ. ಆ ನಿಟ್ಟಿನಲ್ಲೀಗ ಒಂದಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಸಿಕ್ಕಿದೆ. ಅಂದಹಾಗೆ, ಯಾರು ಈ ರಜನಿ? ಎಲ್ಲಿಯವರು? ಅವರ ಹಿನ್ನೆಲೆ ಏನು ಇತ್ಯಾದಿ ಕುರಿತು ಒಂದು ರೌಂಡಪ್…
ರಜನಿ ಈಗಷ್ಟೇ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿರುವ ಬೆಡಗಿ. ಈ ಹುಡುಗಿಗೆ ತಾನೊಬ್ಬ ನಟಿ ಅನ್ನುವುದಕ್ಕಿಂತ ಒಬ್ಬ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕೆಂಬ ಬಯಕೆ. ಈವರೆಗೆ ಈ ಹುಡುಗಿ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. “ರೂಮ್ ಬಾಯ್”, “ಓಟ” ಮತ್ತು “ಒಂದಕ್ಕೆ ಮೂರು” ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ “ಓಟ” ಕನ್ನಡ ಮತ್ತು ತಮಿಳು ಭಾಷೆಯಲ್ಲಿ ತಯಾರಾಗುತ್ತಿದೆ. ತಮ್ಮ ಸಿನಿಮಾ ಎಂಟ್ರಿ ಕುರಿತು ರಜನಿ ಹೇಳುವುದಿಷ್ಟು.
“ನಾನು ಮೂಲತಃ ಬೆಂಗಳೂರಿನವಳು. ಬಯೋಕೆಮಿಸ್ಟ್ರಿ ಓದಿದ್ದೇನೆ. ಸಿನಿಮಾ ಮೇಲೆ ಇನ್ನಿಲ್ಲದ ಒಲವಿತ್ತು. ಆದರೆ, ಸಿನಿಮಾಗೆ ಹೇಗೆ ಹೋಗಬೇಕೆಂಬುದು ಗೊತ್ತಿರಲಿಲ್ಲ. ಸಿನಿಮಾ ನೋಡುವ ಅಭ್ಯಾಸ ಹೆಚ್ಚಾಗಿತ್ತು. ಒಮ್ಮೆ ನನ್ನ ಇನ್ಸ್ಟಾಗ್ರಾಂನಲ್ಲಿ ಒಂದು ಫೋಟೋ ಪೋಸ್ಟ್ ಮಾಡಿದ್ದೆ. ಅದನ್ನು ನೋಡಿಯೇ ನನಗೆ ಸಿನಿಮಾಗೆ ಬರಲು ದಾರಿಯಾಯ್ತು. ಮೊದ ಮೊದಲು ಸಿನಿಮಾಗೆ ಹೇಗಪ್ಪಾ ಹೋಗೋದು ಅಂತ ಯೋಚಿಸುತ್ತಿದ್ದೆ. ಒಂದು ಫೋಟೋ ನನನ್ನು ಸಿನಿಮಾಗೆ ಎಂಟ್ರಿಯಾಗಲು ಅವಕಾಶ ಸಿಕ್ತುʼ ಎಂದು ಹೇಳುತ್ತಾರೆ ರಜನಿ.
ನಾನು ಯಾವ ನಟನಾ ತರಬೇತಿ ಪಡೆದಿಲ್ಲ. ಆದರೆ, ಸಿನಿಮಾಗಳನ್ನು ನೋಡಿ, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಬೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ. ಗೆಳೆಯರ ಮೂಲಕವೂ ಒಂದಷ್ಟು ಪ್ರಾಜೆಕ್ಟ್ಗಳು ಸಿಗುತ್ತಿವೆ. ಸಿನಿಮಾ ಮೇಲೆ ಅತಿಯಾದ ಪ್ರೀತಿ ಇದ್ದುದರಿಂದ ಹೇಗಾದರೂ ಮಾಡಿ ಎಂಟ್ರಿಕೊಡಬೇಕು ಅಂದುಕೊಳ್ಳುತ್ತಿರುವಾಗಲೇ, ನನ್ನದ್ದೊಂದು ಫೋಟೋ ಪೋಸ್ಟ್ನಿಂದಾಗಿ ನಾನು ಸಿನಿಮಾರಂಗ ಪ್ರವೇಶ ಮಾಡುವಂತಾಯ್ತು. ಸದ್ಯ ನನಗೆ ಸಿಕ್ಕ ಮೂರು ಪ್ರಾಜೆಕ್ಟ್ಗಳಲ್ಲೂ ಒಳ್ಳೆಯ ಪಾತ್ರಗಳಿವೆ. ರೂಮ್ ಬಾಯ್ ಸಿನಿಮಾ ವಿಶೇಷ ಪ್ರಯೋಗಾತ್ಮಕ ಸಿನಿಮಾ.
