ಕಿರುಚಿತ್ರಗಳ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಹೊರಟಿರುವ ಅನೇಕ ಪ್ರತಿಭಾವಂತರು ಕನ್ನಡ ಸಿನಿ ಜಗತ್ತಿನಲ್ಲಿದ್ದಾರೆ. ಈಗಾಗಲೇ ಅನೇಕ ಪ್ರತಿಭಾವಂತರು ಕಿರುಚಿತ್ರಗಳ ಮೂಲಕವೇ ತಮ್ಮ ಭವಿಷ್ಯ ಕಟ್ಟಿಕೊಂಡಿದ್ದಾರೆ. ಅಂತಹ ಯುವ ಪ್ರತಿಭೆಗಳನ್ನು ಗುರುತಿಸಿ, ಅವರ ಸಿನಿಮಾ ಮತ್ತು ಅವರೊಳಗಿರುವ ಅಗಾಧ ಪ್ರತಿಭೆಯನ್ನು ಹೊರತರುವಂತಹ ಪ್ರಯತ್ನ ಕಿರುಚಿತ್ರೋತ್ಸವಗಳ ಮೂಲಕ ನಡೆದಿದೆ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದಲೇ ಹಲವು ರಾಜ್ಯ ಮತ್ತು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಿರುಚಿತ್ರೋತ್ಸವಗಳು ನಡೆಯುತ್ತವೆ. ಪ್ರತಿ ವರ್ಷ ನಡೆಯುವ ಈ ಕಿರುಚಿತ್ರೋತ್ಸವಗಳ ಸಾಲಿಗೆ ಈಗ ಅವಾರ್ಡಿಯೊ ರಾಷ್ಟ್ರೀಯ ಕಿರುಚಿತ್ರೋತ್ಸವ ಕೂಡ ಸೇರಿದೆ.
ಹೌದು, ನವ ಪ್ರತಿಭೆಗಳಿಗೊಂದು ಹೊಸ ವೇದಿಕೆಯಾಗಿರುವ ಈ ಕಿರುಚಿತ್ರೋತ್ಸವದಲ್ಲಿ ಎಲ್ಲರಿಗೂ ಉತ್ತಮ ವೇದಿಕೆ ಕಲ್ಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳುವ ANSFF ಸಂಸ್ಥಾಪಕ ಹಾಗು ಸಿಇಓ ಲಿಖಿತ್ ರಘುವೀರ್, ” ನಾವು ಆರಂಭಿಸುವ ಈ ಕಿರುಚಿತ್ರೋತ್ಸವದಂತಹ ವೇದಿಕೆಗಳನ್ನು ಬಹಳಷ್ಟು ಕಂಪನಿಗಳು ಶುರುಮಾಡಿವೆ. ಆದರೆ, ಅವುಗಳಿಗಿಂತಲೂ ಭಿನ್ನವಾಗಿ ಮಾಡಬೇಕು, ಎಲ್ಲಾ ಪ್ರತಿಭೆಗಳನ್ನೂ ಪರಿಗಣಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು ಅನ್ನೋದು ನಮ್ಮ ಉದ್ದೇಶ. ಕೇವಲ ಅದು ಕಿರುಚಿತ್ರೋತ್ಸವ ಆಗಿ ಉಳಿಯದೆ, ಒಂದೊಳ್ಳೆಯ ಅನುಭವ ಕಟ್ಟಿಕೊಡುವ ಪ್ರಯತ್ನ ಮಾಡುತ್ತೇವೆ. ಎಲ್ಲಕ್ಕಿಂತಲೂ ಉತ್ತಮ ಸಂಬಂಧದ ಅರ್ಥ ಕಲ್ಪಿಸಿ, ಗೌರವಿಸುವ ಪ್ರಯತ್ನ ಮಾಡಲಾಗುತ್ತದೆ. ಹಲವು ಪ್ರತಿಭಾವಂತರ ಕನಸುಗಳನ್ನು ನನಸಾಗಿಸುವ ಸಣ್ಣ ಪ್ರಯತ್ನವಿದು.
