ಕನ್ನಡದ ಬಹುನಿರೀಕ್ಷೆಯ ಸಿನಿಮಾ ಅಂದರೆ ಈಗ ನೆನಪಾಗೋದೇ ಸುದೀಪ್ ಅಭಿನಯದ “ವಿಕ್ರಾಂತ್ ರೋಣ”. ಈ ಚಿತ್ರ ಇನ್ನೇನು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಆರಂಭದಿಂದಲೂ ಸುದ್ದಿ ಮಾಡುತ್ತಲೇ ಬಂದಿರುವ ಈ ಚಿತ್ರ ಈಗ ಮತ್ತೊಂದು ದೊಡ್ಡ ಸುದ್ದಿಗೂ ಕಾರಣವಾಗಿದೆ. ಹೌದು, ‘ವಿಕ್ರಾಂತ್ ರೋಣ’. ಪ್ಯಾನ್ ಇಂಡಿಯಾ ಚಿತ್ರ. ಶುರುವಾದಾಗಿಂದಲೂ ಈ ಚಿತ್ರಕ್ಕೆ ಬೇಡಿಕೆ ಇದೆ. ಈಗ ದಿನ ಕಳೆದಂತೆ ಆ ಬೇಡಿಕೆ ಇನ್ನೂ ಹೆಚ್ಚುತ್ತಿದೆ. ಈಗ ಹೊಸ ಸುದ್ದಿ ಅಂದರೆ, ಸ್ಯಾಟಲೈಟ್ ಹಾಗೂ ಓಟಿಟಿಯಿಂದ ಸುದೀಪ್ ಚಿತ್ರಕ್ಕೆ ಬಿಗ್ ಆಫರ್ ಬಂದಿದೆ. ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವಂತೆ ಎರಡು ಓಟಿಟಿ ಸಂಸ್ಥೆಗಳು ದೊಡ್ಡ ಮೊತ್ತದ ಆಫರ್ ನೀಡಿರುವುದು ವಿಶೇಷ. ಹಾಗೆ ನೋಡಿದರೆ, ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ಬೇಡಿಕೆ ಎನ್ನಬಹುದು.
ವಿಕ್ರಾಂತ್ ರೋಣ’ ಫೆಬ್ರವರಿ 24ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಅದಕ್ಕಾಗಿಯೇ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ಕೊರೊನಾ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಚಿತ್ರತಂಡ ಕೂಡ ಚಿತ್ರವನ್ನು ಬಿಡುಗಡೆ ಮಾಡಲು ಯೋಚಿಸುತ್ತಿದೆ. ಈ ನಡುವೆ, ಸಿನಿಮಾ ಓಟಿಟಿಯಲ್ಲಿ ರಿಲೀಸ್ ಮಾಡುತ್ತಾರಾ ಅಥವಾ ಇಲ್ಲವಾ ಎಂಬ ಪ್ರಶ್ನೆ ಎದ್ದಿದೆ.
ಈ ಚಿತ್ರ ಹಾಗೆ ನೋಡಿದರೆ, ಜನವರಿಯಲ್ಲಿ ಬಿಡುಗಡೆಯಾಗಬೇಕಿತ್ತು. ಇನ್ನೂ ಒಂದಷ್ಟು ಚಿತ್ರಗಳು ಬಿಡುಗಡೆಗೆ ರೆಡಿಯಾಗಿದ್ದರೂ, ಕೊರೊನಾ ಕಾರಣದಿಂದ ಮುಂದಕ್ಕೆ ಹೋಗುತ್ತಿವೆ. ಇದರಿಂದಾಗಿಯೇ ಓಟಿಟಿ ವ್ಯವಸ್ಥಾಪಕರು ಬಿಗ್ ಬಜೆಟ್ ಚಿತ್ರಗಳನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವಂತೆ ಕೇಳುತ್ತಿದ್ದು, ನೇರ ಓಟಿಟಿ ರಿಲೀಸ್ ಮಾಡಲು ೯೦ ರಿಂದ ೧೦೦ ಕೋಟಿ ಆಫರ್ ನೀಡಿವೆ ಎನ್ನಲಾಗಿದೆ. ಈ ಕುರಿತಂತೆ, ನಿರ್ಮಾಪಕ ಜಾಕ್ ಮಂಜು ಹೇಳುವುದೇನು ಗೊತ್ತಾ?
ಸದ್ಯ ಈ ಬೇಡಿಕೆಗೆ ಗಮನಹರಿಸಿಲ್ಲ. ಅದಕ್ಕೆ ಕಾರಣ, ಕಳೆದ ಮೂರು ವರ್ಷಗಳಿಂದಲೂ ನಾವು ಕಷ್ಟಪಟ್ಟು ಗುಣಮಟ್ಟದ ಚಿತ್ರ ಮಾಡಿದ್ದೇವೆ. ೩ಡಿ ಕೂಡ ಮಾಡಲಾಗಿದೆ. ೩ಡಿ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಬೇಕು. ಈಗ ೩ನೇ ಅಲೆ ಸಮಸ್ಯೆ ಇದೆ. ಹೀಗಾಗಿ ಈ ಬೇಡಿಕೆ ಒಪ್ಪಬೇಕಾ ಇಲ್ಲವೋ ಎಂಬ ಗೊಂದಲವಿದೆ ಎಂದಿರುವ ಜಾಕ್ ಮಂಜು ಅವರಿಗೆ ಸುದೀಪ್ ಕೂಡ ಬೇಡ ನಾವು ಚಿತ್ರಮಂದಿರದಲ್ಲೇ ಬಿಡೋಣ ಎಂದಿದ್ದಾರೆ. ಇಷ್ಟೇ ದಿನ ಕಾದಿದ್ದೇವೆ. ಓಟಿಟಿಯಲ್ಲಿ ರಿಲೀಸ್ ಮಾಡೋದು ಬೇಡ ಎಂಬ ಸಲಹೆ ನೀಡಿದ್ದಾರೆ. ಅದೇನೆ ಇರಲಿ, ಓಟಿಟಿಯಲ್ಲಿ ದೊಡ್ಡ ಮೊತ್ತಕ್ಕೆ ಕೇಳುತ್ತಿದ್ದಾರೆ ಎಂಬ ಖುಷಿ ನನಗಿದೆ ಎಂಬುದು ಜಾಕ್ ಮಂಜು ಮಾತು.
ಸುದೀಪ್ ಅವರು ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಡಬ್ ಮಾಡಿದ್ದಾರೆ. ಎಲ್ಲಾ ಭಾಷೆಯಲ್ಲೂ 3ಡಿ ಮತ್ತು 2ಡಿಯಲ್ಲಿ ಬಿಡುಗಡೆಯಾಗುತ್ತೆ. ನಾವು ಎಲ್ಲಾ ಭಾಷೆಯಿಂದಲೂ ಸುಮಾರು 1500 ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಬೇಕು ಅಂದುಕೊಂಡಿದ್ದೇವೆ. ಫೆಬ್ರವರಿ 24ಕ್ಕೆ ‘ವಿಕ್ರಾಂತ್ ರೋಣ’ ರಿಲೀಸ್ ಮಾಡುವ ಯೋಚನೆ ನಿರ್ಮಾಪಕರಿಗಿದೆ. ಚಿತ್ರ ಈಗ ಸೆನ್ಸಾರ್ ಅಂಗಳಕ್ಕೆ ಹೋಗುವಂತಾಗಿದೆ.