ಕಮರ್ಷಿಯಲ್ ಅಂಶಗಳೊಂದಿಗೆ ವಿಭಿನ್ನ ಕಥಾಹಂದರ ಹೊಂದಿದೆ. ಇನ್ನು ತಮಿಳು ಹಾಗು ಕನ್ನಡದಲ್ಲಿ ತಯಾರಾಗುತ್ತಿರುವ ಓಟ ಸಿನಿಮಾ ಕೂಡ ವಿಶೇಷತೆ ಹೊಂದಿದೆ. ಆ ಚಿತ್ರದಲ್ಲಿ ನಾನು ನೆಗೆಟಿವ್ ಪಾತ್ರ ಮಾಡಿದ್ದೇನೆ. ಇನ್ನು ಒಂದಕ್ಕೆ ಮೂರು ಸಿನಿಮಾದಲ್ಲಿ ಲೀಡ್ ರೋಲ್ ಇದೆ. ಒಂದಷ್ಟು ಹೊಸ ಸಿನಿಮಾಗಳ ಜೊತೆ ಮಾತುಕತೆ ನಡೆಯುತ್ತಿದೆ. ಇದಕ್ಕೂ ಮುನ್ನ ಹಲವು ಕಿರುಚಿತ್ರಗಳಲ್ಲೂ ನಟಿಸಿದ್ದೇನೆ. ಅವೆಲ್ಲವೂ ಸಿನಿಮಾಗಳಿಗೆ ಈಗ ಸಹಕಾರಿಯಾಗಿವೆ ಎನ್ನುತ್ತಾರೆ ರಜನಿ.
ನನಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವಾಸೆ. ಅದರಲ್ಲೂ ಚಾಲೆಂಜಿಂಗ್ ಪಾತ್ರಗಳು ನನಗಿಷ್ಟ. ಮಹಿಳಾ ಪ್ರಧಾನ ಕಥೆ ಇರುವ ಚಿತ್ರಗಳಲ್ಲಿ ನಟಿಸುವ ಆಸೆ ಇದೆ. ಅಂಥದ್ದೊಂದು ಅವಕಾಶವನ್ನು ಎದುರು ನೋಡುತ್ತಿದ್ದೇನೆ. ಯಾವುದೇ ಪಾತ್ರವಿರಲಿ, ನನಗೆ ಅದು ಗುರುತಿಸುವಂತಿರಬೇಕಷ್ಟೇ. ಸಿನಿಮಾ ಅನ್ನೋದು ಗ್ಲಾಮರಸ್ ಲೋಕ.
ಹಾಗಾಗಿ ನಾನು ಗ್ಲಾಮರ್ ಇರುವಂತಹ ಪಾತ್ರವನ್ನೂ ಮಾಡುತ್ತೇನೆ. ಹಾಗಂತ, ಅದು ವಲ್ಗರ್ ಆಗಿರಬಾರದು. ಒಳ್ಳೆಯ ಕಥೆ, ಪಾತ್ರವಿದ್ದರೆ, ನಾನು ನಿರ್ವಹಿಸಲು ರೆಡಿ. ಒಟ್ಟಾರೆ, ಸಿನಿಮಾದಲ್ಲಿ ಗಟ್ಟಿ ನೆಲೆ ಕಾಣುವ ಆಸೆ ಇದೆ. ಅದಕ್ಕಾಗಿ ನಾನೀಗ ಹೊಸ ಪ್ರಯೋಗಾತ್ಮಕ ಸಿನಿಮಾಗಳ ಜೊತೆ ಜೊತೆಯಲ್ಲಿ ವಿಭಿನ್ನ ಕಥೆ ಇರುವ ಸಿನಿಮಾಗಳಲ್ಲಿ ನಟಿಸಲು ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ರಜನಿ.