‘ಎದ್ದೇಳು ಮಂಜುನಾಥ’ ಅಂದಾಕ್ಷಣ, ನೆನಪಾಗೋದೇ ನವರಸ ನಾಯಕ ಜಗ್ಗೇಶ್ ಮತ್ತು ಗುರುಪ್ರಸಾದ್ ಅವರ ನಿರ್ದೇಶನ. ಈಗ “ಎದ್ದೇಳು ಮಂಜುನಾಥಾ 2” ಎಂಬ ಚಿತ್ರ ಬರುತ್ತಿದ್ದು, ಸದ್ದಿಲ್ಲದೆಯೇ ಚಿತ್ರೀಕರಣ ಮುಗಿದಿದೆ. ಈ ಚಿತ್ರದಲ್ಲಿ ಜಗ್ಗೇಶ್ ಅಭಿನಯಿಸಿಲ್ಲ. ಬದಲಾಗಿ ಗುರು ಪ್ರಸಾದ್ ಅವರೇ ನಿರ್ದೇಶನದೊಂದಿಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ರಚಿತಾ ಮಹಾಲಕ್ಷ್ಮಿ ಈ ಚಿತ್ರದ ನಾಯಕಿ. ಶರತ್ ಲೋಹಿತಾಶ್ವ, ಶಶಿಧರ್, ರವಿ ದೀಕ್ಷಿತ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
“ಎದ್ದೇಳು ಮಂಜುನಾಥ” ಚಿತ್ರದ ಸಮಯದಲ್ಲೇ ಸಿದ್ದವಾದ ಕಥೆಯಿದು. ಚಿತ್ರ ನಿರ್ಮಾಣವಾಗಲು ಹತ್ತು ವರ್ಷ ಬೇಕಾಯಿತು.
ಇದು ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣವಾದ ಚಿತ್ರ. ನಾವು ಒಂದಿಷ್ಟು ಜನ ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಇದರಲ್ಲಿ ರವಿ ದೀಕ್ಷಿತ್, ಮೈಸೂರು ರಮೇಶ್ ಸೇರಿ ಐವತ್ತಕ್ಕೂ ಅಧಿಕ ಜನ ಶೇರ್ ಹೋಲ್ಡರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನಿರ್ಮಾಪಕ ಶಶಿಧರ್ ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದಾರೆ . ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಲಿದ್ದೇವೆ. ಕಾಮಿಡಿ ಕ್ರೈಂ ಆಧಾರಿತ ಚಿತ್ರವಿದು. ಕ್ರೈಂ ಎಂದರೆ ಬರೀ ರಕ್ತದೋಕುಳಿ ಅಲ್ಲ. ಬೇರೊಂದು ರೀತಿಯಲ್ಲಿ ಹೇಳಬಹುದು ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ.
ಮುಂದೆ ನಾನು ಸಿನಿಮಾ ಮುಹೂರ್ತ ಮಾಡಬಾರದೆಂದು ನಿರ್ಧರಿಸಿದ್ದೇನೆ. ಏಕೆಂದರೆ ಕೆಲವು ನಿರ್ಮಾಪಕರು ಅದ್ದೂರಿ ಮುಹೂರ್ತ ಮಾಡಿ, ನಂತರ ಹಣ ಹೊಂದಿಸುವುದಿಲ್ಲ. ಆದರೆ ಗುರುಪ್ರಸಾದ್ ನಿಂದ ಸಿನಿಮಾ ಲೇಟ್ ಆಯ್ತು ಎನ್ನುತ್ತಾರೆ.
ಇದೆಲ್ಲಾ ನೋಡಿ ನಾನು, ಸ್ನೇಹಿತರ ತಂಡದ ಬಳಿ ನಾವೇ ಹಣ ಹಾಕಿ ಒಂದು ಚಿತ್ರ ಮಾಡೋಣ ಅಂದೆ.
ಅದರ ಮೊದಲ ಪ್ರಯತ್ನವೇ ಈ ಚಿತ್ರ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮನೋಹರ್ ಜೋಶಿ, ಸಿನಿಟಿಕ್ ಸೂರಿ, ವೇಲ್ ಮುರುಗನ್, ಅಶೋಕ್ ಸೇರಿ ನಾಲ್ಕು ಜನ ಛಾಯಾಗ್ರಾಹಕರು. ಸದ್ಯದಲ್ಲೇ ಟ್ರೇಲರ್ ಬರಲಿದೆ. ಏಪ್ರಿಲ್ ಅಂತ್ಯದಲ್ಲಿ ಓಟಿಟಿ ಅಥವಾ ಥಿಯೇಟರ್ ನಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರದ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು ಗುರುಪ್ರಸಾದ್.
ನಾನು ಹತ್ತುವರ್ಷಗಳಿಂದ ಕಿರುತೆರೆಯಲ್ಲಿದ್ದೀನಿ. ತಮಿಳಿನಲ್ಲಿ ಸಾಕಷ್ಟು ಕಾರ್ಯಕ್ರಮ ನಡೆಸಿಕೊಟ್ಟಿದ್ದೀನಿ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ʼಎದ್ದೇಳು ಮಂಜುನಾಥʼ ನನ್ನ ಇಷ್ಟದ ಚಿತ್ರ. ಎಷ್ಟು ಸಾರಿ ನೋಡಿದ್ದೇನೊ ಲೆಕ್ಕ ಇಲ್ಲ. ಈಗ ಅದೇ ಚಿತ್ರದ ಎರಡನೇ ಭಾಗದಲ್ಲಿ ನಾನೇ ನಾಯಕಿಯಾಗಿರುವುದು ನನ್ನ ಪುಣ್ಯ ಎಂದರು ನಾಯಕಿ ರಚಿತಾ ಮಹಾಲಕ್ಷ್ಮಿ. ಚಿತ್ರಕ್ಕೆ ಹಣ ಹೂಡಿರುವ ರವಿ ದೀಕ್ಷಿತ್ ಸಿನಿಮಾ ಸಾಗಿ ಬಂದ ಬಗ್ಗೆ ಮಾತನಾಡಿದರು. ಶಶಿಧರ್ ಪ್ರಚಾರದ ಬಗ್ಗೆ, ತಮ್ಮ ನಟನೆಯ ಕುರಿತು ಮಾಹಿತಿ ನೀಡಿದರು. ಚಿತ್ರತಂಡದ ಅನೇಕರು ಉಪಸ್ಥಿತರಿದ್ದರು.