ಇನ್ನು, ಈ ಕಿರುಚಿತ್ರೋತ್ಸವ ಯುವ ಪೀಳಿಗೆಯ ಚಲನಚಿತ್ರ ನಿರ್ಮಾಪಕರಿಗೆ ಮತ್ತೊಂದು ಅನನ್ಯ ವೇದಿಕೆಯೂ ಹೌದು. ಈ ಅವಾರ್ಡಿಯೊ ರಾಷ್ಟ್ರೀಯ ಕಿರುಚಿತ್ರೋತ್ಸವ ಬೆಂಗಳೂರಿನಲ್ಲೇ ನಡೆಯಲಿದೆ. ಕಿರುಚಿತ್ರೋತ್ಸವದಲ್ಲಿ ಖ್ಯಾತ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು ಆಗಮಿಸಲಿದ್ದಾರೆ. ಕಿರುಚಿತ್ರೋತ್ಸವದಲ್ಲಿ ನಿರ್ಮಾಪಕ, ನಿರ್ದೇಶಕರ ಜೊತೆ ಸಂವಾದ ಕಾರ್ಯಕ್ರಮವೂ ಇರಲಿದೆ. ಇನ್ನು, 2022 ರ ಏಪ್ರಿಲ್ 23 ಮತ್ತು 24 ರಂದು ಕಿರುಚಿತ್ರೋತ್ಸವ ನಡೆಯಲಿದೆ. ತಮ್ಮ ಕಿರುಚಿತ್ರಗಳನ್ನು ಮಾರ್ಚ್ 6ರ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲಿ ಶಾರ್ಟ್ ಫಿಲ್ಮ್, ಶಾರ್ಟ್ ಡಾಕ್ಯುಮೆಂಟರಿ ಮತ್ತು ಮ್ಯೂಸಿಕ್ ವಿಡಿಯೋ ಕೂಡ ನೋಂದಣಿ ಮಾಡಬಹುದಾಗಿದೆ. www.awardioevents.com ಈ ಮೇಲ್‌ಗೆ ನೋಂದಣಿಗ ಎಂದು ವಿವರ ಕೊಡುತ್ತಾರೆ ಲಿಖಿತ್ ರಘುವೀರ್.
ಅಂದಹಾಗೆ, ಈ ಕಿರುಚಿತ್ರೋತ್ಸವಕ್ಕೆ ಇಂಡಿಯನ್ ಫಿಲ್ಮ್ ಮೇಕರ್ಸ್ ಅಸೋಸಿಯೇಷನ್, ಮ್ಯೂಸಿಕ್ ಬಾಕ್ಸ್ ನ ಸ್ಕೈಲೈನ್ ದಿಲೀಪ್ ಸಾಥ್ ನೀಡಿದ್ದಾರೆ. ನಮ್ಮೊಂದಿಗೆ ಫಿಲ್ಮಾಹಾಲಿಕ್ ಫೌಂಡೇಶನ್ ಮತ್ತು ತಾಥಿ ಸಿನಿಮಾ ಪ್ರೊಡಕ್ಷನ್ಸ್ ಕೂಡ ಕೈ ಜೋಡಿಸಿದೆ. ಜನವರಿ 1, 2016 ರ ನಂತರ ಪೂರ್ಣಗೊಂಡ ಯಾವುದೇ ಕಿರುಚಿತ್ರಕ್ಕೆ ANSFF ಮುಕ್ತವಾಗಿದೆ. ತಮ್ಮ ಚಲನಚಿತ್ರವನ್ನು ANSFF ಗೆ ಸಲ್ಲಿಸುವುದು ಆಯ್ಕೆಯ ಗ್ಯಾರಂಟಿ ಅಲ್ಲ. ಎಲ್ಲಾ ವಿಜೇತರನ್ನು ನಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗುತ್ತದೆ. ಎಲ್ಲಾ ವಿಜೇತ ಚಿತ್ರಗಳಿಗೂ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
ಈ ಕಿರುಚಿತ್ರೋತ್ಸವ ಪ್ರತಿಯೊಬ್ಬ ನಟ,ನಿರ್ದೇಶಕ ಮತ್ತು ನಿರ್ಮಾಪಕ ಹಾಗು ಅವರ ತಂಡವನ್ನು ಸಮಾನವಾಗಿ ಪರಿಗಣಿಸುತ್ತದೆ. ಇನ್ನು, ಈ ಕಿರುಚಿತ್ರೋತ್ಸವದಲ್ಲಿ ಒಟ್ಟು 22 ವಿಭಾಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಅತ್ಯುತ್ತಮ ನಟ. ನಟಿ. ಅತ್ಯುತ್ತಮ ಕಥೆ. ಅತ್ಯುತ್ತಮ ಚಿತ್ರಕಥೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಚೊಚ್ಚಲ ಕಿರುಚಿತ್ರ ತಯಾರಕ, 2022 ರ ಅತ್ಯುತ್ತಮ ಅವಾರ್ಡಿಯೊ ಕಿರುಚಿತ್ರ ಸೇರಿದಂತೆ ಇತರೆ ವಿಭಾಗಳಲ್ಲೂ ಪ್ರಶಸ್ತಿ ವಿತರಿಸಲಾಗುತ್ತದೆ ಎಂದು ಕಿರುಚಿತ್ರೋತ್ಸವದ ಸಂಸ್ಥಾಪಕ ಲಿಖಿತ್ ರಘುವೀರ್ ಹೇಳಿದ್ದಾರೆ.